ಶುಕ್ರವಾರ, ಮೇ 27, 2022
28 °C
ಪರ್ಯಾಯ ಮಹೋತ್ಸವ ಪೂರ್ವಭಾವಿಯಾಗಿ ನಡೆದ ಕಾರ್ಯಕ್ರಮ

ಕೃಷ್ಣಾಪುರ ಮಠದಲ್ಲಿ ಅಕ್ಕಿ ಮುಹೂರ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಮುಂದಿನ ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ನಡೆಯುವ ಮುಹೂರ್ತಗಳಲ್ಲಿ ಒಂದಾದ ಅಕ್ಕಿ ಮುಹೂರ್ತ ಬುಧವಾರ ಕೃಷ್ಣಾಪುರ ಮಠದಲ್ಲಿ ವಿದ್ಯಾಸಾಗರ ತೀರ್ಥ ಶ್ರೀಗಳ ನೇತೃತ್ವದಲ್ಲಿ ನೆರವೇರಿತು.

ಅಷ್ಠಮಠಗಳಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದಿರುವ ಪರ್ಯಾಯ ಮಹೋತ್ಸವದ ಪೂರ್ವಭಾವಿ ಸಂಪ್ರದಾಯದಂತೆ ಅಕ್ಕಿಮೂಹೂರ್ತ ನಡೆಯಿತು. ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಪಲಿಮಾರು ಮಠದ ಹಿರಿಯ ಯತಿ ವಿದ್ಯಾಧೀಶ ತೀರ್ಥರು, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥರು, ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥರು, ಪಲಿಮಾರು ಮಠದ ಕಿರಿಯ ಯತಿ ವಿದ್ಯಾರಾಜೇಶ್ವರ ತೀರ್ಥರು ಉಪಸ್ಥಿತರಿದ್ದರು. ಅಷ್ಠಮಠದ ಯತಿಗಳಿಗೆ  ಕೃಷ್ಣಾಪುರ ಮಠದಿಂದ ಗೌರವ ಸಮರ್ಪಣೆ ನಡೆಯಿತು.

ಸೋದೆ ಮಠದ ವಿಶ್ವವಲ್ಲಭ ಶ್ರೀಗಳು ಮಾತನಾಡಿ, ಉಡುಪಿಯಲ್ಲಿ ಕೃಷ್ಣನಿಗೆ ಗರ್ಭಗುಡಿಯಲ್ಲಿ ವೈಭವದಿಂದ ಪೂಜಾದಿಗಳು ನೆರವೇರುವಂತೆ, ಗರ್ಭಗುಡಿಯ ಹೊರಗೆ ಉತ್ಸವ, ಅನ್ನದಾನಗಳು ವಿಜೃಂಭಣೆಯಿಂದ ನಡೆಯುತ್ತವೆ. ಅನ್ನದಾನಕ್ಕೆ ವಿಶಿಷ್ಠ ಸ್ಥಾನವನ್ನು ಕೊಟ್ಟ‌ ಸ್ಥಳ ಉಡುಪಿ ಎಂದರು.

ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥರು ಮಾತನಾಡಿ, ‘ಹಸಿದು ಬಂದವರಿಗೆ ಅನ್ನ ಇಲ್ಲ ಎಂಬ ಸನ್ನಿವೇಶ ಇಂದಿನವರೆಗೂ ಮಠದಲ್ಲಿ ಬಂದಿಲ್ಲ. ಹೊಟ್ಟೆಯ ಹಸಿವು ಮಾತ್ರವಲ್ಲ, ಜಿಜ್ಞಾಸುಗಳ ಜ್ಞಾನದ ಹಸಿವನ್ನೂ ತಣಿಸಲು ಉಡುಪಿಯಲ್ಲಿ ನಿರಂತರ ಪಾಠ, ಪ್ರವಚನಾದಿಗಳು ನಡೆಯುತ್ತಿದೆ ಎಂದರು.

ಪೇಜಾವರ ಮಠದ‌ ವಿಶ್ವಪ್ರಸನ್ನ ತೀರ್ಥರು ಮಾತನಾಡಿ, ಭತ್ತ ಸೃಷ್ಟಿಯ ಸಂಕೇತ. ಭತ್ತದ ಹೊಟ್ಟನ್ನು ಬೇರ್ಪಡಿಸಿ ಸಿಗುವ ಅಕ್ಕಿ ಮೋಕ್ಷದ ಸಂಕೇತ. ಜೀವನ ಕೂಡ ಮೋಕ್ಷವನ್ನು ಪಡೆಯುವತ್ತ ಸಾಗಲಿ ಎಂದು ಆಶಿಸಿದರು.

ಪಲಿಮಾರು ಮಠದ ಹಿರಿಯ ಯತಿ ವಿದ್ಯಾಧೀಶ ತೀರ್ಥರು ಮಾತನಾಡಿ, ಕೃಷ್ಣಾಪುರ ಶ್ರೀಗಳು ನಾಲ್ಕನೇ ಬಾರಿಗೆ ಪರ್ಯಾಯ ಪೀಠ ಏರಲಿದ್ದು, ಹಿಂದಿನ ಮೂರೂ ಪರ್ಯಾಯಗಳನ್ನು ಯಶಸ್ವಿಯಾಗಿ ಸಂಪ್ರದಾಯಬದ್ಧವಾಗಿ ಪೂರೈಸಿದ್ದಾರೆ. ವಿಶ್ವಪ್ರಿಯ ಪರ್ಯಾಯಕ್ಕಿಂತ ಕೃಷ್ಣಪ್ರಿಯ ಪರ್ಯಾಯದ ಮೂಲಕ ಮಾರ್ಗದರ್ಶನ ನೀಡಿದ್ದಾರೆ ಎಂದರು.

 ಪಲಿಮಾರು ಕಿರಿಯ ಯತಿ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಮಾತನಾಡಿ, ಉಡುಪಿಯ ಕೃಷ್ಣ ಅನ್ನ ಬ್ರಹ್ಮನೆಂದು ಖ್ಯಾತನಾಗಿದ್ದು, ಪರ್ಯಾಯದಲ್ಲಿ ನಿರಂತರ ಅನ್ನದಾನ ಮಾಡಲು ಅನುಕೂಲವಾಗುವಂತೆ ಅಕ್ಕಿ ಮುಹೂರ್ತ ನಡೆಸಿಕೊಂಡು ಬರಲಾಗಿದೆ ಎಂದರು.

ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು ಮಾತನಾಡಿ, ಅಷ್ಟಮಠಾಧೀಶರ ಹಾಗೂ ಭಕ್ತರ ಸಹಕಾರದಿಂದ ಮುಂದಿನ ಪರ್ಯಾಯ ನಡೆಸಲು ಹೊಸ ಹುರುಪು ಬಂದಿದೆ. ದೇವರಿಗೆ ಪ್ರೀತಿ ಆಗುವ ಕಾರ್ಯಗಳನ್ನು ಮುಂದುವರಿಸುವುದಾಗಿ ಹೇಳಿದರು.

ಮಠದ ವಿದ್ವಾಂಸರಾದ ಡಾ. ಗುರುರಾಜ ಆಚಾರ್ಯ ನಿಪ್ಪಾಣಿ ವಂದಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು