ಹೆಬ್ರಿ: ‘ತಾಲ್ಲೂಕಿನಲ್ಲಿ ಇಎಸ್‌ಐ ಆಸ್ಪತ್ರೆ ಸ್ಥಾಪಿಸಬೇಕು ಎಂದು ಸಚಿವ ಸುನಿಲ್ ಕುಮಾರ್ ಮನವ ಸಲ್ಲಿಸಿದ್ದು ಶೀಘ್ರವೇ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
₹10 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೆಬ್ರಿ ತಾಲ್ಲೂಕು ಆಡಳಿತ ಸೌಧವನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ಹೆಬ್ರಿ ತಾಲ್ಲೂಕಾಗಿ ರಚನೆಯಾದಾಗ ಸಂತೋಷವಾಗಿತ್ತು. ಈಗ ನೂತನ ತಾಲ್ಲೂಕು ಆಡಳಿತ ಸೌಧ ನಿರ್ಮಾಣಗಿರುವುದು ಸಂತೋಷವನ್ನು ಇಮ್ಮಡಿಯಾಗಿಸಿದೆ. ಕರಾವಳಿಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲು ಹಸಿರು ಆರ್ಥಿಕ ವಲಯ ಘೋಷಿಸಲಾಗುವುದು, ದೇವಸ್ಥಾನ, ಜೈನ ಬಸದಿ, ಧರ್ಮಸ್ಥಳ, ಸುಬ್ರಹ್ಮಣ್ಯ, ಮೂಡುಬಿದರೆ ಸೇರಿ ಕರಾವಳಿ ಜಿಲ್ಲೆಗಳ ಆಕರ್ಷಕ ಪ್ರವಾಸಿ ತಾಣಗಳನ್ನು ಜೋಡಿಸಿ, ಝೋನ್ ಬೀಚ್, ಟೆಂಪಲ್ ಟೂರಿಸಂ ಮತ್ತು ಹೆರಿಟೇಜ್ ಟೂರಿಸಂ ಅಭಿವೃದ್ಧಿಗೊಳಿಸಲಾಗುವುದು‘ ಎಂದರು.
8 ರೈಲ್ವೆ ಯೋಜನೆ, 5 ಬಂದರುಗಳ ನಿರ್ಮಾಣ, ನವ ಕರ್ನಾಟಕ ನವ ಭಾರತ ಯೋಜನೆ, 6 ಹೊಸ ನಗರಗಳ ನಿರ್ಮಾಣ ಮತ್ತು 8 ಐಐಟಿ ಮಾದರಿಯ ವಿವಿಗಳ ಸ್ಥಾಪನೆಗೆ ಸರ್ಕಾರ ನಿರ್ಧರಿಸಿದೆ. ಕಾರ್ಮಿಕರ ಹಾಗ ರೈತರ ಬೆವರಿಗೆ ಬೆಲೆ ಕಟ್ಟಲಾಗದು. ಅವರ ಶ್ರಮದಿಂದಲೇ ದೇಶದ ಆರ್ಥಿಕತೆ ವ್ಯವಸ್ಥೆ ನಡೆಯುತ್ತಿದೆ. ರಾಜ್ಯ ತಲಾವಾರು ಆದಾಯದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಹೆಬ್ರಿ ತಾಲ್ಲೂಕನ್ನು ರಾಜ್ಯದಲ್ಲಿ ಮಾದರಿ ತಾಲ್ಲೂಕಾಗಿಸಲು ಎಲ್ಲರೂ ಸಹಕಾರ ನೀಡಬೇಕು ಎಂದರು.
ಗೋಪಾಲ ಭಂಡಾರಿ, ವೀರಪ್ಪ ಮೊಯಿಲಿ ಸ್ಮರಣೆ:
ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಮಾತನಾಡಿ ‘ಹೆಬ್ರಿ ತಾಲ್ಲೂಕು ರಚನೆಗೆ ಕಾರ್ಕಳದ ಮಾಜಿ ಶಾಸಕ ದಿ. ಗೋಪಾಲ ಭಂಡಾರಿ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಹಾಗೂ ಹೋರಾಟಗಾರರಾದ ಭುಜಂಗ ಬಲ್ಲಾಳ್, ಸುಭೋದ್ ಬಲ್ಲಾಳ್, ಭಾಸ್ಕರ್ ಜೋಯಿಸ್, ಸಂಜೀವ ಶೆಟ್ಟಿ, ದಿನೇಶ್ ಪೈ ಸೇರಿದಂತೆ ಹಲವರು ಕಾರಣರು.
ಹೆಬ್ರಿಯಲ್ಲಿ ಗೇರು ಉದ್ಯಮ ಮತ್ತು ಅಕ್ಕಿ ಮಿಲ್‌ಗಳಲ್ಲಿ ದುಡಿಯುತ್ತಿರುವ ಸಾವಿರಾರು ಕಾರ್ಮಿಕರಿಗೆ ಉತ್ತಮ ಆರೋಗ್ಯ ವ್ಯವಸ್ಥೆ ಕಲ್ಪಿಸಲು ಇಎಸ್‌ಐ ಆಸ್ಪತ್ರೆ ಸ್ಥಾಪನೆ ಅಗತ್ಯವಿದೆ ಎಂದು ಸುನಿಲ್ ಕುಮಾರ್ ಮುಖ್ಯಮಂತ್ರಿ ಗಮನಕ್ಕೆ ತಂದರು.
ಕಡಿಮೆ ಅವಧಿಯಲ್ಲಿ ಹೆಬ್ರಿ ತಾಲ್ಲೂಕಿನ ಆಡಳಿತ ಸೌಧ ನಿರ್ಮಾಣ ಖುಷಿ ತಂದಿದೆ. ಡೀಮ್ಡ್ ಫಾರೆಸ್ಟ್ ಸಮಸ್ಯೆ ನಿವಾರಣೆ ಸರ್ಕಾರದ ಸಾಧನೆಯಾಗಿದೆ. ಹೆಬ್ರಿ ತಾಲ್ಲೂಕಿನ ಅವಶ್ಯಕತೆಗಳನ್ನು ಹಂತಹಂತವಾಗಿ ಬಗೆಹರಿಸಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ತಾಲ್ಲೂಕು ಆಡಳಿತ ಸೌಧ ಉದ್ಘಾಟಿಸಿ ಕಂದಾಯ ಸಚಿವ ಆರ್ ಅಶೋಕ್ ಮಾತನಾಡಿ ‘ತಾಲ್ಲೂಕು ಆಡಳಿತ ಸೌಧಕ್ಕೆ ಭೂಮಿಪೂಜೆ ನೆರವೇರಿಸುವ ಹಾಗೂ ಉದ್ಘಾಟಿಸುವ ಭಾಗ್ಯ ದೊರೆತಿದೆ. ಜನರ ಮನೆ ಬಾಗಿಲಿಗೆ ಸರ್ಕಾರವೇ ಹೋಗುತ್ತಿದ್ದು, ಜಿಲ್ಲಾಧಿಕಾರಿಗಳು ಕಚೇರಿ ಬಿಟ್ಟು ಹಳ್ಳಿಗಳಿಗೆ ಹೋಗಬೇಕು. ಸ್ಥಳದಲ್ಲಿಯೇ ಜನರ ಸಮಸ್ಯೆಗೆ ಪರಿಹಾರ ನೀಡಬೇಕು. ಡಿಸಿ ಮತ್ತು ತಾಲ್ಲೂಕು ಕಚೇರಿಗೆ ಜನ ಅಲೆದಾಡಬಾರದು. ಮುಂದಿನ ವಾರದಿಂದ ಜಿಲ್ಲಾಧಿಕಾರಿ ಪ್ರತಿ ವಾರ ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಬೇಕು ಎಂದು ಸೂಚನೆ ನೀಡಿದರು.
ಹೆಬ್ರಿ ಪೇಟೆಯ ಸಮೀಪ ₹ 1.50 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣಕ್ಕೆ ಭೂಮಿಪೂಜೆ, ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ₹ 1 ಕೋಟಿ ವೆಚ್ಚದಲ್ಲಿ ತರಗತಿ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ಆಡಳಿತ ಸೌಧದ ಗುತ್ತಿಗೆದಾರ ದೇವಿಪ್ರಸಾದ್ ಕನ್ಸ್‌ಟ್ರಕ್ಷನ್‌ನ ಕಾಪು ವಾಸುದೇವ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಚಿವರಾದ ಎಸ್. ಅಂಗಾರ, ಗೋವಿಂದ ಕಾರಜೋಳ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ, ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಶಾಸಕರು, ಅಧಿಕಾರಿಗಳು ಇದ್ದರು.
ಜಿಲ್ಲಾಧಿಕಾರಿ ಕೂರ್ಮ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಬ್ರಿ ತಹಶೀಲ್ಧಾರ್ ಕೆ.ಪುರಂದರ್ ವಂದಿಸಿದರು. ಸುಹಾಸ್ ಶೆಟ್ಟಿ ಮುಟ್ಲುಪಾಡಿ ಕಾರ್ಯಕ್ರಮ ನಿರೂಪಿಸಿದರು.
ಮಾತೃ ಹೃದಯದ ಮುಖ್ಯಮಂತ್ರಿ
ಆಸಿಡ್ ದಾಳಿಗೆ ತುತ್ತಾದ ಯುವತಿಯರ ನೆರವಿಗೆ ದಾವಿಸಿಸಿರುವ ಮುಖ್ಯಮಂತ್ರಿ 10,000 ಮಾಶಸನ, ಮನೆ ವಸತಿ ಯೋಜನೆ ಹಾಗೂ ಸ್ವಉದ್ಯೋಗಕ್ಕೆ ನೆರವು ಘೋಷಿಸಿ ಮಾತೃ ಹೃದಯ ತೋರಿದ್ದಾರೆ. ಬಿಜೆಪಿಯದ್ದು ಜನರ ಸರ್ಕಾರವಾಗಿದ್ದು, ಡೀಮ್ಡ್ ಫಾರೆಸ್ಟ್‌ನಂತಹ ಗಂಭೀರ ಸಮಸ್ಯೆಯನ್ನು ಬಗೆಹರಿಸುತ್ತಿದೆ. ಬಡವರ ಮನೆಗೆ ಬೆಳಕು ನೀಡುವ ಮೂಲಕ ಇಂಧನ ಸಚಿವ ಸುನಿಲ್ ಕುಮಾರ್ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಅಶೋಕ್ ಶ್ಲಾಘಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.