ಬೈಂದೂರು: ಹೆಚ್ಚು ಯುವ ಶಕ್ತಿಯನ್ನು ಹೊಂದಿರುವ ಭಾರತದಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಉದ್ಯೋಗ ನೀಡಲು ₹2 ಲಕ್ಷ ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿರಿಸಲಾಗಿದೆ. ನಗರ ಪ್ರದೇಶಗಳಲ್ಲಿ ಮಾತ್ರ ನಡೆಯುವ ಈ ಅಂತರರಾಷ್ಟ್ರೀಯ ಉದ್ಯೋಗ ಮೇಳವನ್ನು ಬೈಂದೂರಿನಲ್ಲಿ ಆಯೋಜಿಸಿ ಅನೇಕ ಕಂಪನಿಗಳನ್ನು ಒಂದೇ ಸೂರಿನಡಿ ತರುವಲ್ಲಿ ಶ್ರಮಿಸಿದ ಸಮೃದ್ಧ ಬೈಂದೂರು ತಂಡದ ಕಾರ್ಯ ಶ್ಲಾಘನೀಯ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಇಲ್ಲಿನ ಜೆ.ಎನ್.ಆರ್ ಕಲಾಮಂದಿರದಲ್ಲಿ ಸಮೃದ್ಧ ಬೈಂದೂರು ಆಶ್ರಯದಲ್ಲಿ ನ್ಯಾಷನಲ್ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೋರೇಷನ್, ಅಜಿನರ್‍ಹಾ ಸಂಸ್ಥೆ ಸಹಭಾಗಿತ್ವದಲ್ಲಿ ನಡೆದ ಅಂತರರಾಷ್ಟ್ರೀಯ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಶೇ 22 ಖಾಸಗಿ ಉದ್ಯೋಗ ಮಾಡುತ್ತಿದ್ದು ಕೇಂದ್ರ ಸರ್ಕಾರದ ಕೌಶಲಾಭಿವೃದ್ಧಿ ಯೋಜನೆಯ ಪ್ರಯೋಜನ ಪಡೆದು ಬೇರೆ ದೇಶಗಳಲ್ಲಿ ಉದ್ಯೋಗ ಪಡೆದು ಉತ್ತಮ ಜೀವನ ನಡೆಸುವಂತಾಗಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಕೌಶಲ ತರಬೇತಿಗಾಗಿ ದೂರದ ನೊಯ್ಡಾಕ್ಕೆ ಹೋಗಲು ಕಷ್ಟವಾಗಿದ್ದು ಕೌಶಲ ತರಬೇತಿ ಕೇಂದ್ರ ಬೈಂದೂರಿನಲ್ಲಿಯೇ ನಡೆಸಲು ಬೇಕಾಗುವ ಎಲ್ಲಾ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು.
ಆದ್ಯತೆ ಮೇರೆಗೆ ಬೈಂದೂರು ಅಭಿವೃದ್ಧಿಗಾಗಿ ವತ್ತಿನೆಣೆಯಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಾಣ, ರೈಲ್ವೇ ಸೆಂಟರ್ ವಿಸ್ತಾರಗೊಳಿಸಲು, ಕೊಡಚಾದ್ರಿ ಕೇಬಲ್ ಕಾರ್, ಬೀಚ್‌ಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಪ್ರವಾಸೋದ್ಯಮವನ್ನು ಇನ್ನಷ್ಟು ಉತ್ತಮ ಪಡಿಸುವ ಮೂಲಕ ನಂಜುಂಡಪ್ಪ ವರದಿಯಲ್ಲಿರುವ ಬೈಂದೂರು ಹಿಂದುಳಿದಿರುವ ತಾಲ್ಲೂಕು ಹಣೆಪಟ್ಟಿಯಿಂದ ಹೊರತರುವ ಪ್ರಯತ್ನ ಮಾಡಲಾಗುವುದು ಎಂದರು.
ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ನ್ಯಾಷನಲ್ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೋರೇಷನ್ ಪಾರ್ಟ್ನರ್ ಸುರೇಜ್ ಘೋಷ್, ಸಂಸ್ಥೆಯ ಪಾಲುದಾರ ಸುಬೇಚಾ ಗೋಷ್, ಎಲ್.ಐ.ಸಿ ಜಪಾನ್ ಜನರಲ್ ಮೆನೇಜರ್ ಇಮಿಲ್ ನಾಯ್ ಹಾಂಗ್ ಲೈ, ಟೋಕಿಯೊ ಸ್ಟೇಟ್‌ಬ್ಯಾಂಕ್ ಕಾರ್ಪೊರೇಶನ್ ಜನರಲ್ ಮೆನೇಜರ್ ಸಾಚಿ ಕಿಡಾಚಿ, ವೋಯೆಜ್ ಗ್ರೂಪ್ ಜರ್ಮನಿ ಮೆನೇಜಿಂಗ್ ಡೈರೆಕ್ಟರ್ ರೋನಿ, ಅಜಿನರ್‍ಹಾ ಕಂಪನಿ ಮಾರ್ಕೆಟಿಂಗ್ ಡೈರೆಕ್ಟರ್ ಅಜೋ ಅಗಸ್ಟಿನ್, ನಿರ್ದೇಶಕ ಸೇತುರಾಮ್ ನಾಯರ್, ಉದ್ಯಮಿ ವೆಂಕಟೇಶ ಕಿಣಿ, ಕೃಷ್ಣ್ಣಪ್ರಸಾದ್ ಅಡ್ಯಂತಾಯ, ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್ ಇದ್ದರು.
ಸಮೃದ್ಧ ಜನಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಸುರೇಶ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕುಂದಾಪುರ ಜ್ಞಾನಜ್ಯೋತಿ ಅಕಾಡೆಮಿ ಮೆನೇಜಿಂಗ್ ಡೈರೆಕ್ಟರ್ ಸತ್ಯನಾರಾಯಣ ಗಾಣಿಗ ಸ್ವಾಗತಿಸಿದರು. ಶಿಕ್ಷಕ ಸುಬ್ರಹ್ಮಣ್ಯ ಜಿ. ಉಪ್ಪುಂದ ನಿರೂಪಿಸಿದರು. ಪುಷ್ಪರಾಜ ಶೆಟ್ಟಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.