ಉಡುಪಿ: ಮಹಿಳೆಯರು ಮತ್ತು ಬಾಲಕಿಯರು ಸಾಮಾಜಿಕ, ಸಾಂಸ್ಕೃತಿಕ ಮತ್ತು ಲಿಂಗ ತಾರತಮ್ಯದಿಂದಾಗಿ ಹೆಚ್ಚಿನ ಆರೋಗ್ಯ ಸೇವೆಯಿಂದ ವಂಚಿತರಾಗಿರುವುದನ್ನು ಮನಗಂಡಿರುವ ಸರ್ಕಾರ ಮಹಿಳೆಯರ ಆರೋಗ್ಯ ಸುಧಾರಣೆ, ಆರೋಗ್ಯ ಸಮಸ್ಯೆಗಳ ಕುರಿತು ಮುಕ್ತವಾಗಿ ಚರ್ಚಿಸಲು ರಾಜ್ಯದಾದ್ಯಂತ ಪ್ರಮುಖ ನಗರಗಳಲ್ಲಿ ಆಯುಷ್ಮತಿ ಕ್ಲಿನಿಕ್‌ಗಳನ್ನು ಸ್ಥಾಪಿಸುತ್ತಿದೆ.
ಹದಿಹರೆಯದ ಹೆಣುಮಕ್ಕಳಲ್ಲಿ ಉಂಟಾಗುವ ದೈಹಿಕ ಬದಲಾವಣೆ, ನೈರ್ಮಲ್ಯ, ಸಂತಾನೋತ್ಪತ್ತಿಯ ಕುರಿತು ಅರಿವು ಮೂಡಿಸುವುದು ಮತ್ತು ಆಪ್ತ ಸಮಾಲೋಚನೆ ನಡೆಸುವುದು, 30 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಅಸಾಂಕ್ರಮಿಕ ರೋಗಗಳ ತಪಾಸಣೆ ನಡೆಸುವುದು, ರೆಫರಲ್ ಸೇವೆ ಒದಗಿಸುವುದು ಆಯುಷ್ಮತಿ ಕ್ಲಿನಿಕ್‌ನ ಪ್ರಮುಖ ಉದ್ದೇಶವಾಗಿದೆ.
ಸ್ವಸ್ಥ ಮಹಿಳೆಯರು, ಸ್ವಸ್ಥ ಸಮಾಜದ ಧ್ಯೇಯೋದ್ದೇಶದೊಂದಿಗೆ ಆರಂಭವಾಗಿರುವ ಆಯುಷ್ಮತಿ ಕ್ಲಿನಿಕ್‌ನಲ್ಲಿ ಪ್ರತಿದಿನ ತಜ್ಞ ವೈದ್ಯರ ಸೇವೆ ಲಭ್ಯವಿದೆ. ಸೋಮವಾರ ಫಿಜಿಷಿಯನ್, ಮಂಗಳವಾರ ಮೂಳೆ ಮತ್ತು ಕೀಲು ತಜ್ಞರು, ಬುಧವಾರ ಶಸ್ತ್ರ ಚಿಕಿತ್ಸಾ ತಜ್ಞರು, ಗುರುವಾರ ಮಕ್ಕಳ ಚಿಕಿತ್ಸಾ ತಜ್ಞರು, ಶುಕ್ರವಾರ ಸ್ತ್ರೀರೋಗ ತಜ್ಞರು, ಶನಿವಾರ ಕಿವಿ, ಮೂಗು, ಗಂಟಲು, ಚರ್ಮ, ನೇತ್ರ ತಜ್ಞ ವೈದ್ಯರು ಮಹಿಳೆಯರನ್ನು ತಪಾಸಣೆ ಮಾಡಲಿದ್ದು ಚಿಕಿತ್ಸೆ ನೀಡಲಿದ್ದಾರೆ.
ಆಪ್ತ ಸಮಲೋಚನೆ ಸಹ ಲಭ್ಯವಿದ್ದು, ಋತುಚಕ್ರ ಸಂಬಂಧಿ ಸಮಸ್ಯೆ, ನೈರ್ಮಲ್ಯ, ಕುಟುಂಬ ಕಲ್ಯಾಣ ಯೋಜನೆಗಳು, ಅಸಾಂಕ್ರಾಮಿಕ ರೋಗಗಳು, ಸಂತಾನೋತ್ಪತ್ತಿ ಅಂಗಗಳ ಸೋಂಕು, ಲೈಂಗಿಕ ಸೋಂಕುಗಳು, ಮಾನಸಿಕ ಆರೋಗ್ಯ ಸಮಸ್ಯೆಗಳು, ಹದಿಹರೆಯದ ಸಮಸ್ಯೆಗಳು, ಮುಟ್ಟು ನಿಲ್ಲುವ ಸಮಯದ ಸಮಸ್ಯೆಯೆಗಳು, ಪೌಷ್ಟಿಕಾಂಶದ ಕೊರತೆಗಳ ಬಗ್ಗೆ ವೈದ್ಯರಿಂದ ಸೂಕ್ತ ಸಲಹೆ ಸೂಚನೆಗಳು ಸಿಗಲಿವೆ. ಲ್ಯಾಬ್ ಪರೀಕ್ಷೆಗಳ ಸೇವೆ ಮತ್ತು ಉಚಿತ ಔಷಧಿಗಳು ಸಹ ಕ್ಲಿನಿಕ್‌ನಲ್ಲಿ ದೊರೆಯಲಿವೆ.
ಜಿಲ್ಲೆಯಲ್ಲಿ ಉಡುಪಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಅಲಂಕಾರ್ ಚಿತ್ರಮಂದಿರದ ಬಳಿ) ಆಯುಷ್ಮತಿ ಕ್ಲಿನಿಕ್ ಆರಂಭಿಸಲಾಗಿದ್ದು ಬೆಳಿಗ್ಗೆ 9 ಘಂಟೆಯಿಂದ ಸಂಜೆ 4.30 ರವರೆಗೆ ತೆರೆದಿರುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಶುಲ್ಕ ಭರಿಸುವ ಅಗತ್ಯವಿಲ್ಲ. ಮಹಿಳೆಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.