ಬುಧವಾರ, ಸೆಪ್ಟೆಂಬರ್ 22, 2021
21 °C
ನೂತನ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ವಿ.ಸುನಿಲ್ ಕುಮಾರ್ ಘೋಷಣೆ

ಸಂಘಟಿತ ಅಭಿವೃದ್ಧಿ ಅಭಿಯಾನಕ್ಕೆ ಆದ್ಯತೆ: ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಸಾರ್ವಜನಿಕ ಜೀವನ ಕಠಿಣವಾಗುತ್ತಿರುವ ಕಾಲಘಟ್ಟದಲ್ಲಿ ಹಾಗೂ ರಾಜಕೀಯ ನಾಯಕರನ್ನು ಅನುಮಾನದಿಂದ ನೋಡುತ್ತಿರುವ ಸಂದರ್ಭದಲ್ಲಿ ಸಚಿವ ಸ್ಥಾನದಂತಹ ಬಹುದೊಡ್ಡ ಹೊಣೆಗಾರಿಕೆ ಸಿಕ್ಕಿದ್ದು, ಎಚ್ಚರಿಕೆಯಿಂದ ನಿಭಾಯಿಸುತ್ತೇನೆ ಎಂದು ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ನಗರದ ಹೊರವಲಯದಲ್ಲಿರುವ ಅಮೃತ್ ಗಾರ್ಡನ್‌ನಲ್ಲಿ ಶುಕ್ರವಾರ ಜಿಲ್ಲಾ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಸಾಮಾನ್ಯ ಕಾರ್ಯಕರ್ತನಾಗಿದ್ದ ನನಗೆ ಪಕ್ಷ ಮೂರು ಬಾರಿ ಶಾಸಕನಾಗುವ, ಸಚಿವನಾಗುವ ಅವಕಾಶ ಕೊಟ್ಟಿದೆ. ಹೊಸ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಲು ಕಾರ್ಯಕರ್ತರ ಸಹಕಾರ ಅಗತ್ಯ ಎಂದರು.

ದಿವಂಗತ ವಿ.ಎಸ್‌.ಆಚಾರ್ಯ ಅವರ ಅಭಿವೃದ್ಧಿಯ ಹೆಜ್ಜೆ ಗುರುತುಗಳು ಜಿಲ್ಲೆಯಲ್ಲಿದ್ದು, ಅವರ ಹಾದಿಯಲ್ಲಿ ಮುನ್ನಡೆಯುತ್ತೇನೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಜಿಲ್ಲೆಯ ಎಲ್ಲ ಶಾಸಕರ ಜತೆಗೂಡಿ ಜಿಲ್ಲೆಯಲ್ಲಿ ಅಭಿವೃದ್ಧಿಯ ಅಭಿಯಾನ ಮಾಡೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಕಾಲೇಜು ದಿನಗಳಲ್ಲೇ ಹೋರಾಟಗಳಲ್ಲಿ ಭಾಗಿಯಾಗಿದ್ದನ್ನು ಗುರುತಿಸಿ ಪಕ್ಷಕ್ಕೆ ಸೇರಿಸಿಕೊಂಡ ಬಿಜೆಪಿ ಹೊಸ ಜವಾಬ್ದಾರಿಗಳನ್ನು ನೀಡುತ್ತಾ ಬಂದಿದೆ. ಯುವ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ, ಬಿಜೆಪಿ ಉಪಾಧ್ಯಕ್ಷ ಹುದ್ದೆ, 7 ವರ್ಷಗಳಿಂದ ಮುಖ್ಯ ಸಚೇತಕನ ಹುದ್ದೆ ನೀಡಿ ರಾಜಕೀಯವಾಗಿ ಬೆಳೆಸಿದೆ. ಈಗ ಸಂಪುಟದಲ್ಲಿ ಸ್ಥಾನ ಕೊಟ್ಟಿದ್ದು, ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಉಡುಪಿ ಜಿಲ್ಲೆಯ ಅಭಿವೃದ್ಧಿ ಹಾಗೂ ಕಾರ್ಯಕರ್ತರ ಹಿತ ಕಾಪಾಡಲು ಬದ್ಧನಾಗಿರುತ್ತೇನೆ ಎಂದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ, ತ್ರಿಪಲ್ ತಲಾಖ್ ರದ್ದು, ರಾಮಜನ್ಮ ಭೂಮಿ ವಿವಾದ ಸುಖಾಂತ್ಯ ಹೀಗೆ ಕ್ರಾಂತಿಕಾರಿ ನಿಲುವುಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎಂದರು.

ಅರ್ಜಿ ಕೊಡದೆ ಒಂದು ರೂಪಾಯಿ ಸಿಗದಿರುವ ಕಾಲದಲ್ಲಿ ಅರ್ಜಿ ಹಾಕದೆ ಕಿಸಾನ್ ಸಮ್ಮಾನ್ ಯೋಜನೆಯಡಿ ವರ್ಷಕ್ಕೆ ರೈತರ ಖಾತೆಗೆ ₹ 6,000 ಜಮೆ ಮಾಡಲಾಗುತ್ತಿದೆ. ದೇಶದ 25 ಕೋಟಿ ರೈತ ಕುಟುಂಬಗಳು ಇದರ ಪ್ರಯೋಜನ ಪಡೆದುಕೊಂಡಿವೆ. ಕೇಂದ್ರದ ಹಾದಿಯಲ್ಲಿಯೇ ನಡೆದ ರಾಜ್ಯ ಬಿಜೆಪಿ ಸರ್ಕಾರ ಕೂಡ ವರ್ಷಕ್ಕೆ ರೈತರ ಖಾತೆಗೆ ₹ 4 ಸಾವಿರ ಹಾಕುತ್ತಿದೆ ಎಂದರು.

ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ದಕ್ಷಿಣ ಕನ್ನಡದಲ್ಲಿ ಶೇ 83ರಷ್ಟು ಕೋವಿಡ್‌ ಸೋಂಕಿತರು ಉಚಿತವಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇಂತಹ ಕ್ರಾಂತಿಕಾರಿ ಬದಲಾವಣೆಗಳು ಬಿಜೆಪಿ ಸರ್ಕಾರದಲ್ಲಿ ಮಾತ್ರ ಸಾಧ್ಯ. ಸುನೀಲ್ ಕುಮಾರ್ ವಯಸ್ಸಿನಲ್ಲಿ ಸಣ್ಣವರು ಎಂಬ ಬೇಧವಿಲ್ಲದೆ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಒಟ್ಟಾಗಿ ಸಾಗುತ್ತೇವೆ ಎಂದರು.

ಇದುವರೆಗೂ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಶ್ರದ್ಧೆ ಹಾಗೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ್ದೇನೆ. ಈಗ ಸಿಕ್ಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಪಾರದರ್ಶಕ ಆಡಳಿತ ಹಾಗೂ ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ಜಾರಿಗೆ ಆದ್ಯತೆ ನೀಡುತ್ತೇನೆ ಎಂದು ಕೋಟ ಹೇಳಿದರು.

ಶಾಸಕ ರಘುಪತಿ ಭಟ್‌ ಮಾತನಾಡಿ, ಇದೇ ಮೊದಲ ಬಾರಿಗೆ ಜಿಲ್ಲೆಯ ಇಬ್ಬರು ನಾಯಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿರುವುದು ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಜಿಲ್ಲೆಯ ಅಭಿವೃದ್ಧಿಗೆ ಸಚಿವರು ಹಾಗೂ ಶಾಸಕರು ಒಟ್ಟಾಗಿ ಶ್ರಮಿಸೋಣ. ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಕೆಲಸ ಮಾಡೋಣ ಎಂದರು.

ಸಚಿವ ಸುನೀಲ್ ಕುಮಾರ್ ಮನವಿಯಂತೆ ಹಲವು ಕಾರ್ಯಕರ್ತರು ಬೊಕ್ಕೆ, ಹಾರಗಳ ಬದಲು ಪುಸ್ತಕಗಳನ್ನು ನೀಡಿ ಅಭಿನಂದಿಸಿದರು.

ಮಂಗಳೂರು ವಿಭಾಗ ಪ್ರಭಾವರಿ ಉದಯಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್‌, ಶಾಸಕರಾದ ಲಾಲಾಜಿ ಮೆಂಡನ್‌, ಮುಖಂಡರಾದ ಯಶ್‌ಪಾಲ್ ಸುವರ್ಣ, ದಿನಕರ ಬಾಬು, ಶಂಕರ ಪೂಜಾರಿ, ಗುರ್ಮೆ ಸುರೇಶ್ ಶೆಟ್ಟಿ, ಗೀತಾಂಜಲಿ ಸುವರ್ಣ, ಶಿಲ್ಪಾ ಜಿ. ಸುವರ್ಣ, ಮಹೇಶ್ ಠಾಕೂರ್, ವೀಣಾ ಶೆಟ್ಟಿ ವೇದಿಕೆಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು