ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮಾವರ | ಅಪೂರ್ಣ ಕಾಮಗಾರಿ: ಸವಾರರ ಸಂಕಷ್ಟ

ರಾಷ್ಟ್ರೀಯ ಹೆದ್ದಾರಿ–66ರ ಚತುಷ್ಪಥ ರಸ್ತೆ ಅವ್ಯವಸ್ಥೆ l 12 ವರ್ಷ ಕಳೆದರೂ ಪೂರ್ಣಗೊಳ್ಳದ ಸರ್ವಿಸ್ ರಸ್ತೆ
Last Updated 7 ಫೆಬ್ರುವರಿ 2022, 5:20 IST
ಅಕ್ಷರ ಗಾತ್ರ

ಬ್ರಹ್ಮಾವರ: ಕರಾವಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿನ ಅವ್ಯವಸ್ಥೆಗೆ ಸಾರ್ವಜನಿಕರು ರೋಸಿ ಹೋಗಿದ್ದಾರೆ. ಒಂದೆಡೆ ಅಪೂರ್ಣ ಸರ್ವೀಸ್ ರಸ್ತೆ ಕಾಮಗಾರಿ, ಅವೈಜ್ಞಾನಿಕ ಕಾಮಗಾರಿ, ‘ಯು– ಟರ್ನ್‌’ ಸಮಸ್ಯೆ, ಹೆದ್ದಾರಿಯಲ್ಲಿ ತ್ಯಾಜ್ಯ ನಿರ್ವಹಣೆ ಹೀಗೆ ಸಮಸ್ಯೆಗಳು ಒಂದೆರಡಲ್ಲ. ನಿಯಮಬದ್ಧವಾಗಿ ನಡೆಯದ ಕಾಮಗಾರಿಯ ಪರಿಣಾಮ ನಿರಂತರ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಹಲವು ಜೀವಗಳು ಬಲಿಯಾಗಬೇಕಾಗಿದೆ.

ಸುರತ್ಕಲ್‌ನ ಎನ್‌ಐಟಿಕೆ ಬಳಿಯಿಂದ ಕುಂದಾಪುರದವರೆಗೂ 90.8 ಕಿ.ಮೀ. ಉದ್ದದ ₹ 840 ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ–66ರ (ಅಂದು ಎನ್‌.ಎಚ್‌ 17) ಚತುಷ್ಪಥ ಕಾಮಗಾರಿ 2010ರ ಮಾರ್ಚ್‌ 9ಕ್ಕೆ ಆರಂಭವಾಗಿ, 2012ಕ್ಕೆ ಮುಗಿಯಬೇಕಿತ್ತು. ಹೆದ್ದಾರಿ ಕಾಮಗಾರಿ ಮುಗಿದರೂ ನಿಯಮದಂತೆ ಸರ್ವೀಸ್ ರಸ್ತೆ ಸೇರಿದಂತೆ ಇತರೆ ಕಾಮಗಾರಿ ಮುಗಿಯದೆ ಇಂದಿಗೂ ವಾಹನ ಸವಾರರು ಸಮಸ್ಯೆ ಎದುರಿಸುವಂತಾಗಿದೆ.

ಸಾಲಿಗ್ರಾಮ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಸರ್ವಿಸ್‌ ರಸ್ತೆ ಹಾಗೂ ಹಲವು ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅದಕ್ಕೂ ಮುನ್ನವೇ ಎರಡು ಕಡೆಗಳಲ್ಲಿ ಟೋಲ್‌ ಸಂಗ್ರಹಣೆ ನಡೆಯುತ್ತಿದ್ದು, ನವಯುಗ ಕಂಪನಿಯ ವಿರುದ್ಧ ಜಿಲ್ಲೆಯ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಚತುಷ್ಟಥ ರಸ್ತೆ ಕಾಮಗಾರಿ ನಡೆದರೂ ಅಂಡರ್‌ಪಾಸ್‌, ಬೀದಿ ದೀಪಗಳ ಅಸಮರ್ಪಕ ನಿರ್ವಹಣೆ, ‘ಯು–ಟರ್ನ್‌’ ಸಮಸ್ಯೆ, ಮೇಲ್ಸೇತುವೆ ಯಿಂದ ಸರ್ವಿಸ್‌ ರಸ್ತೆಗೆ ಸರಿಯಾದ ಸಂಪರ್ಕ ಇಲ್ಲದಿರುವುದು. ಪ್ರಮುಖ ತಿರುವು ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಅವೈಜ್ಞಾನಿಕ ಕಾಮಗಾರಿ, ಸರ್ವಿಸ್‌ ರಸ್ತೆ ಕಾಮಗಾರಿ ಅಪೂರ್ಣವಾಗಿದ್ದು, ಸವಾರರು ಸಂಕಷ್ಟ ಎದುರಿಸುವಂತಾಗಿದೆ.

ಜತೆಗೆ, ಸ್ಥಳೀಯರಿಂದ ಟೋಲ್‌ ಸಂಗ್ರಹ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಇದರ ಜತೆಗೆ ಟೋಲ್‌ಗೇಟ್‌ ಬಳಿ ತ್ಯಾಜ್ಯ ವಿಲೇವಾರಿಯೂ ಸರಿಯಾಗಿ ನಡೆಯದೆ, ಅಕ್ಕಪಕ್ಕದ ನಿವಾಸಿಗಳಿಗೆ ಹಾಗೂ ಶಾಲಾ ಕಾಲೇಜುಗಳಿಗೆ ಸಮಸ್ಯೆಯಾಗಿದೆ ಎಂಬ ದೂರುಗಳು ವ್ಯಾಪಕವಾಗಿವೆ.

ಸಾಸ್ತಾನ ಟೋಲ್‌ಗೇಟ್‌ ಬಳಿ ಸಾಲಾಗಿ ನಿಲ್ಲುವ ಲಾರಿಗಳು ತ್ಯಾಜ್ಯವನ್ನು ರಸ್ತೆ ಬದಿಗೆ ಬಿಸಾಡಿ ಹೋಗುತ್ತಾರೆ. ಇದರಿಂದ ಸ್ಥಳೀಯ ಗ್ರಾಮಸ್ಥರಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ಕ್ರಮಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಹೀಗೆ ಸಮಸ್ಯೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಕೆಲವೆಡೆ ಸ್ಥಳೀಯರ ನಿರಂತರ ಹೋರಾಟದಿಂದ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ಸಿಕ್ಕಿದೆಯಾದರೂ, ಸಾಲಿಗ್ರಾಮದ ಸರ್ವಿಸ್‌ ರಸ್ತೆ ಅವ್ಯವಸ್ಥೆಗೆ ಮಾತ್ರ ಪರಿಹಾರ ದೊರಕದಿರುವುದು ಸಾರ್ವಜನಿಕರ ತಾಳ್ಮೆಗೆಡಿಸಿದೆ.

ಸಾಲಿಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಆರಂಭಿಸುವಾಗ ಹೆದ್ದಾರಿಯ ಎರಡೂ ಬದಿಗಳಲ್ಲಿ 800 ಮೀಟರ್ ಉದ್ದದ ಸರ್ವಿಸ್‌ ರಸ್ತೆ ನಿರ್ಮಾಣ ಮಾಡುವ ವಿಚಾರ ನಕ್ಷೆಯಲ್ಲಿ ಇದ್ದರೂ, ಗುತ್ತಿಗೆ ಪಡೆದ ಕಂಪೆನಿ ಕೆಲಸ ಪೂರ್ಣಗೊಳಿಸಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಚಿತ್ರಪಾಡಿ ಶಾಲೆಯಿಂದ ಆರಂಭಿಸಿ ಕಾರ್ಕಡ ರಸ್ತೆಯ ತಿರುವಿನವರೆಗೆ ಸರ್ವಿಸ್‌ ರಸ್ತೆ ಕಾಮಗಾರಿಯನ್ನು ಸ್ಥಳೀಯರ ಹೋರಾಟದ ನಂತರ ಶೇ 20ರಷ್ಟು ಮಾತ್ರ ನಡೆಸಿ ಅರ್ಧಕ್ಕೆ ಕೈಬಿಡಲಾಗಿದೆ. ಕಾಮಗಾರಿ ವಿಳಂಬದ ವಿರುದ್ಧ ಹೆದ್ದಾರಿ ಹೋರಾಟ ಸಮಿತಿ ಸಾಕಷ್ಟು ಹೋರಾಟಗಳನ್ನು ನಡೆಸಿದ್ದರೂ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ.

ಗುತ್ತಿಗೆದಾರ ನವಯುಗ ಕಂಪನಿ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ಹಲವು ಬಾರಿ ನೀಡಿದ್ದರೂ ಈಡೇರಿಲ್ಲ. ಕೊಟ್ಟ ಮಾತಿಗೆ ಬದ್ಧವಾಗಿ ನಡೆದುಕೊಳ್ಳುತ್ತಿಲ್ಲ, ಸದಾ ಒಂದಿಲ್ಲೊಂದು ನೆವವೊಡ್ಡಿ ನುಣುಚಿಕೊಳ್ಳುತ್ತಿದ್ದಾರೆ ಎಂದು ದೂರುತ್ತಾರೆ ಹೆದ್ದಾರಿ ಹೋರಾಟ ಸಮಿತಿಯ ಪ್ರತಾಪ್‌ ಶೆಟ್ಟಿ.

ಸರ್ವಿಸ್‌ ರಸ್ತೆಯ ಅವಶ್ಯಕತೆ ಯಾಕೆ: ಕಾರ್ಕಡ ರಸ್ತೆಯಿಂದ ಮೀನು ಮಾರುಕಟ್ಟೆವರೆಗೆ ಎರಡೂ ಕಡೆಗಳಲ್ಲಿ ಸರ್ವೀಸ್ ರಸ್ತೆ ನಿರ್ಮಾಣವಾಗಬೇಕು. ರಸ್ತೆ ನಿರ್ಮಾಣವಾಗದ ಪರಿಣಾಮ ಕಾವಡಿ ರಸ್ತೆ ಮೂಲಕ ಸಾಲಿಗ್ರಾಮ ಪೇಟೆಗೆ ಬರುವ ವಾಹನ ಸವಾರರು ನಿಯಮ ಉಲ್ಲಂಘಿಸಿ 500 ಮೀಟರ್ ಹೆದ್ದಾರಿಯಲ್ಲೇ ಸಾಗಬೇಕಾಗಿದೆ. ಪ್ರತಿದಿನ ಸಾವಿರಾರು ವಾಹನಗಳು ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿರುವು ದರಿಂದ ಅಪಘಾತಗಳು, ಜೀವ ಹಾನಿ ಸಾಮಾನ್ಯವಾಗಿಬಿಟ್ಟಿವೆ.

ಯೋಜನೆಯ ಪ್ರಕಾರ ಎರಡೂ ಕಡೆ ಸರ್ವಿಸ್‌ ರಸ್ತೆಯೊಂದಿಗೆ ಚರಂಡಿ ನಿರ್ಮಾಣಗೊಳ್ಳಬೇಕಿತ್ತು. ಇದಕ್ಕಾಗಿ ಒತ್ತುವರಿ ಕಟ್ಟಡಗಳನ್ನು ತೆರವುಗೊಳಿಸಿ ಒಳಚರಂಡಿ, ರಸ್ತೆ ನಿರ್ಮಾಣ ಕಾಮಗಾರಿಯನ್ನೂ ಪ್ರಾರಂಭಿಸಲಾಗಿತ್ತು. ಆದರೆ, ಅರ್ಧಕ್ಕೆ ನಿಂತ ಕಾಮಗಾರಿಯಿಂದ ಚರಂಡಿಯಿಂದ ಮುಖ್ಯ ಕಾಲುವೆಗೆ ಸಂಪರ್ಕವಿಲ್ಲದೆ ಹೆದ್ದಾರಿ ಬದಿಯಲ್ಲೇ ಕೊಳಚೆ ನೀರು ಶೇಖರಣೆಗೊಂಡು ಗಬ್ಬುವಾಸನೆಯಲ್ಲಿ ನಾಗರಿಕರು ಸಂಚರಿಸುವಂತಾಗಿದೆ. ಮಳೆಗಾಲದಲ್ಲಿಯೂ ಪೇಟೆಯ ನೀರು ಹರಿದು ಹೋಗಲು ದಾರಿ ಇಲ್ಲದೆ ಹಲವು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ.

ಸರ್ವಿಸ್‌ ರಸ್ತೆ ಸಮಸ್ಯೆ ಸೇರಿದಂತೆ ಹೆದ್ದಾರಿ ಸಮಸ್ಯೆ ಬಗೆಹರಿಸಲು ಸಾಲಿಗ್ರಾಮ ಪಟ್ಟಣ ಪಂಚಾಯಿತಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರಿಗೆ ಮನವಿ ನೀಡಲಾಗಿದೆ. ಶೀಘ್ರ ಅಧಿಕಾರಿಗಳ ಸಭೆ ಕರೆದು ಸರ್ವಿಸ್‌ ರಸ್ತೆ, ಟೋಲ್‌ ಬಳಿಯ ತ್ಯಾಜ್ಯದ ಸಮಸ್ಯೆ, ಬೀದಿದೀಪ, ಕೊಳಚೆ ನೀರಿನ ಸಮಸ್ಯೆಗಳ ಪರಿಹಾರದ ಬಗ್ಗೆ ಚರ್ಚಿಸಲಾಗುವುದು ಎಂದು ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಲತಾ ಹೆಗ್ಡೆ ತಿಳಿಸಿದ್ದಾರೆ.

ಸಮಸ್ಯೆ ಬಗೆಹರಿಸಿ: ಸಾಲಿಗ್ರಾಮದಲ್ಲಿ ಸರ್ವಿಸ್‌ ರಸ್ತೆ ನಿರ್ಮಿಸದೆ ಪಾದಚಾರಿ, ದ್ವಿಚಕ್ರ ವಾಹನ ಸವಾರಿಗೆ ಸಂಕಷ್ಟ ಎದುರಾಗಿದ್ದು, ಅಪಘಾತದಲ್ಲಿ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದೇವಸ್ಥಾನದ ಎದುರಿಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ‘ಯು– ಟರ್ನ್‌’ ಅಗಲ ವಾಗಿರುವುದರಿಂದ ಅಫಘಾತ ಗಳು ಹೆಚ್ಚಾಗಿ ಸಂಭವಿಸಿದೆ. ಎರಡೂ ಸಮಸ್ಯೆ ಯನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿ ಗಳು ಗಂಭೀರವಾಗಿ ತೆಗೆದುಕೊಂಡು ಶೀಘ್ರ ಪರಿಹರಿಸಬೇಕು ಎನ್ನುತ್ತಾರೆ ಹೋರಾಟ ಸಮಿತಿಯ ನಾಗರಾಜ ಗಾಣಿಗ ಸಾಲಿಗ್ರಾಮ.

ಮಾರ್ಚ್‌ 10ಕ್ಕೆ ಹೆದ್ದಾರಿ ಬಂದ್‌: ಎಚ್ಚರಿಕೆ
ಫೆ. 20ರೊಳಗೆ ಅಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಮಾರ್ಚ್ 10ಕ್ಕೆ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಹಾಗೂ ನಾಗರಿಕರೊಂದಿಗೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ಶ್ಯಾಮಸುಂದರ ನಾಯರಿ ಎಚ್ಚರಿಕೆ ನೀಡಿದ್ದಾರೆ.

ಉರಿಯದ ದಾರಿ ದೀಪಗಳು
ಉಡುಪಿಯ ಕರಾವಳಿ ಜಂಕ್ಷನ್‌ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡು ವರ್ಷಗಳು ಕಳೆದರೂ ಮೇಲ್ಸೇತುವೆ ಮೇಲೆ ಹಾಕಲಾಗಿರುವ ವಿದ್ಯುತ್ ಕಂಬಗಳಿಗೆ ಇದುವರೆಗೂ ವಿದ್ಯುತ್ ಸಂಪರ್ಕ ನೀಡಲಾಗಿಲ್ಲ. ಪರಿಣಾಮ ರಾತ್ರಿಯ ಹೊತ್ತು ಮೇಲ್ಸೇತುವೆ ಮೇಲೆ ಹಾಗೂ ಸರ್ವೀಸ್ ರಸ್ತೆಯಲ್ಲಿ ವಾಹನಗಳ ಸಂಚಾರ ದುಸ್ತರವಾಗಿದೆ. ಈ ಭಾಗದಲ್ಲಿ ಅಪಘಾತಗಳು ಸಾಮಾನ್ಯ ಎನ್ನುವಂತಾಗಿದೆ.

ಬೀದಿದೀಪಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ನಿರಂತರ ಹೋರಾಟಗಳು ನಡೆದರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾಗಲಿ, ನಗರಸಭೆಯಾಗಲಿ ಜಿಲ್ಲಾಡಳಿತವಾಗಲಿ ಸ್ಪಂದಿಸಿಲ್ಲ. ಒಂದು ವಾರದಿಂದಚಿಮಣಿ ಪ್ರತಿಭಟನೆ ನಡೆಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಅನ್ಸಾರ್ ಅಹಮದ್ ಆಕ್ರೋಶ ವ್ಯಕ್ತಪಡಿಸಿದರು.

15 ದಿನ ಗಡುವು
ಕರಾವಳಿ ಬೈಪಾಸ್‌ ಬಳಿಯ ರಾಷ್ಟ್ರೀಯ ಹೆದ್ದಾರಿಯ ದಾರಿದೀಪ ಹಾಗೂ 169 ಎ ವ್ಯಾಪ್ತಿಯ ಉಡುಪಿ ಮಣಿಪಾಲವರೆಗಿನ ರಸ್ತೆಯ ಬದಿಯ ಬೀದಿದೀಪಗಳ ಸಮಸ್ಯೆಯನ್ನು 15 ದಿನಗಳೊಳಗೆ ಬಗೆಹರಿಸದಿದ್ದರೆ ಕರಾವಳಿ ಜಂಕ್ಷನ್‌ ಬಳಿ ಅನಿರ್ದಿಷ್ಟಾವಧಿ
ಧರಣಿ ನಡೆಸಲಾಗುವುದು ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಅನ್ಸಾರ್ ಅಹಮದ್‌ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT