ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಗೆ ಬೇಕು ಸರ್ಕಾರಿ ಮೆಡಿಕಲ್ ಕಾಲೇಜು

ಕ್ಯಾಂಪಸ್ ಫ್ರಂಟ್ ಆಫ್‌ ಇಂಡಿಯಾ ಒತ್ತಾಯ, ಹೋರಾಟಕ್ಕೆ ಸಜ್ಜು
Last Updated 21 ಜೂನ್ 2021, 11:28 IST
ಅಕ್ಷರ ಗಾತ್ರ

ಉಡುಪಿ: ರಾಜ್ಯದಲ್ಲಿ 19 ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಿದ್ದರೂ ಬುದ್ದಿವಂತರ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲದಿರುವುದು ಅವಮಾನದ ಸಂಗತಿ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾ ಘಟಕದ ಅಧ್ಯಕ್ಷ ಅಸೀಲ್ ಅಕ್ರಂ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಜಿಲ್ಲೆಗೊಂದು ಮೆಡಿಕಲ್‌ ಕಾಲೇಜು ಬೇಕು ಎಂಬ ಬೇಡಿಕೆಯ ಬಗ್ಗೆ ಗಮನ ಹರಿಸಲು ಸಮಯವಿಲ್ಲದಂತಾಗಿದೆ ಎಂದು ಟೀಕಿಸಿದರು.

ಜಿಲ್ಲೆಗೊಂದು ಮೆಡಿಕಲ್‌ ಕಾಲೇಜು ಬೇಕು ಎಂಬ ಬೇಡಿಕೆಯನ್ನಿಟ್ಟುಕೊಂಡು ಹೋರಾಟ ನಡೆಸಲು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಸಮಿತಿಯು ಸಜ್ಜಾಗಿದೆ. #UdupiDemandsGovtMedicalCollege ಎಂಬ ಹ್ಯಾಷ್‌ ಟ್ಯಾಗ್ ಚಳವಳಿ ಆರಂಭಿಸಿದೆ. ಹೋರಾಟದ ಭಾಗವಾಗಿ ಜನ ಸಾಮಾನ್ಯರು, ಪ್ರಗತಿಪರ ಚಿಂತಕರು, ಸಾಮಾಜಿಕ ಹಾಗೂ ವಿದ್ಯಾರ್ಥಿ ಸಂಘಟನೆಗಳನ್ನು ಭೇಟಿಮಾಡಿ ಚರ್ಚಿಸಲಾಗಿದೆ ಎಂದರು.

ಭೇಟಿವೇಳೆ ನಿರೀಕ್ಷಿತ ಬೆಂಬಲ ದೊರೆತಿದೆ. ಮುಂದೆ ಎಲ್ಲರನ್ನೂ ಸೇರಿಸಿಕೊಂಡು ಐತಿಹಾಸಿಕ ಆಂದೋಲನವನ್ನು ಮಾಡಲಾಗುವುದು. ಹೋರಾಟ ತೀವ್ರ ಸ್ವರೂಪ ಪಡೆಯಲಿದ್ದು, ಸಾರ್ವಜನಿಕರ ಬೆಂಬಲ ಹಾಗೂ ಸಹಕಾರ ಅಗತ್ಯ ಎಂದರು.

ಜಿಲ್ಲಾ ಮುಖಂಡ ನವಾಜ್ ಮಾತನಾಡಿ, ‘ವಿದ್ಯಾರ್ಥಿಯೊಬ್ಬ ಶಾಲಾ ಹಂತದಲ್ಲಿ ವೈದ್ಯನಾಗಬೇಕು ಎಂಬ ಕನಸು ಕಟ್ಟಿಕೊಂಡು ಶ್ರಮವಹಿಸಿ ಓದುತ್ತಾರೆ. ಆದರೆ, ನೀಟ್ ಪರೀಕ್ಷೆ ಬರೆದ ನಂತರ ವೈದ್ಯಕೀಯ ಕಾಲೇಜು ಪ್ರವೇಶಕ್ಕೆ ಲಕ್ಷಾಂತರ ರೂಪಾಯಿ ಶುಲ್ಕ ಕಟ್ಟಲಾಗದೆ ಕನಸು ಕೈಬಿಡುತ್ತಾರೆ. ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಇದ್ದರೆ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗಲಿದೆ’ ಎಂದರು.

ಮುಂಬರುವ ಬಜೆಟ್‌ನಲ್ಲಿ ಜಿಲ್ಲೆಗೆ ಮೆಡಿಕಲ್‌ ಕಾಲೇಜು ಘೋಷಿಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸರ್ಕಾರದ ಭೂಮಿ ಕೊರತೆ ಇದೆ ಎಂಬ ಜಿಲ್ಲಾಧಿಕಾರಿ ಹೇಳಿಕೆ ಖಂಡನೀಯ ಎಂದು ಟೀಕಿಸಿದರು.

ಸಮಿತಿಯ ಜಿಲ್ಲಾ ಕಾರ್ಯದರ್ಶಿ ಮಸೂದ್ ಮನ್ನಾ, ಜಿಲ್ಲಾ ಕಾರ್ಯದರ್ಶಿ ಅನ್ಫಾಲ್ ಗಂಗೊಳ್ಳಿ, ಮುಖಂಡರಾದ ಝಮ್ ಝಮ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT