ಪಡುಬಿದ್ರಿ: ಬೆಳಪು ಕೈಗಾರಿಕಾ ಪ್ರದೇಶದ ಪಣಿಯೂರಿನಿಂದ ಬೆಳಪುವಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಪಡಿಸಲು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ನಿಗಮ (ಕೆಐಎಡಿಬಿ) ₹6 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಿ 2.70 ಎಕ್ರೆ ಭೂಮಿ ರೈತರಿಂದ ಸ್ವಾಧೀನ ಪಡಿಸಿಕೊಂಡಿದೆ. ಶೀಘ್ರ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಬೆಳಪು ಗ್ರಾ.ಪಂ. ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಒತ್ತಾಯಿಸಿದರು.
ಮಂಗಳವಾರ ಬೆಳಪು ಕೆಐಎಡಿಬಿ ಕೈಗಾರಿಕಾ ಪ್ರದೇಶಕ್ಕೆ ಪಣಿಯೂರಿನಿಂದ ಬೆಳಪು ಸಂಪರ್ಕ ರಸ್ತೆ ನಿರ್ಮಾಣದ ಕುರಿತು ನಡೆದ ಸಭೆಯಲ್ಲಿ ಕೆಐಎಡಿಬಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, 54 ಕೈಗಾರಿಕಾ ಕೇಂದ್ರಗಳು ಪ್ರಾರಂಭಗೊಳ್ಳಲಿದ್ದು, ಈಗಾಗಲೇ ಹಲವು ಸಣ್ಣ ಕೈಗಾರಿಕೆಗಳು ಪ್ರಾರಂಭವಾಗಿವೆ. ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ರೈತರಿಗೆ ತಕ್ಷಣ ಪರಿಹಾರ ನೀಡಿ ರಸ್ತೆ ಅಭಿವೃದ್ಧಿಪಡಿಸಬೇಕು. ಈ ಹೊರೆಯನ್ನು ಕೈಗಾರಿಕಾ ಮಾಕರಿಗೆ ಹಾಕುವುದು ಸೂಕ್ತವಲ್ಲ. ಇದನ್ನು ಸರ್ಕಾರ, ಸಂಸದರು, ಶಾಸಕರ ಗಮನಕ್ಕೆ ತಂದು ರಸ್ತೆ ಅಭಿವೃದ್ಧಿಗೊಳಿಸಲು ಕಾರ್ಯ ಕೈಗೊಳ್ಳುತ್ತೇನೆ ಎಂದರು.
ಕೈಗಾರಿಕಾ ಪ್ರದೇಶದಲ್ಲಿ ನಿರ್ವಹಣೆಯ ತ್ಯಾಜ್ಯ, ಚರಂಡಿ ಸರಿಯಾಗಿಲ್ಲದ ಕಾರಣ ರೈತರ ಜಮೀನಿಗೆ ನೀರು ನುಗ್ಗಿ ನೆರೆ ಉಂಟಾಗಿದೆ. ಶಿವಾಲಯದಿಂದ ಜನರಿಗೆ ಬೆಳಪುವಿಗೆ ಕಾಲುದಾರಿಯಲ್ಲಿ ಸಂಚರಿಸಲು ಅವಕಾಶ ನೀಡಬೇಕು. ಕೆಐಎಡಿಬಿ ವಲಯದಲ್ಲಿರುವ ಶಿವಾಲಯದ ಅಭಿವೃದ್ಧಿಗೆ ಕೈಗಾರಿಕಾ ಪ್ರದೇಶದ ಮಾಲೀಕರು ಕೈಜೋಡಿಸಬೇಕು ಎಂದು ಆಗ್ರಹಿಸಿದ ದೇವಿಪ್ರಸಾದ್, ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಬೇಕು ಎಂದು ಕಾರ್ಖಾನೆ ಮಾಲೀಕರಲ್ಲಿ ವಿನಂತಿಸಿದರು.
ಕೈಗಾರಿಕಾ ಪ್ರದೇಶದಲ್ಲಿ ವಾಸಿಸುವ ಬಡ ಜನರಿಗೆ ಸರ್ಕಾರದ ತೀರ್ಮಾನದಂತೆ ಗುಡಿ ಕೈಗಾರಿಕಾ ಯೋಜನೆ ಅಡಿಯಲ್ಲಿ ವಾಸಿಸುತ್ತಿದ್ದ ಸ್ಥಳವನ್ನು ಮಂಜೂರು ಮಾಡಿ ಕೊಡಿಸಬೇಕು. ಕೈಗಾರಿಕಾ ಪ್ರದೇಶದ ಕಾರ್ಖಾನೆಯ ತೆರಿಗೆಯನ್ನು ಗ್ರಾಮ ಪಂಚಾಯಿತಿಗೆ ಪಾವತಿಸಬೇಕು ಎಂದು ವಿನಂತಿಸಿದರು. ಇದಕ್ಕೆ ಕೆಐಎಡಿಬಿ, ಕೈಗಾರಿಕಾ ಇಲಾಖೆ ಅಧಿಕಾರಿಗಳು ದನಿಗೂಡಿಸಿದರು.
ಕೈಗಾರಿಕಾ ಪ್ರದೇಶದ ವಿವಿಧ ಸಮಸ್ಯೆಗಳ ಬಗ್ಗೆ, ಕೈಗಾರಿಕಾ ಸ್ಥಳಗಳ ಕ್ರಿಯಾಸಾಧನ ಮಾಡಿ ಕೈಗಾರಿಕಾ ಮಾಲೀಕರಿಗೆ ನೀಡಬೇಕು ಎಂದು ಎಸ್.ಎನ್ ಕ್ರಯೋಜನಿಕ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ನಟರಾಜ ಹೆಗ್ಡೆ ಕೆಐಡಿಬಿ ಅಧಿಕಾರಿಗಳ ಗಮನಕ್ಕೆ ತಂದರು.
ಕೆಐಎಡಿಬಿಯ ಸಹಾಯಜ ಆಯುಕ್ತ ರಾಜು, ಜಂಟಿ ನಿರ್ದೇಶಕ ನಾಗರಾಜ್, ///ಉಡುಪಿ ಡಿಐಸಿ ತಾರಾಮ ಶೆಟ್ಟಿ//, ಕೆಐಡಿಬಿ ಅಧಿಕಾರಿಗಳಾದ ದತ್ತಾತ್ರಿ, ಎಂಜಿನಿಯರ್ ಗಣಪತಿ, ರತ್ನಾಕರ್, ಕೈಗಾರಿಕಾ ಪ್ರದೇಶದ ಮಾಲೀಕರಾದ ವಸಂತ ಹೆಗ್ಡೆ, ಹರೀಶ್ ನಾಯಕ್ ಕಾಪು, ಸುಧಾಕರ್ ಶೆಟ್ಟಿ ಮಕರ, ದಿನಕರ್ ಬಾಬು, ಕಿರಣ್ ಹೆಗ್ಡೆ, ಭೂಷಣ್ ರಾವ್, ನಾಗರಾಜ್ ಪ್ರಭು, ಸುರೇಶ್ ಶೆಟ್ಟಿ ಅಯೋಧ್ಯಾ, ದುರ್ಗಾ ನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.