ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮದ್ಯಸೇವಿಸಿ ಶಾಲೆಗೆ ಬಂದ ಶಿಕ್ಷಕ ಅಮಾನತು

ಅಲಂಗಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ
Last Updated 29 ಡಿಸೆಂಬರ್ 2022, 4:29 IST
ಅಕ್ಷರ ಗಾತ್ರ

ಹಿರಿಯಡಕ: ಪೆರ್ಡೂರು ಗ್ರಾಮದ ಅಲಂಗಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ಕಂಠಪೂರ್ತಿ ಮದ್ಯಸೇವನೆ ಮಾಡಿ
ಶಾಲೆಗೆ ಬಂದ ಆರೋಪದ ಮೇಲೆ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.

ಶಾಲೆಯ ಶಿಕ್ಷಕ ಕೃಷ್ಣಮೂರ್ತಿ, ಮಂಗಳವಾರ ಕಂಠಪೂರ್ತಿ ಮದ್ಯ ಸೇವಿಸಿ, ಮಕ್ಕಳು ಶಾಲೆಗೆ ಬರುವ ವೇಳೆಗೆ ವರಾಂಡದಲ್ಲಿ ಮಲಗಿದ್ದರು. ಈ ಬಗ್ಗೆ ಪಾಲಕರು ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿದ್ದರು.

ಪಂಚಾಯಿತಿ ಪ್ರಮುಖರು ಶಾಲೆಗೆ ಬರುವ ವೇಳೆ ಕೃಷ್ಣಮೂರ್ತಿ ಸಂಬಂಧಿಕರು, ಅವರನ್ನು ಮನೆಗೆ ಕರೆದುಕೊಂಡು ಹೋಗಿದ್ದರು.
‘ಗ್ರಾಮದ ಶಾಲೆಯ ಮಕ್ಕಳ ಭವಿಷ್ಯ ರೂಪಿಸಬೇಕಾದ ಶಿಕ್ಷಕ ಇಂತಹ ಕಾರ್ಯ ಮಾಡಿದ್ದು, ಶಿಕ್ಷಕನನ್ನು ಕೂಡಲೇ ಅಮಾನತು ಮಾಡಬೇಕು’ ಎಂದು ಪೆರ್ಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವು ಪೂಜಾರಿ ಉಪಾಧ್ಯಕ್ಷೆ ಚೇತನಾ ಶೆಟ್ಟಿ, ಸದಸ್ಯರಾದ ಕೆ ತುಕಾರಾಮ ನಾಯಕ್, ರಮೇಶ್ ಪೂಜಾರಿ, ಬೈದರ್ಷಿ ಫ್ರೆಂಡ್ಸ್‌ನ ಸತೀಶ್ (ಅಣ್ಣು), ಗ್ರಾಮಸ್ಥರು, ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದ್ದರು.

ಈ ಹಿಂದೆ ಸಾರ್ವಜನಿಕರು, ಸ್ಥಳೀಯ ಪ್ರಮುಖರು, ಕ್ಷೇತ್ರ ಶಿಕ್ಷಣಾಧಿಕಾರಿ, ಶಿಕ್ಷಕ ಕೃಷ್ಣಮೂರ್ತಿಯವರಿಗೆ ಎಚ್ಚರಿಕೆ ನೀಡಿದ್ದರು. ಆದರೆ, ಶಿಕ್ಷಕ ತನ್ನ ದುರಭ್ಯಾಸ ಮುಂದುವರಿಸಿದ್ದಾರೆ. ಮಕ್ಕಳಿಗೆ ತೊಂದರೆ ಆದರೆ ಯಾರು ಹೊಣೆ ಎಂದು ಸಾರ್ವಜನಿಕರು ಈ ವೇಳೆ ಪ್ರಶ್ನಿಸಿದ್ದರು.

ಶಿಕ್ಷಕ ಕೃಷ್ಣಮೂರ್ತಿ ಸೋಮವಾರ ಮದ್ಯಸೇವನೆ ಮಾಡಿ ಶಾಲೆಗೆ ಬಂದಿದ್ದಾಗ ವಾಪಸ್ ಕಳಿಸಿದ್ದಾರೆ. ಇವರು ಪ್ರತಿನಿತ್ಯ ಮದ್ಯಪಾನ ಮಾಡಿ ಶಾಲೆಗೆ ಬರುತ್ತಿರುವುದರಿಂದ ಕ್ರಮ ಜರುಗಿಸುವಂತೆ ಮುಖ್ಯ ಶಿಕ್ಷಕಿ, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.

ಅಲಂಗಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೃಷ್ಣಮೂರ್ತಿ ದುರ್ನಡತೆ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರು. ಇದನ್ನು ಆಧರಿಸಿ, ಶಿಕ್ಷಣ ಇಲಾಖೆ ಶಿಕ್ಷಕನನ್ನು ಅಮಾನತುಗೊಳಿಸಿದೆ. ಮುಂದಿನ ತನಿಖೆ ನಡೆಸಲಾಗುವುದು ಎಂದು ಡಿಡಿಪಿಐ ಗಣಪತಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT