ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯದ ಮೇಲೆ ಬರೆ ಹಾಕುತ್ತಿರುವ ಸರ್ಕಾರ: ಸಿಐಟಿಯು ಪ್ರತಿಭಟನೆ

ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ
Last Updated 8 ಜುಲೈ 2021, 14:34 IST
ಅಕ್ಷರ ಗಾತ್ರ

ಉಡುಪಿ: ಅಡುಗೆ ಅನಿಲ ದರ ಹೆಚ್ಚಳ, ತೈಲ ಬೆಲೆ ಏರಿಕೆ ಸೇರಿದಂತೆ ಅಗತ್ಯ ವಸ್ತುಗಳ ದರ ಹೆಚ್ಚಳ ಖಂಡಿಸಿ ಗುರುವಾರ ತಹಶೀಲ್ದಾರ್ ಕಚೇರಿ ಎದುರು ಸಿಐಟಿಯು ಪ್ರತಿಭಟನೆ ನಡೆಸಿತು.

ಕೊರೊನಾ ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿ ಬಡ ಹಾಗೂ ಮಧ್ಯಮ ವರ್ಗದವರು ತೀವ್ರ ಆರ್ಥಿಕ ಸಂಕಷ್ಕಕ್ಕೆ ಸಿಲುಕಿದ್ದಾರೆ. ಆಸ್ಪತ್ರೆಗಳಲ್ಲಿ ಬೆಡ್‌, ಆಮ್ಲಜನಕ ಹಾಗೂ ಔಷಧ ಸಿಗದೆ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯ ದುಬಾರಿ ಬಿಲ್ ಪಾವತಿಸಿ ಹಲವು ಕುಟುಂಬಗಳು ಸಾಲದ ಸುಳಿಯಲ್ಲಿ ಸಿಲುಕಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದು ಖಂಡನೀಯ ಎಂದು ಮುಖಂಡರು ವಾಗ್ದಾಳಿ ನಡೆಸಿದರು.

ಜೀವನಾವಶ್ಯಕ ವಸ್ತುಗಳಾದ ಸಿಲಿಂಡರ್‌, ಪೆಟ್ರೋಲ್, ಡೀಸೆಲ್‌, ಕಬ್ಬಿಣ, ಸಿಮೆಂಟ್, ಸ್ಟೀಲ್‌ ಹಾಗೂ ಇತರೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಬೆಲೆ ಏರಿಕೆಯಿಂದ ಮಧ್ಯಮ ವರ್ಗದ ಜನರು ಬಡತನ ರೇಖೆಗಿಂತ ಕೆಳಗಿನ ಮಟ್ಟ ತಲುಪುತ್ತಿದ್ದಾರೆ. ತೈಲ ಬೆಲೆಯನ್ನು ತಕ್ಷಣ ಇಳಿಸದಿದ್ದರೆ ಜನರ ಸಂಕಷ್ಟ ಮತ್ತಷ್ಟು ಹೆಚ್ಚಾಗಲಿದೆ ಎಂದರು.

ಸರ್ಕಾರ ಘೋಷಿಸಿರುವ ಆರ್ಥಿಕ ಪ್ಯಾಕೇಜ್‌ನ ಲಾಭ ಎಲ್ಲ ಫಲಾನುಭವಿಗಳಿಗೆ ಸಿಕ್ಕಿಲ್ಲ. ಕಳಪೆ ಆಹಾರದ ಕಿಟ್‌ಗಳನ್ನು ವಿತರಿಸಲಾಗಿದೆ. ಪರಿಹಾರ ಧನ ಹೆಚ್ಚಳಕ್ಕೆ ಮಾಡಿದ ಮನವಿಗೆ ಸ್ಪಂದನ ಸಿಕ್ಕಿಲ್ಲ. ದಿನಗೂಲಿ ನೌಕರರಾಗಿರುವ ಹೆಂಚು ಕಾರ್ಮಿಕರು, ಬೀಡಿ ಕಾರ್ಮಿಕರು, ಬಿಸಿಯೂಟ ನೌಕರರಿಗೆ, ಖಾಸಗಿ ಬಸ್‌ ಚಾಲಕ, ನಿರ್ವಾಹಕರಿಗೆ ಪರಿಹಾರ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸಿದರು.

ಜನರಿಗೆ ಆದಾಯ ಇಲ್ಲದ ಸಮಯದಲ್ಲಿ ಖಾಸಗಿ ಬಸ್‌ಗಳ ಪ್ರಯಾಣ ದರವನ್ನು ಶೇ 25ರಷ್ಟು ಹೆಚ್ಚಿಸಲಾಗಿದೆ. ಸಾರಿಗೆ ಇಲಾಖೆ ಹಾಗೂ ಜಿಲ್ಲಾಡಳಿತ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಕಣ್ಮುಚ್ಚಿ ಕುಳಿತಿವೆ ಎಂದು ಅಸಮಾಧಾನ ಹೊರಹಾಕಿದರು.

ಸರ್ಕಾರ ಎಸ್ಮಾ ಕಾನೂನನ್ನು 2021ರ ಅಂತ್ಯದವರೆಗೂ ವಿಸ್ತರಿಸುವ ಮೂಲಕ ನೌಕರರ ವಿರೋಧಿ ನಿಲುವು ತಾಳಿದೆ. ಕೂಡಲೇ ಎಸ್ಮಾ ವಿಸ್ತರಣೆ ತೀರ್ಮಾನವನ್ನು ಹಿಂಪಡೆಯಬೇಕು. ಸಾರಿಗೆ ನೌಕರರ ಸಂಕಷ್ಟಕ್ಕೆ ಸ್ಪಂದಿಸಬೇಖು ಎಂದು ಆಗ್ರಹಿಸಿದರು.

ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಖಂಜಾಚಿ ಶಶಿಧರ್ ಗೊಲ್ಲ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿದರು.

ಮುಖಂಡರಾದ ವಾಮನ ಪೂಜಾರಿ ಪಡುಬಿದ್ರಿ, ಸುಭಾಷ್ ನಾಯಕ್ ಬ್ರಹ್ಮಾವಾರ, ಉದಯ ಪೂಜಾರಿ ಉಪ್ಪೂರು, ಉಡುಪಿ ಬೀಡಿ ಸಂಘದ ಮುಖಂಡರಾದ ಉಮೇಶ್ ಕುಂದರ್, ನಳಿನಿ, ಸಂಜೀವ ನಾಯಕ್, ಗಿರಿಜಾ, ಸಿಐಟಿಯು ಉಡುಪಿ ಅಧ್ಯಕ್ಷ ರಾಮ ಕಾರ್ಕಡ, ಕಾರ್ಯದರ್ಶಿ ಕವಿರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT