ಬೇರೆಯವರ ಮಕ್ಕಳಿಗೆ ಬಟ್ಟೆ ತೊಡಿಸಿದ ಬಿಜೆಪಿ: ಭೋಜೇಗೌಡ ವ್ಯಂಗ್ಯ

ಶುಕ್ರವಾರ, ಏಪ್ರಿಲ್ 26, 2019
21 °C

ಬೇರೆಯವರ ಮಕ್ಕಳಿಗೆ ಬಟ್ಟೆ ತೊಡಿಸಿದ ಬಿಜೆಪಿ: ಭೋಜೇಗೌಡ ವ್ಯಂಗ್ಯ

Published:
Updated:
Prajavani

ಉಡುಪಿ: ಉಡುಪಿ–ಚಿಕ್ಕಮಗಳೂರು ಜಿಲ್ಲೆಯ ಕೆಡಿಪಿ ಸಭೆಗಳಿಗೆ ಗೈರಾಗುವ ಮೂಲಕ ಸಂಸದೆ ಶೋಭಾ ಕರಂದ್ಲಾಜೆ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್‌.ಎಲ್‌.ಭೋಜೇಗೌಡ ವಾಗ್ದಾಳಿ ನಡೆಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಡಿಪಿ ಸಭೆಗಳಲ್ಲಿ ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇಂಥಹ ಸಭೆಗಳನ್ನು ನಿರ್ಲಕ್ಷ್ಯ ಮಾಡಿದ್ದು ಏಕೆ ಎಂದು ಸಂಸದರು ಜನರಿಗೆ ಉತ್ತರಿಸಬೇಕಿದೆ ಎಂದು ಒತ್ತಾಯಿಸಿದರು.

ಕರಾವಳಿಯ ಹೆಮ್ಮೆಯಾಗಿರುವ ವಿಜಯ ಬ್ಯಾಂಕ್‌ ವಿಲೀನ ಪ್ರಕ್ರಿಯೆಯನ್ನು ತಡೆಯುವಲ್ಲಿ ಕರಾವಳಿ ಭಾಗದ ಸಂಸದರು ವಿಫಲರಾಗಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ವಿಜಯ ಬ್ಯಾಂಕ್ ಉಳಿಸಲು ಏಕೆ ಶ್ರಮಿಸಲಿಲ್ಲ. ಪ್ರಯತ್ನಿಸಿದ್ದರೆ ಜನರಿಗೆ ತಿಳಿಸಿ ಎಂದು ಭೋಜೇಗೌಡ ಸವಾಲು ಹಾಕಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಂವಿಧಾನಿಕ ಸಂಸ್ಥೆಗಳಾಗಿರುವ ಸಿಬಿಐ, ಐಟಿ ಇಲಾಖೆಯನ್ನು ಪ್ರಧಾನಿ ನರೇಂದ್ರ ಮೋದಿ ದುರುಪಯೋಗಪಡಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಜೆಡಿಎಸ್‌ ಮುಖಂಡರು ಹಾಗೂ ಅವರ ಆಪ್ತರು, ಸ್ನೇಹಿತರನ್ನು ಗುರಿಯಾಗಿಸಿ ಐಟಿ ದಾಳಿ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದ್ಯ ಪ್ರಜಾಪ್ರಭುತ್ವದ ಅಳಿವು–ಉಳಿವಿನ ಪ್ರಶ್ನೆ ಎದ್ದಿದ್ದು, ಮೋದಿ ಮುಕ್ತ ಭಾರತ ನಿರ್ಮಾಣವಾದರೆ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು. 

ಉಡುಪಿ–ಚಿಕ್ಕಮಗಳೂರು ಸಂಸದರು ಗೆದ್ದು 5 ವರ್ಷವಾದರೂ ಕ್ಷೇತ್ರದಲ್ಲಿ ಮನೆ ಮಾಡಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಹಾಗಾಗಿ, ಸ್ಥಳೀಯರಾದ ಪ್ರಮೋದ್ ಮಧ್ವರಾಜ್ ಅವರಿಗೆ ಮತದಾರರು ಮತ ನೀಡಬೇಕು ಎಂದು ಮನವಿ ಮಾಡಿದರು.

ಉಡುಪಿ–ಚಿಕ್ಕಮಗಳೂರು ಕ್ಷೇತ್ರದಲ್ಲಿ ಊಹೆಗೂ ನಿಲುಕದ ಫಲಿತಾಂಶ ಬರಲಿದೆ. ಚಿಕ್ಕಮಗಳೂರು ಭಾಗದಲ್ಲಿ ಜೆಡಿಎಸ್‌ಗೆ ನಿರೀಕ್ಷೆಗಿಂತ ಹೆಚ್ಚು ಜನಬೆಂಬಲ ಸಿಗಲಿದೆ. ಕಳೆದಬಾರಿಗಿಂತ 50,000ಕ್ಕೂ ಹೆಚ್ಚು ಮತಗಳು ಬೀಳಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಎಸ್‌ಟಿ ಜಾರಿಯಿಂದ ದೇಶದ ಆರ್ಥಿಕತೆ ದಿವಾಳಿಯಾಗಲಿದೆ ಎಂದು ಹಿಂದೆ ಬಿಜೆಪಿ ಟೀಕಿಸಿತ್ತು. ಈಗ ಜಿಎಸ್‌ಟಿಯಿಂದ ಆರ್ಥಿಕ ಕ್ರಾಂತಿಯಾಗುತ್ತಿದೆ ಎನ್ನುತ್ತಿದೆ. ಯುಪಿಎ ಸರ್ಕಾರ ಆಧಾರ್ ಜಾರಿಗೆ ತಂದಾಗ ಲೇವಡಿ ಮಾಡಿದ್ದ ಬಿಜೆಪಿ ಈಗ ಅದನ್ನೇ ಅಪ್ಪಿಕೊಂಡಿದೆ. ಇಂದಿರಾಗಾಂಧಿ ಜಾರಿಗೆ ತಂದ ಯೋಜನೆಗಳನ್ನು ಹೆಸರು ಬದಲಿಸಿ ಜಾರಿಮಾಡಿದೆ. ಹೀಗೆ, ಯಾರೋ ಹುಟ್ಟಿಸಿದ ಮಕ್ಕಳಿಗೆ ಬಟ್ಟೆ ಹೊಲಿಸಿದರೆ ಸ್ವಂತ ಮಕ್ಕಳಾಗುವುದಿಲ್ಲ ಎಂದು ಭೋಜೇಗೌಡ ಲೇವಡಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ಶೆಟ್ಟಿ, ಉದ್ಯಮಿ ಮುನಿಯಾಲು ಉದಯಕುಮಾರ ಶೆಟ್ಟಿ, ಮುಖಂಡರಾದ ವಾಸುದೇವ ರಾವ್, ಪ್ರಕಾಶ್‌ ಶೆಟ್ಟಿ, ರವಿರಾಜ್ ಅವರೂ ಇದ್ದರು.

‘ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನ: ಶೀಘ್ರ ಮುಖ್ಯಮಂತ್ರಿ ಜತೆ ಸಭೆ’

‘ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಈ ಭಾಗದಲ್ಲಿ ರೈತರು ಕಬ್ಬು ಬೆಳೆಯಬೇಕು. ನೀರಾವರಿ ವ್ಯವಸ್ಥೆ ಬೇಕು. ಅಗತ್ಯ ಸೌಲಭ್ಯ ಇಲ್ಲದ ಕಾರಣ ಸರ್ಕಾರದಿಂದ ನೆರವು ಸಿಕ್ಕಿರಲಿಲ್ಲ. ಇನ್ನೂ ಕಾಲ ಮಿಂಚಿಲ್ಲ. ಸಕ್ಕರೆ ಕಾರ್ಖಾನೆ ಪುನಶ್ಚೇತನ ವಿಚಾರವಾಗಿ ಸರ್ಕಾರದ ಬಳಿ ಚರ್ಚಿಸುತ್ತೇನೆ. ರೈತರ ನಿಯೋಗವನ್ನು ಮುಖ್ಯಮಂತ್ರಿಬಳಿ ಕೊಂಡೊಯ್ದು ಸಾಧಕ–ಬಾಧಕಗಳ ಕುರಿತು ಚರ್ಚಿಸಲಾಗುವುದು. ಇದರ ನೇತೃತ್ವವನ್ನು ನಾನೇ ವಹಿಸಿಕೊಳ್ಳುತ್ತೇನೆ’ ಎಂದು ಭೋಜೇಗೌಡ ಭರವಸೆ ನೀಡಿದರು.

‘ಮೋದಿ ಮೋಡಿಯಲ್ಲಿ ಯುವಶಕ್ತಿ’

ಯುವಶಕ್ತಿಯನ್ನು ಸೆಳೆಯುವಲ್ಲಿ ಕಾಂಗ್ರೆಸ್‌–ಜೆಡಿಎಸ್‌ ವಿಫಲವಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಯುವಮತದಾರರು ಮೋದಿ ಅವರ ಡ್ರೆಸ್‌, ಭಾಷಣದ ಮೋಡಿಗೆ ಒಳಗಾಗಿದ್ದಾರೆ. ಅವರಿಗೆ ತಿಳಿವಳಿಕೆ ಮೂಡಿಸುವಲ್ಲಿ ಪಕ್ಷ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಈ ಬಗ್ಗೆ ಪಕ್ಷ ಹೆಚ್ಚಿನ ಗಮನಹರಿಸಲಿದೆ ಎಂದು ಭೋಜೇಗೌಡ ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !