ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಾತತ್ವ ಶಾಸ್ತ್ರಜ್ಞ ಕೆ.ಕೆ.ಮೊಹಮ್ಮದ್‌ಗೆ ಪ್ರಶಸ್ತಿ

Last Updated 22 ಫೆಬ್ರುವರಿ 2021, 14:05 IST
ಅಕ್ಷರ ಗಾತ್ರ

ಉಡುಪಿ: ಬಾಬ್ರಿ ಮಸೀದಿ ಉತ್ಖನನ ತಂಡದಲ್ಲಿದ್ದ ತಜ್ಞರಲ್ಲಿ ಒಬ್ಬರಾದ ಪ್ರಸಿದ್ಧ ಪುರಾತತ್ವ ತಜ್ಞರಾದ ಕೆ.ಕೆ.ಮೊಹಮ್ಮದ್ ಅವರನ್ನು ಡಾ.ಪಾದೂರು ಗುರುರಾಜ ಭಟ್ ಸ್ಮರಣಾರ್ಥ ಕೊಡಮಾಡುವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್‌ನ ಚೇರ್ಮನ್‌ ಪಿ.ಶ್ರೀಪತಿ ತಂತ್ರಿ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.28ರಂದು ವಿದ್ಯೋದಯ ಪಬ್ಲಿಕ್ ಶಾಲೆ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಅಯೋಧ್ಯೆ ಉತ್ಖನನ ಹಾಗೂ ಮಧ್ಯಪ್ರದೇಶ, ಜಾರ್ಖಂಡ್‌ನಲ್ಲಿ ನಡೆದ ಉತ್ಖನನಗಳ ಕುರಿತು ಪ್ರಶಸ್ತಿ ಪುರಸ್ಕೃತ ಕೆ.ಕೆ.ಮೊಹಮ್ಮದ್ ಮಾತನಾಡಲಿದ್ದಾರೆ. ಪ್ರಶಸ್ತಿ ₹ 1 ಲಕ್ಷ ನಗದು ಹಾಗೂ ಫಲಕ ಒಳಗೊಂಡಿದೆ ಎಂದರು.

ಕಾರ್ಯಕ್ರಮವನ್ನು ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಶಾಸಕ ರಘುಪತಿ ಭಟ್‌, ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ವಿವಿ ವಿಶ್ರಾಂತ ಕುಲಪತಿ ಕೆ.ಭೈರಪ್ಪ ಉಪಸ್ಥಿತರಿರಲಿದ್ದಾರೆ ಎಂದರು.

ಅಯೋಧ್ಯೆಯ ವಿವಾದಿತ ಭೂಮಿಯ ಉತ್ಖನನ ಕಾರ್ಯಕ್ಕೆ ಅಲಹಾಬಾದ್ ನ್ಯಾಯಾಲಯ ನೇಮಿಸಿದ್ದ ತಜ್ಞರ ಸಮಿತಿಯಲ್ಲಿದ್ದ ಕೆ.ಕೆ.ಮೊಹಮ್ಮದ್, ‘ವಿಷ್ಣು ದೇವಾಲಯವನ್ನು ಕೆಡವಿ ಬಾಬ್ರಿ ಮಸೀದಿ ನಿರ್ಮಿಸಲಾಗಿತ್ತು’ ಎಂಬ ಅಂಶಗಳನ್ನು ಪುರಾವೆಗಳ ಸಹಿತ ತೋರಿಸಿದ್ದರು. ಸಮಿತಿಯಲ್ಲಿದ್ದ ಎಲ್ಲ ಮುಸ್ಲಿಂ ಸದಸ್ಯರೂ ಇದನ್ನು ಅನುಮೋದಿಸಿದ್ದರು.

ಮಹಮ್ಮದ್ ನೀಡಿದ ವರದಿಯಲ್ಲಿ ವಿವಾದಿತ ಸ್ಥಳದಲ್ಲಿ ಮೊದಲು ರಾಮನಿಗೆ ಸೇರಿದ ದೇವಾಲಯವಿತ್ತು ಎಂದು ಸ್ಪಷ್ಟವಾಗಿ ಪ್ರತಿಪಾದಿಸಲಾಗಿತ್ತು. ಇದೇ ವರದಿಯ ಆಧಾರದ ಮೇಲೆ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿತು ಎಂದರು.

ಕೆ.ಕೆ.ಮೊಹಮ್ಮದ್ ಅಯೋಧ್ಯೆ ಮಾತ್ರವಲ್ಲ, ಮಧ್ಯಪ್ರದೇಶ, ಜಾರ್ಖಂಡ್‌, ಸೇರಿದಂತೆ ಹಲವು ಕಡೆಗಳಲ್ಲಿ ದೇವಾಲಯಗಳ ಉತ್ಖನನ ಹಾಗೂ ಪುನರುಜ್ಜೀವನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ ಖಜಾಂಚಿ ಪರಶುರಾಮ್‌ ಭಟ್‌, ವಾಸುದೇವ್‌ ಭಟ್‌, ಸದಸ್ಯರಾದ ರಘುಪತಿ ರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT