ಬುಧವಾರ, ಮೇ 25, 2022
22 °C
ರಾಷ್ಟ್ರೀಯ ಹೆದ್ದಾರಿ– 66ರ ಸರ್ವಿಸ್‌ ರಸ್ತೆ ಅಪೂರ್ಣ: ಫ್ಲೈಓವರ್‌ಗೆ ಮತ್ತೆ ಆಗ್ರಹ‌

ಬ್ರಹ್ಮಾವರ: ಅವೈಜ್ಞಾನಿಕ ವಿಭಜಕ; ಅಪಘಾತ ಹೆಚ್ಚಳ

ಎ.ಶೇಷಗಿರಿ ಭಟ್‌ Updated:

ಅಕ್ಷರ ಗಾತ್ರ : | |

Prajavani

ಬ್ರಹ್ಮಾವರ: ಹಂದಾಡಿ, ವಾರಂಬಳ್ಳಿ, ಚಾಂತಾರು ಮತ್ತು ಹಾರಾಡಿ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಬ್ರಹ್ಮಾವರ ನಗರವನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ– 66ರ (ಹಿಂದೆ ರಾ.ಹೆ.17) ಹಿಂದಿನ ನಕ್ಷೆಯಲ್ಲಿ ಬದಲಾವಣೆ ತರಲು ಸ್ಥಳೀಯರು ಮತ್ತು ಜನಪ್ರತಿನಿಧಿಗಳು ಹೋರಾಟ, ಬಂದ್‌, ಪ್ರತಿಭಟನೆ ನಡೆಸಿದ್ದರೂ ಸಮಸ್ಯೆಗಳು ಜೀವಂತವಾಗಿವೆ. ಇಂದು ಕೂಡಾ ಕಾಮಗಾರಿ ಪೂರ್ಣಗೊಳಿಸಬೇಕೆಂಬ ಆಗ್ರಹ, ಪ್ರತಿಭಟನೆ ನಡೆಯುತ್ತಲೇ ಇದೆ.

ಸುರತ್ಕಲ್ ಎನ್‌ಐಟಿಕೆ ಬಳಿಯಿಂದ ಕುಂದಾಪುರ ತನಕದ ಸುಮಾರು 90 ಕಿ.ಮೀ. ದೂರ ಹಾಗೂ ₹ 840 ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ 2010 ಮಾರ್ಚ್‌ 9ಕ್ಕೆ ಆರಂಭವಾಗಿತ್ತು. ಒಪ್ಪಂದದ ಅವಧಿ 2012, ಆ.31ಕ್ಕೆ ಮುಗಿದಿತ್ತು. ಕಾಮಗಾರಿ ಮುಗಿಯದ ಕಾರಣ ಅವಧಿಯನ್ನು ಮತ್ತೆ ನಾಲ್ಕು ವರ್ಷ (2014)ಕ್ಕೆ ಮುಂದುವರಿಸಲಾಗಿತ್ತು. ಆದರೆ, 2022 ಬಂದರೂ ಬ್ರಹ್ಮಾವರ ತಾಲ್ಲೂಕು ಸೇರಿದಂತೆ ಜಿಲ್ಲೆಯ ಅನೇಕ ಕಡೆ ಇನ್ನೂ  ಕಾಮಗಾರಿ ಮುಗಿಯದೇ ಇರುವುದು ವಿಪರ್ಯಾಸ.

ಚತುಷ್ಪಥ ಹೆದ್ದಾರಿಯ ಮೂಲನಕ್ಷೆ ಪ್ರಕಾರ ಬ್ರಹ್ಮಾವರದ ಎಸ್‌.ಎಂ.ಎಸ್‌. ಕಾಲೇಜು ಬಳಿಯಿಂದ ಧರ್ಮಾವರದ ತನಕ ಮೇಲ್ಸೇತುವೆ ನಿರ್ಮಾಣವಾಗಬೇಕಿತ್ತು. ಆದರೆ, ಅಂದು ಬಸ್‌ ನಿಲ್ದಾಣದ ಬಳಿ ಮೇಲ್ಸೇತುವೆ ಬೇಡ ಎಂದು ಕಾಮಗಾರಿ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದರು. ನಂತರ 2010ರಲ್ಲಿ ಬ್ರಹ್ಮಾವರದ ಬಸ್‌ ನಿಲ್ದಾಣದ ಬಳಿ ಅಂಡರ್‌ಪಾಸ್ ಕಾಮಗಾರಿ ನಿಲ್ಲಿಸಿ ಮೇಲ್ಸೇತುವೆ ಅಥವಾ ನೆಲಮಟ್ಟದಲ್ಲಿ ರಸ್ತೆ ರಚನೆಗೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ–66 ಉಳಿಸಿ ಹೋರಾಟ ಸಮಿತಿ ಮತ್ತು ವಿವಿಧ ಸ್ಥಳೀಯ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿತ್ತು. ಕೊನೆಗೂ ಹೋರಾಟಕ್ಕೆ ಮಣಿದು ಬ್ರಹ್ಮಾವರದಲ್ಲಿ ನೆಲಮಟ್ಟದಲ್ಲಿ ಹೆದ್ದಾರಿ ನಿರ್ಮಿಸಿ, ಬಸ್‌ ನಿಲ್ದಾಣದ ಕೆಲವೇ ಮೀಟರ್‌ಗಳ ಅಂತರದಲ್ಲಿ ಕ್ಯಾಟಲ್‌ಪಾಸ್‌ ಅವಕಾಶ ನೀಡಿ ಹೆದ್ದಾರಿ ನಿರ್ಮಾಣವಾಯಿತು.
ಆದರೆ, ಇದರಿಂದಲೂ ಬ್ರಹ್ಮಾವರ ಹಾಗೂ ಆಸುಪಾಸಿನ ಜನರ ಸಮಸ್ಯೆಗಳಿಗೆ ಮುಕ್ತಿ ಸಿಗದೆ ಇರುವುದು ದುರದೃಷ್ಟ.

ಸಮಸ್ಯೆಗಳು ಹಲವಾರು: ಉಪ್ಪೂರು ಕೆ.ಜಿ.ರೋಡ್‌ನಿಂದ ಕೋಟದವರೆಗೆ ಇರುವ ಅವೈಜ್ಞಾನಿಕ ಡಿವೈಡರ್‌ಗಳಿಂದ ಅನೇಕ ಅಪಘಾತಗಳು ಸಂಭವಿಸಿ ಅನೇಕರ ಸಾವು ನೋವಿಗೂ ಕಾರಣವಾಗಿದೆ. ಪ್ರಮುಖವಾಗಿ ಉಪ್ಪೂರು ಕೊಳಲಗಿರಿಗೆ ಹೋಗಲು ಕೆ.ಜಿ.ರೋಡ್‌ನಲ್ಲಿ ಇರುವ ಡಿವೈಡರ್‌, ಉಪ್ಪೂರು ಜಾತಬೆಟ್ಟು, ಚಿತ್ತಾರಿಗೆ ಸಾಗಲು ಉಪ್ಪೂರು ಬಸ್‌ ನಿಲ್ದಾಣದ ಬಳಿ ಇರುವ ರಸ್ತೆ ವಿಭಜಕ, ಬ್ರಹ್ಮಾವರದ ಮಹೇಶ್‌ ಆಸ್ಪತ್ರೆ ಮತ್ತು ಬಸ್‌ ನಿಲ್ದಾಣದ ಬಳಿಯ ಡಿವೈಡರ್‌ ಮತ್ತು ಬಾರ್ಕೂರು ಪ್ರವೇಶಿಸಲು ಇರುವ ರಸ್ತೆ ವಿಭಜಕ ಮತ್ತು ಕುಮ್ರಗೋಡಿನಲ್ಲಿರುವ ರಸ್ತೆ ವಿಭಜಕಗಳ ಬಳಿ ಹೆಚ್ಚಿನ ಅಪಘಾತಗಳು ಸಂಭವಿಸಿವೆ. ಇಲ್ಲಿ ಸರಿಯಾದ ಸರ್ವಿಸ್‌ ರಸ್ತೆಗಳು ಇಲ್ಲದೆ ಇರುವುದು ಅಪಘಾತಕ್ಕೆ ಕಾರಣವಾಗಿದೆ ಎಂಬುದು
ಸ್ಥಳೀಯರ ದೂರು.

ಬ್ರಹ್ಮಾವರದ ಎಸ್‌.ಎಂ.ಎಸ್‌. ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ಸಾವಿರಾರು ವಿದ್ಯಾರ್ಥಿಗಳು ಪ್ರತಿನಿತ್ಯ ಅಪಾಯಕಾರಿ ಹೆದ್ದಾರಿ ದಾಟಿ ಬಸ್ಸಿಗೆ ಹೋಗುವ ಸ್ಥಿತಿ ಇದೆ. ಮಹೇಶ್‌ ಆಸ್ಪತ್ರೆ ಬಳಿ ಬ್ಯಾಂಕ್‌, ಎಲ್‌.ಐ.ಸಿ ಹಾಗೂ ಶಾಪಿಂಗ್‌ಗೆ ಬರುವವರು/ ಹೋಗುವವರಿಗೆ ರಸ್ತೆ ದಾಟುವ ಸಮಸ್ಯೆ, ಬ್ರಹ್ಮಾವರ ಬಸ್‌ ನಿಲ್ದಾಣಕ್ಕೆ ಉಡುಪಿ ಕಡೆಯಿಂದ ಬರುವ ಮತ್ತು ನಿಲ್ದಾಣದಿಂದ ಕುಂದಾಪುರಕ್ಕೆ ಹೋಗುವ ಬಸ್‌ಗಳು ಹೆದ್ದಾರಿ ದಾಟಿ ಬರಬೇಕಾದ ಪರಿಸ್ಥಿತಿ, ಹೆದ್ದಾರಿಯಿಂದ ಬಾರ್ಕೂರು ಪ್ರವೇಶಿಸಲು/ ಹೊರ ಬರಲು, ಬಸ್‌ ನಿಲ್ದಾಣದಿಂದ ಸರ್ಕಾರಿ ಆಸ್ಪತ್ರೆಗೆ ಹೋಗಲು/ ಬರಲು ಇರುವ ಗಂಭೀರ ಸಮಸ್ಯೆಗಳು ಹೆದ್ದಾರಿಯಿಂದ ಸೃಷ್ಟಿಯಾಗಿದೆ.

ಪರಿಹಾರ ಏನು?: ಬ್ರಹ್ಮಾವರದ ಎಸ್‌.ಎಂ.ಎಸ್‌ ಪದವಿ ಪೂರ್ವ ಕಾಲೇಜಿನಿಂದ ಧರ್ಮಾವರದವರೆಗೆ ಮೇಲ್ಸೇತುವೆ ನಿರ್ಮಾಣವಾಗುವುದರಿಂದ ಹೆಚ್ಚಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಬ್ರಹ್ಮಾವರದ ಪಾರ್ಕಿಂಗ್‌ ಸಮಸ್ಯೆ, ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗುವ ಬರುವವರಿಗೆ, ಶಾಲಾ ಕಾಲೇಜುಗಳಿಗೆ ಹೋಗಿ ಬರುವ ವಿದ್ಯಾರ್ಥಿಗಳಿಗೆ, ಬಾರ್ಕೂರು ಮಂದಾರ್ತಿ ಹೋಗುವವರಿಗೆ ಉಪ್ಪಿನಕೋಟೆಗೆ ಹೋಗುವ ಗ್ರಾಮಸ್ಥರಿಗೆ, ಇಂದಿರಾನಗರದ ನಿವಾಸಿಗಳಿಗೆ ಮೇಲ್ಸೇತುವೆ ನಿರ್ಮಾಣದಿಂದ ಲಾಭ ಸಿಗಲಿದೆ.

ಡಿವೈಡರ್/ಸೇತುವೆ‌ ಬೇಡಿಕೆ: ಬ್ರಹ್ಮಾವರದ ದೂಪದ ಕಟ್ಟೆ ಬಳಿ ಹಾರಾಡಿ ಸಾಲಿಕೇರಿಗೆ ರಸ್ತೆ ವಿಭಜಕ ಬೇಕೆಂಬ ಬೇಡಿಕೆ ಸ್ಥಳೀಯರದ್ದು. ಹಾರಾಡಿಯಲ್ಲಿ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು, ಸಕ್ಕರೆ ಕಾರ್ಖಾನೆಗೆ ಬ್ರಹ್ಮಾವರದಿಂದ ಹೋಗಲು ಸದ್ಯ ರುಡ್‌ಸೆಟ್‌ ರಸ್ತೆ ವಿಭಜಕದಲ್ಲಿ ಸಾಗಬೇಕಾಗಿದ್ದು, ದೂಪದಕಟ್ಟೆಯಲ್ಲೇ ರಸ್ತೆ ವಿಭಜಕ ನೀಡಿದಲ್ಲಿ ಉತ್ತಮ ಎನ್ನುವುದು ಸ್ಥಳೀಯರ ಆಗ್ರಹ. ಇದಲ್ಲದೇ ಮೇಲ್ಸೇತುವೆ ರಚನೆ ಆಗದೇ ಇದ್ದ ಪಕ್ಷದಲ್ಲಿ ಮಹೇಶ್‌ ಆಸ್ಪತ್ರೆ ಅಥವಾ ಎಸ್‌.ಎಂ.ಎಸ್. ಬಳಿ ಮೇಲ್ಸೇತುವೆ ನಿರ್ಮಿಸುವಂತೆ ವಿದ್ಯಾರ್ಥಿಗಳ ಆಗ್ರಹವಾಗಿದೆ. ಬ್ರಹ್ಮಾವರ ಬಸ್‌ನಿಲ್ದಾಣ ಮತ್ತು ಆಕಾಶವಾಣಿ ವೃತ್ತದ ಬಳಿಯೂ ಪರಿಹಾರಕ್ಕೆ ವಾಹನ ಸವಾರರಿಂದ ಒತ್ತಾಯ ಕೇಳಿ ಬಂದಿದೆ.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.