ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಧರ್ಮ ಉಳಿಯಬೇಕಾದರೆ ವೈರಿಗಳ ಅರಿವಿರಲಿ: ಸಂಸದ ತೇಜಸ್ವಿ ಸೂರ್ಯ

‘ವಿಶ್ವಾರ್ಪಣಂ' ಕಾರ್ಯಕ್ರಮ
Last Updated 25 ಡಿಸೆಂಬರ್ 2021, 14:48 IST
ಅಕ್ಷರ ಗಾತ್ರ

ಉಡುಪಿ: ಪ್ರಪಂಚದಲ್ಲಿ ಅನ್ಯಮತಗಳ ದಾಳಿಯ ಹೊರತಾಗಿಯೂ ಉಳಿದುಕೊಂಡಿರುವ ಹಿಂದೂ ಧರ್ಮವನ್ನು ಉಳಿಸಿಕೊಳ್ಳುವುದು ಹಾಗೂ ಪುನರುತ್ಥಾನಗೊಳಿಸುವುದು ಇಂದಿನ ಅಗತ್ಯ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಉಡುಪಿಯ ಕೃಷ್ಣ ಮಠದಲ್ಲಿ ಪರ್ಯಾಯ ಅದಮಾರು ಮಠದ ಪರ್ಯಾಯ ಮಂಗಲೋತ್ಸವದ 'ವಿಶ್ವಾರ್ಪಣಂ' ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದೂ ಧರ್ಮ ಉಳಿಯಬೇಕಾದರೆ ನಾಶಮಾಡುವ ಶಕ್ತಿಗಳ ಬಗ್ಗೆ ಅರಿವಿರಬೇಕು. ವೈರಿಗಳ ಅರಿವಿಲ್ಲದಿದ್ದರೆ ಸ್ವರಕ್ಷಣೆ ಸಾಧ್ಯವಿಲ್ಲ, ಹಿಂದೂ ಧರ್ಮದ ಪುನರುತ್ಥಾನವೂ ಸಾಧ್ಯವಿಲ್ಲ ಎಂದರು.

‘ಎಲ್ಲ ದೇವರು, ಮತ, ಧರ್ಮಗಳು ಒಂದೇ ಎಂಬ ಕಲ್ಪನೆ ಬಲವಾಗಿ ಬೇರೂರಿದ್ದು, ನಮ್ಮನ್ನಾಳುವ ನಾಯಕರು ಕೂಡ ‘ಸರ್ವಧರ್ಮ ಸಮಭಾವ’ ಎಂದು ಹೇಳುತ್ತಲೇ ಹಿಂದೂ ಧರ್ಮದ ವೈರಿಗಳು ಯಾರು ಎಂಬುದನ್ನು ತಿಳಿಯದಂತಹ ಪರಿಸ್ಥಿತಿಗೆ ಬಂದಿದ್ದೇವೆ. ಎಲ್ಲ ಮತಗಳು ಒಂದೇ ಸಿದ್ಧಾಂತಗಳನ್ನು ಬೋಧಿಸುವುದಿಲ್ಲ. ಹಿಂದೂ ಧರ್ಮದಲ್ಲಿ ಕೋಟ್ಯಂತರ ದೇವತೆಗಳನ್ನು ಆರಾಧಿಸುವ ಧಾರ್ಮಿಕ ಸ್ವಾತಂತ್ರ್ಯವಿದೆ. ಇಷ್ಟಪಟ್ಟ ದೇವರನ್ನು ಸೃಷ್ಟಿಸಿಕೊಳ್ಳುವ ಪರಂಪರೆಯನ್ನು ಹಿಂದೂ ಧರ್ಮ ಕೊಟ್ಟಿದೆ. ಆದರೆ, ಇಸ್ಲಾಂ ಹಾಗೂ ಕ್ರಿಶ್ಚಿಯನ್‌ ಧರ್ಮಗಳಲ್ಲಿ ಇಂತಹ ಧಾರ್ಮಿಕ ಸ್ವಾತಂತ್ರ್ಯ ನೀಡಲಾಗಿಲ್ಲ’ ಎಂದರು.

ಹಿಂದೂ ಸಂಸ್ಕೃತಿಯ, ಪರಂಪರೆಯ, ಸಮಾಜದ ವಿರುದ್ಧ ದಾಳಿ ಮಾಡಲು ಬಂದಿರುವ ರಾಜಕೀಯ ಪ್ರೇರಿತ ಸಿದ್ಧಾಂತಗಳನ್ನು ಹೊಂದಿರುವ ಅನ್ಯಮತಗಳಿಗೆ ತಕ್ಕ ಉತ್ತರ ಕೊಡಲು ಹುಟ್ಟಿಕೊಂಡಿರುವುದೇ ಹಿಂದುತ್ವ. ಕ್ರಿಶ್ಚಿಯನ್ ಹಾಗೂ ಇಸ್ಲಾಂ ಧರ್ಮಗಳ ರಾಜಕೀಯ ಆಯಾಮಗಳನ್ನು ಅರ್ಥಮಾಡಿಕೊಳ್ಳದಿದ್ದರೆ ಹಿಂದುತ್ವಕ್ಕೆ ಭಾರಿ ಪೆಟ್ಟುಬೀಳಲಿದೆ ಎಂದರು.

ಕುಕ್ಕೆ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಇತಿಹಾಸ ಪುರಾಣ ಗ್ರಂಥಗಳು ರಚಿತವಾದ ಸಂಸ್ಕೃತ ಭಾಷೆಯನ್ನು ಮೃತಭಾಷೆ ಎಂದು ಕರೆಯುತ್ತಿರುವುದು ಬಹಳ ದುಃಖದ ವಿಚಾರ. ಸಂಸ್ಕೃತ ಭಾಷೆಯ ಕುರಿತಾದ ಅಸಡ್ಡೆ ಭಾವ ಸಂಸ್ಕೃತಿ ನಾಶಕ್ಕೆ ಕಾರಣವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಠ ಮಂದಿರಗಳಲ್ಲಿ ಗ್ರಂಥಗಳ, ಪ್ರವಚನಗಳ ಪಾರಾಯಣದ ಮೂಲಕ ದೇವ ಭಾಷೆಯಾದ ಸಂಸ್ಕೃತವನ್ನು ಉಳಿಸುವ ಕಾರ್ಯ ನಡೆಯುತ್ತಿದೆ ಎಂದು ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಪರ್ಯಾಯ ಪೀಠಾಧೀಶರಾದ ಈಶಪ್ರಿಯತೀರ್ಥ ಸ್ವಾಮೀಜಿ ಅವರು ಜ್ಯೋತಿಷ್ಯ ಶಾಸ್ತ್ರಜ್ಞ ವಿಷ್ಣುಪ್ರಸಾದ್ ಹೆಬ್ಬಾರ್, ಮುಂಬೈನ ಡಾ.ಸುರೇಶ ರಾವ್, ಉಡುಪಿಯ ಉದ್ಯಮಿಗಳಾದ ಟಿ.ಶಂಭು ಶೆಟ್ಟಿ, ಹಿರಿಯ ಛಾಯಾಗ್ರಾಹಕಕ ಯಜ್ಞ ಮಂಗಳೂರು ಅವರನ್ನು ಸನ್ಮಾನಿಸಿದರು.

ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿದರು. ವಾಸ್ತು ತಜ್ಞ ಶತಾವಧಾನಿ ಸುಬ್ರಹ್ಮಣ್ಯ ಭಟ್ ಮತ್ತು ಹೈದರಾಬಾದ್‌ನ ಹೋಟೆಲ್ ಉದ್ಯಮಿ ಬಿ.ಪಿ.ರಾಘವೇಂದ್ರ ರಾವ್ ಇದ್ದರು. ಮಠದ ವ್ಯವಸ್ಥಾಪಕರಾದ ಗೋವಿಂದರಾಜ್ ಸ್ವಾಗತಿಸಿದರು. ಮಠದ ಆಸ್ಥಾನ ವಿದ್ವಾಂಸರಾದ ಕೃಷ್ಣರಾಜ ಭಟ್ ಕುತ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT