ಬುಧವಾರ, ಆಗಸ್ಟ್ 17, 2022
29 °C
ಸಂಸ್ಕೃತ, ಕನ್ನಡ ಭಾಷೆಯ ಬಹುದೊಡ್ಡ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಇನ್ನಿಲ್ಲ

ಬನ್ನಂಜೆ ಗೋವಿಂದಾಚಾರ್ಯ; ಸಂಪ‍್ರದಾಯದ ಲಕ್ಷ್ಮಣರೇಖೆ ಮೀರಿದ ವೈಚಾರಿಕ ಚಿಂತಕ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ರಾಮಾಯಣ, ಮಹಾಭಾರತ, ಭಗವದ್ಗೀತೆ, ವೇದ, ಉಪನಿಷತ್ತು, ಪುರಾಣ ಹೀಗೆ ಪ್ರಾಚೀನ ಜ್ಞಾನಶಾಖೆಗಳನ್ನು ಕರಗತಮಾಡಿಕೊಂಡಿದ್ದ ನಾಡಿನ ಅಪರೂಪದ ಹಿರಿಯ ವಿದ್ವಾಂಸರು ಬನ್ನಂಜೆ ಗೋವಿಂದಾಚಾರ್ಯರು. ಅಷ್ಠಮಠಗಳ ಮಠಾಧೀಶರಿಗೆ ಪಾಠ ಬೋಧಿಸಿದ್ದ ಪಡುಮನ್ನೂರು ನಾರಾಯಣ ಆಚಾರ್ಯರ ಪುತ್ರರಾದ ಗೋವಿಂದಾಚಾರ್ಯರಿಗೆ ಸಂಸ್ಕೃತ ವಿದ್ವತ್ ರಕ್ತಗತವಾಗಿಯೇ ಬಂದಿತ್ತು.

ಹೆಚ್ಚು ಶಿಕ್ಷಣ ಪಡೆಯದಿದ್ದರೂ ಸ್ವಅಧ್ಯಾಯಿಯಾಗಿ ಸಂಸ್ಕೃತ ಹಾಗೂ ಕನ್ನಡದ ಬಹುದೊಡ್ಡ ವಿದ್ವಾಂಸರಾಗಿ ಬೆಳೆದ ಬನ್ನಂಜೆ ಗೋವಿಂದಾಚಾರ್ಯರು ಸಾರಸ್ವತ ಲೋಕದ ಬಹುದೊಡ್ಡ ಆಸ್ತಿ ಎಂದು ಬಣ್ಣಿಸುತ್ತಾರೆ ಅವರ ಶಿಷ್ಯರು, ಅಭಿಮಾನಿಗಳು.

ಅಪಾರ ಸ್ಮರಣ ಶಕ್ತಿ: ವೇದ, ಉಪನಿಷತ್ತು, ಮಹಾಭಾರತ ಹೀಗೆ, ಯಾವುದೇ ವಿಚಾರಗಳ ಬಗ್ಗೆ ಉಪನ್ಯಾಸ ನೀಡುವಾಗ ಬನ್ನಂಜೆ ಅವರ ಕೈನಲ್ಲಿ ಪುಸ್ತಕವಾಗಲಿ, ಚೀಟಿಯಾಗಲಿ ಇರುತ್ತಿರಲಿಲ್ಲ. ಒಮ್ಮೆ ಅಧ್ಯಯನ ಮಾಡಿದ ವಿಚಾರ ಎಂದಿಗೂ ಸ್ಮೃತಿಪಟಲದಿಂದ ದೂರವಾಗುತ್ತಿರಲಿಲ್ಲ. ಅವರ ಅಗಾಧ ಸ್ಮರಣಶಕ್ತಿ ಎಲ್ಲರನ್ನೂ ನಿಬ್ಬೆರಗುಗೊಳಿಸುತ್ತಿತ್ತು ಎನ್ನುತ್ತಾರೆ ಅವರ ಒಡನಾಡಿ ಸಾಹಿತಿ ಮುರಳೀಧರ ಉಪಾಧ್ಯ.

ಕ್ರಾಂತಿಕಾರಿ ಯುವಕ: ಯವ್ವನದಲ್ಲಿ ಕೃಷ್ಣಮಠದ ರಥಬೀದಿಯಲ್ಲಿ ಕ್ರಾಂತಿಕಾರಿ ಯುವಕನಾಗಿ ಓಡಾಡುತ್ತಿದ್ದ ಬನ್ನಂಜೆ ಗೋವಿಂದಾಚಾರ್ಯ ಅವರೊಳಗಿದ್ದ ಅಗಾಧ ವಿದ್ವತ್‌ ಅನ್ನು ಗುರುತಿಸಿದವರು ಅಂದಿನ ಭಂಡಾರಕೇರಿ ಶ್ರೀಗಳು. ಮಧ್ವಾಚಾರ್ಯರು ರಚಿಸಿದ ಸರ್ವಮೂಲ ಗ್ರಂಥಗಳನ್ನು ಸಂಪಾದಿಸುವ ಮಹತ್ವದ ಜವಾಬ್ದಾರಿಯನ್ನು ಬನ್ನಂಜೆ ಗೋವಿಂದಾಚಾರ್ಯ ಅವರ ಹೆಗಲಿಗೆ ವಹಿಸಿದರು.

ಬಹಳ ಕ್ಲಿಷ್ಟಕರವಾದ ಸರ್ವಮೂಲ ಗ್ರಂಥಗಳನ್ನು ಓದಿ ಅರ್ಥೈಸಿಕೊಂಡು ಅದಕ್ಕೆ ವ್ಯಾಖ್ಯಾನ ಬರೆಯಲು ಹಲವು ವರ್ಷಗಳನ್ನು ಮೀಸಲಿಟ್ಟ ಬನ್ನಂಜೆ ಗೋವಿಂದಾಚಾರ್ಯರು ಕೃಷ್ಣ ಮಠದ ಹೊಸ ತಲೆಮಾರಿನ ವಿದ್ವಾಂಸರು ಎಂಬ ಮನ್ನಣೆಗೆ ಪಾತ್ರರಾದರು ಎಂದು ಸ್ಮರಿಸಿದರು ಮುರಳೀಧರ ಉಪಾಧ್ಯ.

ಉಡುಪಿ ಟು ಅಮೆರಿಕಾ: ಬನ್ನಂಜೆ ಗೋವಿಂದಾಚಾರ್ಯರ ಪ್ರವಚನಗಳು ಉಡುಪಿಯಿಂದ ಅಮೆರಿಕಾದವರೆಗೂ ಪ್ರಸಿದ್ಧಿ ಪಡೆದಿದ್ದವು. ಆಧ್ಯಾತ್ಮಿಕ ವಿಚಾರಗಳಲ್ಲಿ ಮೇಲ್ಮಟ್ಟದಲ್ಲಿ ಮಾತನಾಡುವಂತಹ ಧೀಮಂತ ವಿದ್ವಾಂಸರಾಗಿದ್ದರು. ಕ್ರೈಸ್ತ ಹಾಗೂ ಹಿಂದೂ ಧರ್ಮದ ನಡುವಿನ ಸಾಮ್ಯತೆಗಳನ್ನು ಗುರುತಿಸುವ ಮೂಲಕವೂ ಅವರು ಗಮನ ಸೆಳೆದವರು ಎಂದು ಸ್ಮರಿಸಿದರು.

ಬಹುದೊಡ್ಡ ಭಾಷಾಂತರಕಾರ: ಕನ್ನಡದ ಬಹುದೊಡ್ಡ ಭಾಷಾಂತರಕಾರರಾಗಿದ್ದ ಅವರು, ಶೂದ್ರಕನ ಮೃಚ್ಛಕಟಿಕ ನಾಟಕವನ್ನು ‘ಆವೆಯ ಮಣ್ಣಿನ ಆಟದ ಬಂಡಿ’ ಎಂದು ಭಾಷಾಂತರಿಸಿದರು. ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಒಲಿದು ಬಂತು. ಜತೆಗೆ, ಅವರ ‘ನೆನಪಾದಳು ಶಾಕುಂತಳೆ’ ‘ಮತ್ತೆ ರಾಮನ ಕಥೆ’ ‘ಬಾಣಭಟ್ಟನ ಕಾದಂಬರಿ’ ಪ್ರಸಿದ್ಧ ಭಾಷಾಂತರ ಕೃತಿಗಳು.

ಸಂಪ್ರದಾಯದ ಲಕ್ಷ್ಮಣರೇಖೆ ಮೀರಿ ಅಷ್ಠಮಠಗಳಲ್ಲಿದ್ದ ಸಾಂಪ್ರದಾಯಿಕ ನಿಲುವುಗಳ ವಿರುದ್ಧವೂ ಧನಿ ಎತ್ತಿ ವೈಚಾರಿಕವಾದಿಯಾಗಿ ಗುರುತಿಸಿಕೊಂಡಿದ್ದರು. ಮಠಗಳಲ್ಲಿ ನಡೆಯುತ್ತಿದ್ದ ಪ್ರವಚನಗಳಲ್ಲಿ ಭಕ್ತಿಯ ವಿಚಾರಗಳ ಜತೆಗೆ, ತಳಸ್ಪರ್ಶಿಯಾಗಿ ಉಪನಿಷತ್ತು, ಮಹಾಭಾರತದ ಕುರಿತು ಉಪನ್ಯಾಸ ನೀಡುತ್ತಿದ್ದರು. ಒಂದು ವಿಶ್ವವಿದ್ಯಾಲಯ ಮಾಡುವಂತಹ, ನೂರಾರು ವಿದ್ವಾಂಸರು ಮಾಡುವಂತಹ ಕಾರ್ಯವನ್ನು ಬನ್ನಂಜೆಯವರು ಏಕಾಂಗಿಯಾಗಿ ಮಾಡುತ್ತಿದ್ದರು ಎಂದರೆ ಉತ್ಪ್ರೇಕ್ಷೆಯಾಗಲಾರದು ಎನ್ನುತ್ತಾರೆ ಮುರಳೀಧರ ಉಪಾಧ್ಯ.

‘ಮಹಾನ್ ವಿದ್ವಾಂಸರ ಕಣ್ಮರೆ‌’
ಮಧ್ವಾಚಾರ್ಯರ 50 ಗ್ರಂಥಗಳನ್ನು ಅರ್ಥೈಸಿಕೊಂಡು ವ್ಯಾಖ್ಯಾನ ಬರೆಯುವುದು ಸುಲಭವಲ್ಲ. ನಾಲ್ಕೈದು ವರ್ಷಗಳ ಹಿಂದೆ ಮಧ್ವಾಚಾರ್ಯರ ಮಹಾಭಾರತ ತಾತ್ಪರ್ಯ ನಿರ್ಣಯ ಕೃತಿಗೆ ಸಾವಿರ ಪುಟದಷ್ಟು ವ್ಯಾಖ್ಯಾನ ಬರೆದಿದ್ದಾರೆ. ಈ ವ್ಯಾಖ್ಯಾನವನ್ನು ಅರ್ಥೈಸಿಕೊಳ್ಳುವ ವಿದ್ವಾಂಸರು ದೇಶದಲ್ಲಿ ಬೆರಳೆಣಿಕೆ ಮಂದಿ ಮಾತ್ರ ಇದ್ದಾರೆ ಎಂದು ಧೈರ್ಯವಾಗಿ ಹೇಳಬಹುದು ಎಂಬುದು ಅವರ ನಿಲುವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು