ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ಸಿಎನ್‌ಜಿ ಕೊರತೆ: ಆಟೋ ಚಾಲಕರಿಗೆ ಚಿಂತೆ

ಜಿಲ್ಲೆಯಲ್ಲಿವೆ ಕೇವಲ 8 ಸಿಎನ್‌ಜಿ ಕೇಂದ್ರ; ಬೇಡಿಕೆಯಷ್ಟು ಪೂರೈಕೆಯಾಗುತ್ತಿಲ್ಲ ಇಂಧನ
ಬಾಲಚಂದ್ರ ಎಚ್‌.
Published 6 ಮೇ 2024, 6:36 IST
Last Updated 6 ಮೇ 2024, 6:36 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿರುವ ಸಿಎನ್‌ಜಿ ಇಂಧನ ಆಧಾರಿತ ವಾಹನಗಳ ಸಂಖ್ಯೆಗೆ ಅನುಗುಣವಾಗಿ ಸಿಎನ್‌ಜಿ ಬಂಕ್‌ಗಳು ಇಲ್ಲದ ಪರಿಣಾಮ ತೀವ್ರ ಇಂಧನ ಕೊರತೆ ಎದುರಾಗಿದೆ. ಪ್ರತಿನಿತ್ಯ ಸಾವಿರಾರು ಸಿಎನ್‌ಜಿ ಆಟೊ ರಿಕ್ಷಾ, ಕಾರು, ಸರಕು ಸಾಗಣೆ ವಾಹನಗಳು ಇಂಧನ ತುಂಬಿಸಿಕೊಳ್ಳಲು ಸಿಎನ್‌ಜಿ ಕೇಂದ್ರಗಳ ಮುಂದೆ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.

ಅಂದು ದುಡಿದು ಅಂದು ಜೀವನ ನಡೆಸುವ ಅನಿವಾರ್ಯತೆಗೆ ಸಿಲುಕಿರುವ ಆಟೊ ಚಾಲಕರ ಪಾಡು ಹೇಳತೀರದು. ದಿನದ ಐದಾರು ಗಂಟೆ ಬಾಡಿಗೆ ಹೊಡೆದರೆ ಕನಿಷ್ಠ ಮೂರರಿಂದ ನಾಲ್ಕು ತಾಸು ಇಂಧನ ಭರ್ತಿ ಮಾಡಿಕೊಳ್ಳಲು ಸಿಎನ್‌ಜಿ ಕೇಂದ್ರದ ಮುಂದೆ ಕಾಯಬೇಕಾಗಿದೆ. ಹಗಲಿನ ಹೊತ್ತು ಬಾಡಿಗೆ ನಷ್ಟವಾಗುವ ಆತಂಕದಿಂದ ಬೆಳಗಿನ ಜಾವ, ರಾತ್ರಿ ಹೊತ್ತು ತಾಸುಗಟ್ಟಲೆ ಕಾಯ್ದು ಇಂಧನ ಭರ್ತಿ ಮಾಡಿಸಿಕೊಳ್ಳುತ್ತಿದ್ದಾರೆ.

ಇರುವುದು 8 ಸಿಎನ್‌ಜಿ ಕೇಂದ್ರ ಮಾತ್ರ: ಜಿಲ್ಲೆಯಲ್ಲಿ ಮೂರುವರೆ ಸಾವಿರಕ್ಕೂ ಹೆಚ್ಚು ಸಿಎನ್‌ಜಿ ಇಂಧನ ವಾಹನಗಳಿದ್ದರೂ ಸಿಎನ್‌ಜಿ ಬಂಕ್‌ಗಳು ಇರುವುದು ಕೇವಲ 8. ಉಡುಪಿಯ ಸೀಮಾ ಫ್ಯೂಯಲ್ಸ್‌ ಅಂಡ್ ಸರ್ವೀಸಸ್‌, ಮಲ್ಪೆಯ ಭಾವನಾ ಎಂಟರ್‌ಪ್ರೈಸಸ್‌, ಬ್ರಹ್ಮಾವರ ತಾಲ್ಲೂಕಿನ ಶ್ರೀಲಕ್ಷ್ಮೀ ಎಂಟರ್‌ಪ್ರೈಸಸ್‌, ಹೆಜಮಾಡಿ ಟೋಲ್‌ ಗೇಟ್‌ ಬಳಿಯ ಮಾತೃಶ್ರೀ ಹೈವೇ ಸ್ಟಾರ್‌, ಕಾರ್ಕಳದ ಕೆದಿಂಜೆಯ ಶ್ರೀದುರ್ಗಾ ಫ್ಯೂಯಲ್ಸ್‌, ಕಾರ್ಕಳ ತಾಲ್ಲೂಕಿನ ಸಾಣೂರಿನಲ್ಲಿರುವ ಪಡು ತಿರುಪತಿ ವೆಂಕಟರಮಣ, ಕುಂದಾಪುರ ತಾಲ್ಲೂಕು ಕೋಟೇಶ್ವರದಲ್ಲಿರುವ ಕೆವಿಎಂ ಕಾಮತ್‌, ಪಡುಬಿದ್ರಿಯ ಭವ್ಯ ಫ್ಯೂಯೆಲ್ಸ್‌ ಜಿಲ್ಲೆಯಲ್ಲಿರುವ ಸಿಎನ್‌ಜಿ ಕೇಂದ್ರಗಳು.

ಬೆರಳೆಣಿಕೆಯ ಸಿಎನ್‌ಜಿ ಕೇಂದ್ರಗಳಲ್ಲಿ ಬೇಡಿಕೆಯಷ್ಟು ಇಂಧನ ಸಿಗುತ್ತಿಲ್ಲ. ಪ್ರತಿದಿನ ಜಿಲ್ಲೆಯ ಬಹುತೇಕ ಸಿಎನ್‌ಜಿ ಕೇಂದ್ರಗಳ ಮುಂದೆ ರಿಕ್ಷಾ, ಕಾರು, ಸರಕು ಸಾಗಣೆ ವಾಹನಗಳ ಉದ್ದನೆಯ ಸಾಲು ಸಾಮಾನ್ಯವಾಗಿ ಕಾಣಸಿಗುತ್ತದೆ. ತಾಸುಗಟ್ಟಲೆ ಕಾದರೂ ಇಂಧನ ಸಿಗುತ್ತದೆ ಎಂಬ ಯಾವ ಖಾತ್ರಿಯೂ ಇಲ್ಲದೆ ವಾಹನ ಸವಾರರು ಹೈರಾಣಾಗಿದ್ದಾರೆ.

ಜೀವನ ನಿರ್ವಹಣೆಗೆ ಇಂಧನ ತುಂಬಿಸಿಕೊಳ್ಳುವುದು ಅನಿವಾರ್ಯವಾಗಿರುವುದರಿಂದ ಆಟೊ ಚಾಲಕರು ಒಂದು ಬಂಕ್‌ನಿಂದ ಮತ್ತೊಂದು ಬಂಕ್‌ಗೆ ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಗಲಿನಲ್ಲಿ ಇಂಧನ ಖಾಲಿಯಾದರೆ ಅಂದು ಬಾಡಿಗೆ ಖೋತಾ, ಬರಿಗೈಲಿ ಮನೆಗೆ ಮರಳಬೇಕಾಗುತ್ತದೆ ಎನ್ನುತ್ತಾರೆ ಆಟೊ ಚಾಲಕರಾದ ವಿಶ್ವನಾಥ್‌.

ಸಮಸ್ಯೆಗೆ ಕಾರಣ ಏನು: ಏಪ್ರಿಲ್, ಮೇ ತಿಂಗಳಲ್ಲಿ ಶಾಲಾ ಕಾಲೇಜುಗಳಿಗೆ ಬೇಸಗೆ ರಜೆ ಇರುವ ಕಾರಣ ಹೊರ ಜಿಲ್ಲೆ, ರಾಜ್ಯಗಳಿಂದ ಸಾವಿರಾರು ಪ್ರವಾಸಿಗರು ಜಿಲ್ಲೆಗೆ ಬರುತ್ತಿದ್ದು ಪ್ರವಾಸಿಗರ ವಾಹನಗಳು ಜಿಲ್ಲೆಯಲ್ಲಿ ಇಂಧನ ಭರ್ತಿ ಮಾಡಿಕೊಳ್ಳುತ್ತಿರುವುದರಿಂದ ಸ್ಥಳೀಯ ವಾಹನಗಳಿಗೆ ಇಂಧನ ಕೊರತೆ ಉಂಟಾಗಿದೆ.

ಜತೆಗೆ, ಆಟೊ ರಿಕ್ಷಾ ಬಾಡಿಗೆ ಹತ್ತುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಇಂಧನ ಬಳಕೆ ಹೆಚ್ಚಾಗಿದೆ. ಗರಿಷ್ಠ 4.5 ಕೆ.ಜಿ  ಇಂಧನ ಭರ್ತಿ ಮಾಡಿಸಿದರೆ ಒಂದು ದಿನಕ್ಕೆಲ್ಲ ಖಾಲಿಯಾಗುತ್ತಿದೆ. ಬಳಿಕ ರಾತ್ರಿ ಅಥವಾ ಬೆಳಗಿನ ಜಾವ ಸರತಿ ಸಾಲಿನಲ್ಲಿ ನಿಂತು ಇಂಧನ ತುಂಬಿಸಿಕೊಂಡರೆ ಮಾತ್ರ ಮರುದಿನ ಬಾಡಿಗೆಗೆ ಹೋಗಬಹುದು. ಇಲ್ಲವಾದರೆ ಮನೆಯಲ್ಲಿಯೇ ಆಟೊ ನಿಲ್ಲಿಸಿಕೊಳ್ಳಬೇಕು ಎನ್ನುತ್ತಾರೆ ಆಟೊ ಚಾಲಕ ಸುಖೇಶ್ ಪೂಜಾರಿ.

ಪ್ರತಿವರ್ಷ ಮಾರ್ಚ್‌, ಏಪ್ರಿಲ್‌, ಮೇ ತಿಂಗಳಲ್ಲಿ ಸಿಎನ್‌ಜಿ ಇಂಧನ ಕೊರತೆ ಸಾಮಾನ್ಯವಾಗಿಬಿಟ್ಟಿದೆ. ಜಿಲ್ಲೆಯಲ್ಲಿ ಸಿಎನ್‌ಜಿ ಪಂಪ್‌ಗಳ ಸಂಖ್ಯೆ ಹೆಚ್ಚಿಸಿದರೆ, ಬೇಡಿಕೆಯಷ್ಟು ಇಂಧನ ಪೂರೈಸಿದರೆ ಸಮಸ್ಯೆ ಬಗೆಹರಿಯುತ್ತದೆ ಎನ್ನುತ್ತಾರೆ ಅವರು.

ಅದಾನಿ ಕಂಪ‍ನಿಗೆ ಗುತ್ತಿಗೆ: ಜಿಲ್ಲೆಯಲ್ಲಿ ಸಿಎನ್‌ಜಿ ಇಂಧನ ಪೂರೈಸುವ ಗುತ್ತಿಗೆಯನ್ನು ಅದಾನಿ ಕಂಪನಿ ಪಡೆದುಕೊಂಡಿದೆ. ಸರ್ಕಾರದ ನಿಯಮಗಳ ಪ್ರಕಾರ ಜಿಲ್ಲೆಯಲ್ಲಿ 12 ಸಿಎನ್‌ಜಿ ಕೇಂದ್ರಗಳನ್ನು ತೆರೆಯಲು ಅವಕಾಶವಿದ್ದರೂ 8 ಕೇಂದ್ರಗಳನ್ನು ಮಾತ್ರ ತೆರೆದಿರುವುದರಿಂದ ಬೇಡಿಕೆಯಷ್ಟು ಇಂಧನ ಲಭ್ಯವಾಗುತ್ತಿಲ್ಲ.

ಅದಾನಿ ಕಂಪನಿ ಇಂಧನ ಪೂರೈಕೆ ಗುತ್ತಿಗೆ ಪಡೆದುಕೊಂಡಿದ್ದರೂ ಸ್ವಂತ ಸಿಎನ್‌ಜಿ ಇಂಧನ ಉತ್ಪಾದನಾ ಘಟಕ ಹೊಂದಿರದೆ ಮಂಗಳೂರಿನ ಗೇಲ್‌ ಇಂಡಿಯಾ ಕಂಪೆನಿಯ ಘಟಕದಿಂದ ಸಿಎನ್‌ಜಿ ಇಂಧನ ಪಡೆದು ಉಡುಪಿ ಜಿಲ್ಲೆಗೆ ಪೂರೈಕೆ ಮಾಡುತ್ತಿದೆ. ಈಚೆಗೆ ಗೇಲ್‌ ಇಂಡಿಯಾದ 2 ಸಿಎನ್‌ಜಿ ಕಂಪ್ರೆಸರ್‌ ಘಟಕಗಳ ಪೈಕಿ ಒಂದು ಹಾಳಾಗಿದ್ದ ಪರಿಣಾಮ ಜಿಲ್ಲೆಗೆ ಬೇಡಿಕೆಯಷ್ಟು ಇಂಧನ ಪೂರೈಕೆಯಾಗದೆ ಸಮಸ್ಯೆ ತಲೆದೋರಿತ್ತು. ಈಗ ಸಮಸ್ಯೆ ಬಗೆಹರಿದಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ.

ನಿಹಾಲ್ ಪೂಜಾರಿ ಆಟೊ ಚಾಲಕ
ನಿಹಾಲ್ ಪೂಜಾರಿ ಆಟೊ ಚಾಲಕ

ಜಿಲ್ಲೆಯಲ್ಲಿ ಸಿಎನ್‌ಜಿ ಕೇಂದ್ರಗಳನ್ನು ಹೆಚ್ಚಿಸಿದರೆ ಸಮಸ್ಯೆ ಬಗೆಹರಿಯುತ್ತದೆ. ವಾಹನಗಳ ಬೇಡಿಕೆಗೆ ಅನುಗುಣವಾಗಿ ಇಂಧನ ಪೂರೈಕೆ ವ್ಯವಸ್ಥೆ ಮಾಡಿದರೆ ಅನುಕೂಲ.

-ನಿಹಾಲ್ ಪೂಜಾರಿ ಆಟೊ ಚಾಲಕ

ಅರ್ಧ ದಿನ ಬಾಡಿಗೆ ಮಾಡಿದರೆ ಅರ್ಧದಿನ ಸಿಎನ್‌ಜಿ ಇಂಧನಕ್ಕೆ ತಾಸುಗಟ್ಟಲೆ ಕಾಯಬೇಕಾಗಿದೆ. ಸ್ವಲ್ಪ ಲಾಭದಾಯಕ ಎಂಬ ಕಾರಣಕ್ಕೆ ಸಿಎನ್‌ಜಿ ವಾಹನ ಖರೀದಿ ಮಾಡಿದ್ದೆ. ಇದೀಗ ತಪ್ಪು ಮಾಡಿದೆ ಎನಿಸುತ್ತಿದೆ. –ದಯಾನಂದ್‌ ಆಟೊ ಚಾಲಕ

ಬಂಕ್‌ನಲ್ಲಿ ಸಿಎನ್‌ಜಿ ಅನಿಲ ಲಭ್ಯವಿದ್ದರೂ ವಿದ್ಯುತ್ ವ್ಯತ್ಯಯ ಉಂಟಾದಾಗ ಬಂಕ್‌ ಚಾಲೂ ಮಾಡುವುದಿಲ್ಲ. ಜನರೇಟರ್ ಆನ್‌ ಮಾಡಿದರೆ ಹೆಚ್ಚು ವಿದ್ಯುತ್ ಖರ್ಚಾಗುವ ಕಾರಣಕ್ಕೆ ಬಂಕ್‌ ಸ್ಥಗಿತಗೊಳಿಸಲಾಗುತ್ತಿದೆ.

–ಸತೀಶ್ ಪೂಜಾರಿ ಆಟೊ ಚಾಲಕ

ಸಿಎನ್ ಜಿ ಆಟೋ ಖರೀದಿಸಿ ಅಡಕತ್ತರಿಯಲ್ಲಿ ಸಿಲುಕಿದ್ದೇವೆ. ಅನಿಲ ದೊರೆಯದೆ ಮನೆಯಲ್ಲೇ ಆಟೋ ಇಟ್ಟು ತಲೆಮೇಲೆ ಕೈಹೊತ್ತು ಕೂರುವಂತಾಗಿದೆ. ನಮ್ಮ ಗೋಳು ಕೇಳುವವರಿಲ್ಲ.

–ಜಯಕರ್ ಪೂಜಾರಿ ನಂದಿಕೂರು

‘ಬಂಕ್‌ನಲ್ಲ ಮಲಗಿದ್ದೇವೆ’ ಸಿಎನ್‌ಜಿ ಸಮಸ್ಯೆಯಿಂದಾಗಿ ಎರಡು ದಿನ ಬಂಕ್‌ನಲ್ಲೇ ಮಲಗುವ ಸ್ಥಿತಿ ಬಂದಿತ್ತು. ಬೆಳಿಗ್ಗೆ ಇಂಧನ ತುಂಬಿಸಲು ಹೋದರೆ ಸಂಜೆತನಕ ಸರದಿ ಸಾಲಿನಲ್ಲಿ ನಿಲ್ಲಬೇಕು. ಸಮಸ್ಯೆಗೆ ಯಾರಿಂದಲೂ ಸ್ಪಂದನೆ ಸಿಗುತ್ತಿಲ್ಲ. ರಿಕ್ಷಾ ಯೂನಿಯನ್  ಹೋರಾಟದ ಹಾದಿ ಹಿಡಿಯಬೇಕಾದ ಪರಿಸ್ಥಿತಿ ಬಂದಿದೆ. ಪ್ರತಿನಿತ್ಯ ಇದೇ ಸಮಸ್ಯೆಯಾದರೆ ನಾವು ಬಾಡಿಗೆ ಮಾಡುವುದು ಯಾವಾಗ? ಎಂದು ಆಟೊ ಚಾಲಕ ಹರೀಶ್ ಬಂಟಕಲ್ ಪ್ರಶ್ನಿಸಿದರು.

‘ಸಮಸ್ಯೆ ಬಗೆಹರಿದಿದೆ’ ವರ್ಷಪೂರ್ತಿ ಜಿಲ್ಲೆಯಲ್ಲಿ ಸಿಎನ್‌ಜಿ ಇಂಧನಕ್ಕೆ ಬೇಡಿಕೆ ಇರುವುದಿಲ್ಲ. ಬೇಸಗೆ ರಜೆಯ ಅವಧಿಯಾದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವುದರಿಂದ ದಿಢೀರ್ ಸಿಎನ್‌ಜಿ ಇಂಧನ ಕೊರತೆ ಕಾಡುತ್ತದೆ. ಇದೀಗ ಸಮಸ್ಯೆ ಬಗೆಹರಿದಿದ್ದು ಎಲ್ಲ ಸಿಎನ್‌ಜಿ ಕೇಂದ್ರಗಳಿಗೆ ಬೇಡಿಕೆಗೆ ಅನುಗುಣವಾಗಿ ಇಂಧನ ಪೂರೈಕೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT