ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ ಮೀಸಲಾತಿ, ಒಬಿಸಿಗೆ ಸೇರಿಸಲು ಮನವಿ

ಅರ್ಜಿ ವಿಚಾರಣೆ ನಡೆಸಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ
Last Updated 12 ಜನವರಿ 2021, 15:12 IST
ಅಕ್ಷರ ಗಾತ್ರ

ಉಡುಪಿ: ರಾಜ್ಯದಲ್ಲಿರುವ ವಿವಿಧ ಜಾತಿ ಜನಾಂಗಗಳ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಮನವಿ, ಪ್ರವರ್ಗ ಬದಲಾವಣೆ, ಪರ್ಯಾಯ ಪದ ಸೇರ್ಪಡೆ ಹಾಗೂ ಕಾಗುಣಿತ ದೋಷ ತಿದ್ದುಪಡಿ ಹಾಗೂ ಇತರೆ ವಿಷಯಗಳಿಗೆ ಸಂಬಂಧಿಸಿದಂತೆ ಆಯೋಗದಲ್ಲಿ ಸ್ವೀಕೃತಗೊಂಡಿರುವ ಮನವಿಗಳನ್ನು ವಿಚಾರಣೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ರಾಜ್ಯದಲ್ಲಿ 15ಲಕ್ಷ ಕುಂಬಾರ ಸಮುದಾಯದವರಿದ್ದು, ಸಮುದಾಯವನ್ನು ಪ್ರವರ್ಗ-2 ‘ಎ’ ಗೆ ಸೇರಿಸಲಾಗಿದೆ. ಕುಂಬಾರ ಸಮುದಾಯಕ್ಕೆ ಒಳ ಮೀಸಲಾತಿ ಕಲ್ಪಿಸಬೇಕು. ಕುಂಬಾರ ವೃತ್ತಿಯನ್ನು ಕೌಶಲಾಭಿವೃದ್ದಿ ಯೋಜನೆಯಡಿ ಸೇರ್ಪಡೆಗೊಳಿಸಬೇಕು. ಉದ್ಯೋಗಾವಕಾಶ ಮತ್ತು ತರಬೇತಿಗೆ ವ್ಯವಸ್ಥೆ ಮಾಡಬೇಕು. ದೇವರಾಜು ಅರಸು ನಿಗಮದಲ್ಲಿರುವ ಕುಂಬಾರ ಅಭಿವೃಧ್ದಿ ನಿಗಮವನ್ನು ಪ್ರತ್ಯೇಕಿಸಿ, ಕುಂಬ ಕಲಾ ಅಭಿವೃಧ್ದಿ ಮಂಡಳಿ ಮಾಡಬೇಕು ಎಂದು ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ, ರಾಜ್ಯ ಕುಲಾಲ ಕುಂಬಾರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಸುನೀಲ್ ಹಾಗೂ ಸಮುದಾಯದ ಮುಖಂಡರು ಮನವಿ ಸಲ್ಲಿಸಿದರು. ಮನವಿಯನ್ನು ಪರಿಶೀಲಿಸಿ ಸರ್ಕಾರಕ್ಕೆ ಮುಟ್ಟಿಸಲಾಗುವುದು ಎಂದು ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಹೇಳಿದರು.

ಮುಖಾರಿ–ಮುವಾರಿ ಸಮುದಾಯದವರು ಪುತ್ತೂರು, ಸುಳ್ಯ, ಮಡಿಕೇರಿಯಲ್ಲಿ ಹೆಚ್ಚಾಗಿದ್ದು, ಯಾವುದೇ ವರ್ಗಕ್ಕೆ ಸೇರ್ಪೆಡೆ ಮಾಡಿಲ್ಲ. ಉದ್ಯೋಗ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಮೀಸಲಾತಿ ವಂಚಿತರಾಗಿದ್ದು, ಕೇರಳದಲ್ಲಿ ಒಬಿಸಿ ವರ್ಗದಲ್ಲಿ ಸಮುದಾಯವನ್ನು ಸೇರ್ಪಡೆ ಮಾಡಲಾಗಿದೆ. ರಾಜ್ಯದಲ್ಲಿಯೂ ಒಬಿಸಿಗೆ ಸೇರ್ಪಡೆ ಮಾಡಬೇಕು ಎಂದು ಮುಖಾರಿ ಸಮಾಜ ಸಂಘದ ಅಧ್ಯಕ್ಷ ಶಂಕರ ಮುಖಾರಿ ಪಟ್ರೇಡಿ ಮನೆ ಹಾಗೂ ಸಲಹೆಗಾರ ಬಾಲಕೃಷ್ಣ ಕೋರಿದರು.

ಕೇರಳದಲ್ಲಿ ಒಬಿಸಿಗೆ ಸೇರ್ಪಡೆ ಮಾಡಿರುವ ಕುರಿತ ಆದೇಶದ ಪ್ರತಿ ಹಾಗೂ ಇತರೆ ದಾಖಲೆಗಳನ್ನು ನೀಡುವಂತೆ ಸೂಚಿಸಿದ ಆಯೋಗದ ಅಧ್ಯಕ್ಷರು ಅಗತ್ಯ ಕ್ರಮದ ಭರವಸೆ ನೀಡಿದರು.

ಕೇರಳ ಮೂಲದ ನಾಯರ್ ಜಾತಿಯವರು ರಾಜ್ಯದಲ್ಲಿ 15 ಲಕ್ಷಕ್ಕೂ ಅಧಿಕ ಮಂದಿ ಇದ್ದು, ಒಕ್ಕಲಿಗ, ಬಂಟ್ಸ್ ಜಾತಿಗೆ ಸಾಮ್ಯತೆ ಹೊಂದಿದ್ದಾರೆ. ನಾಯರ್‌ಗಳನ್ನು ರಾಜ್ಯದ ಯಾವುದೇ ವರ್ಗದಲ್ಲಿ ಗುರುತಿಸಿಲ್ಲ. ಹಿಂದುಳಿದ ಪಟ್ಟಿಗೆ ಸೇರ್ಪಡೆ ಮಾಡಿ, ಮೀಸಲಾತಿ ಒದಗಿಸುವಂತೆ ಹಾಗೂ ನಾಯರ್ ಹೆಸರನ್ನು ಆಂಗ್ಲಭಾಷೆಯಲ್ಲಿ ಬರೆಯುವಾಗ ಕಂಡುಬರುವ ಕಾಗುಣಿತ ದೋಷ ಸರಿಪಡಿಸುವಂತೆ ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಅಧ್ಯಕ್ಷ ಎಚ್‌.ಮುರುಳಿ ಮನವಿ ಮಾಡಿದರು. ಅಧ್ಯಕ್ಷರು ಅಗತ್ಯ ಕ್ರಮದ ಭರವಸೆ ನೀಡಿದರು.

ಬನ್ನರ್ ಜಾತಿಯನ್ನು ಪರಿಶಿಷ್ಟ ವರ್ಗಕ್ಕೆ ಸೇರ್ಪಡೆ ಮಾಡಲು ಸಲ್ಲಿಕೆಯಾದ ಮನವಿಗೆ ಸಂಬಂಧಿಸಿದಂತೆ ಪರಿಶಿಷ್ಟ ವರ್ಗದ ಆಯೋಗಕ್ಕೆ ಮನವಿಯನ್ನು ಸಲ್ಲಿಸುವಂತೆ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸೂಚಿಸಿದರು.

ಬಹಿರಂಗ ವಿಚಾರಣೆ ಕಾರ್ಯಕ್ರಮದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಕಲ್ಯಾಣ್ ಕುಮಾರ್, ರಾಜಶೇಖರ್, ಕೆ.ಟಿ.ಸುವರ್ಣ, ಅರುಣ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT