ಶುಕ್ರವಾರ, ಡಿಸೆಂಬರ್ 13, 2019
18 °C
ಉಡುಪಿ: ರಕ್ತ ಸಂಗ್ರಹಣೆಯಲ್ಲಿ ಗುರಿ ಮೀರಿದ ಸಾಧನೆ

ಒಬ್ಬ ರಕ್ತದಾನಿಯಿಂದ ನಾಲ್ಕು ಜೀವಗಳ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜಿಲ್ಲೆಯಲ್ಲಿ ಪ್ರತಿವರ್ಷ ರಕ್ತ ಸಂಗ್ರಹಣೆಯಲ್ಲಿ ಗುರಿಮೀರಿದ ಸಾಧನೆ ಕಂಡುಬಂದಿದ್ದು, ರಕ್ತದ ಕೊರತೆ ನೀಗುವ ನಿಟ್ಟಿನಲ್ಲಿ ಜಿಲ್ಲೆಯು ದಾಪುಗಾಲಿಟ್ಟಿದೆ.

ಯಾವುದೇ ಪ್ರದೇಶದ ಒಟ್ಟು ಜನಸಂಖ್ಯೆಯ ಶೇ 1ರಷ್ಟು ಪ್ರಮಾಣದ ರಕ್ತ ಸಂಗ್ರಹಣೆಯಾದರೆ, ಆ ಪ್ರದೇಶದ ರಕ್ತದ ಕೊರತೆಯನ್ನು ಸರಿದೂಗಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತದೆ. ಅದರಂತೆ ಜಿಲ್ಲೆಯಲ್ಲಿ ಪ್ರತಿವರ್ಷ ನಿಗಧಿತ ಗುರಿಗಿಂತಲೂ ಹೆಚ್ಚಿನ ಪ್ರಮಾಣದ ರಕ್ತ ಸಂಗ್ರಹವಾಗುತ್ತಿರುವುದು ಆಶಾಭಾವ ಮೂಡಿಸಿದೆ.

2015–16ರಲ್ಲಿ 13,000 ಯುನಿಟ್‌ ರಕ್ತ ಸಂಗ್ರಹಣೆ ಗುರಿ ಹೊಂದಲಾಗಿತ್ತು. ಈ ಪೈಕಿ 26,660 ಯುನಿಟ್‌ ರಕ್ತ ಸಂಗ್ರಹವಾಗಿ ಶೇ 205ರಷ್ಟು ಸಾಧನೆಯಾಗಿತ್ತು. ಅದೇರೀತಿ 2016–17ರಲ್ಲಿ 13,000 ಗುರಿಯ ಬದಲಾಗಿ 28,036 ಯುನಿಟ್ ರಕ್ತ ಸಂಗ್ರಹವಾಗಿತ್ತು. 2017–18ರಲ್ಲಿ 13,000 ಗುರಿಗೆ ಬದಲಾಗಿ 27,092 ಯುನಿಟ್ ಸಂಗ್ರಹಿಸಲಾಗಿತ್ತು.

2018–19ರಲ್ಲಿ 28,485 ಯೂನಿಟ್ ರಕ್ತ ಸಂಗ್ರಹವಾದರೆ, 2019–20ರಲ್ಲಿ ಅಕ್ಟೋಬರ್‌ವರೆಗೂ 16,732 ಯೂನಿಟ್ ರಕ್ತ ಸಂಗ್ರಹವಾಗಿದೆ.

ಜಿಲ್ಲೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನದ ಬಗ್ಗೆ ಹೆಚ್ಚಿನ ಅರಿವು ಇರುವುದರಿಂದ ರಕ್ತದ ಕೊರತೆ ಎದುರಾಗಿಲ್ಲ. ಜತೆಗೆ, ವಿವಿಧ ಸಂಘಟನೆಗಳು, ಸ್ವಯಂ ಸೇವಾ ಸಂಸ್ಥೆಗಳು ಏರ್ಪಡಿಸುವ ರಕ್ತದಾನ ಶಿಬಿರಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುತ್ತಾರೆ. ಕಾಲೇಜು ವಿದ್ಯಾರ್ಥಿಗಳೂ ರಕ್ತದಾನ ಶಿಬಿರಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸುಮಾರು 8 ಜಿಲ್ಲೆಗಳಿಂದ ಸಾವಿರಾರು ರೋಗಿಗಳು ಆಗಮಿಸುತ್ತಿದ್ದು, ಅವರ ಚಿಕಿತ್ಸೆಗೂ ಜಿಲ್ಲೆಯಲ್ಲಿ ಸಂಗ್ರಹವಾಗುವ ರಕ್ತ ಬಳಕೆಯಾಗುತ್ತಿದೆ. ಜತೆಗೆ, ಎಲ್ಲಾ ರಕ್ತದ ಗುಂಪಿನ ಸ್ವಯಂ ಪ್ರೇರಿತ ರಕ್ತದಾನಿಗಳ ವಿವರಗಳು ಆರೋಗ್ಯ ಇಲಾಖೆಯಲ್ಲಿ ಲಭ್ಯವಿರುವುದರಿಂದ ತುರ್ತು ಸಂದರ್ಭದಲ್ಲಿ ಅಪರೂಪದ ಗುಂಪಿನ ರಕ್ತ ಪಡೆಯಲು ನೆರವಾಗಿದೆ ಎನ್ನುತ್ತಾರೆ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು.

ಜಿಲ್ಲೆಯಲ್ಲಿ, ಉಡುಪಿ, ಕುಂದಾಪುರ ಮತ್ತು ಕಾರ್ಕಳದಲ್ಲಿ ಬ್ಲಡ್ ಬ್ಯಾಂಕ್ ಸೌಲಭ್ಯವಿದ್ದು, ಆರೋಗ್ಯವಂತ ಪುರುಷರು ವರ್ಷದಲ್ಲಿ 4 ಬಾರಿ, ಮಹಿಳೆಯರು 3 ಬಾರಿ ರಕ್ತದಾನ ಮಾಡಬಹುದು. ಸ್ವಯಂ ಪ್ರೇರಿತ ರಕ್ತದಾನ ಮಾಡುವವರ ವಿವರಗಳನ್ನು, ಆರೋಗ್ಯ ಇಲಾಖೆಯ ಇ-ರಕ್ತಕೋಶ ಪೋರ್ಟಲ್‌ನಲ್ಲಿ ಅಳವಡಿಸಲಾಗಿದ್ದು, ಸ್ವಯಂ ಪ್ರೇರಿತ ರಕ್ತದಾನಿಗೆ ರಕ್ತದಾನ ಮಾಡಬಹುದಾದ ದಿನಾಂಕದ ಬಗ್ಗೆ ಸಂದೇಶ ರವಾನೆಯಾಗುತ್ತದೆ. ಇದರಿಂದ ರಕ್ತದಾನಿಗಳ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ ಅವರು. 

ದೇಶದಲ್ಲಿ 5 ಕೋಟಿ ಯುನಿಟ್ ರಕ್ತದ ಅವಶ್ಯಕತೆ ಇದ್ದು ಇದರಲ್ಲಿ ಅರ್ಧದಷ್ಟು ಪಾಲು ಮಾತ್ರ ದಾನಿಗಳಿಂದ ಪೂರೈಸಲು ಸಾಧ್ಯವಾಗಿದೆ. ಒಬ್ಬ ದಾನಿಯ ರಕ್ತದಿಂದ 4 ಜನರ ಪ್ರಾಣ ಉಳಿಸಬಹುದು. ಆರೋಗ್ಯವಂತ ತರುಣರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿ ಸಾವಿರಾರು ಜನರ ಪ್ರಾಣವನ್ನು ಉಳಿಸಬಹುದು ಎಂದು ಸಲಹೆ ನೀಡಿದರು. 

ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ 10 ಯುನಿಟ್ ರಕ್ತವಿದ್ದು, ರಕ್ತದಾನ ಮಾಡಿದಾಗ ಕೇವಲ 1 ಯುನಿಟ್ ಮಾತ್ರ ತೆಗೆಯಲಾಗುತ್ತದೆ. 18 ವರ್ಷ ಮೇಲ್ಪಟ್ಟ 60ವರ್ಷದವರೆಗಿನ ವ್ಯಕ್ತಿ ರಕ್ತದಾನ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು