ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಪರಿಕರ ಖರೀದಿ: ನ್ಯಾಯಾಂಗ ತನಿಖೆಗೆ ದಿನೇಶ್ ಗುಂಡೂರಾವ್ ಒತ್ತಾಯ

Last Updated 3 ಆಗಸ್ಟ್ 2020, 13:10 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್‌ ಸೋಂಕು ನಿರ್ವಹಣೆಗೆ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಹಾಲಿ ನ್ಯಾಯಾಧೀಶರ ನೇತೃತ್ವದ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ ಮುಖಂಡ ದಿನೇಶ್ ಗುಂಡೂರಾವ್ ಒತ್ತಾಯಿಸಿದರು.

ಸೋಮವಾರ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯ ಸರ್ಕಾರ ಕೋವಿಡ್‌ ವೈದ್ಯಕೀಯ ಪರಿಕರಗಳಿಗೆ ಇದುವರೆಗೂ ಮಾಡಿರುವ ವೆಚ್ಚದಲ್ಲಿ ಶೇ 50ರಷ್ಟು ದುರುಪಯೋಗವಾಗಿದೆ. ಈ ಸಂಬಂಧ ಕಾಂಗ್ರೆಸ್‌ ದಾಖಲೆಗಳನ್ನು ಬಿಡುಗಡೆ ಮಾಡಿದೆ ಎಂದರು.

ಪಿಪಿಇ ಕಿಟ್‌, ವೆಂಟಿಲೇಟರ್‌, ಮಾಸ್ಕ್‌, ಸ್ಯಾನಿಟೈಸರ್, ಆರ್‌ಟಿಪಿಸಿಆರ್‌ ಪರೀಕ್ಷಾ ಕಿಟ್‌ ಸೇರಿದಂತೆ ಹಲವು ಉಪಕರಣಗಳನ್ನು ಮಾರುಕಟ್ಟೆಗಿಂತ ಹೆಚ್ಚಿನ ದರಕ್ಕೆ ಖರೀದಿ ಮಾಡಲಾಗಿದೆ. ಭ್ರಷ್ಟಾಚಾರವನ್ನು ದಾಖಲೆಗಳ ಸಮೇತ ಬಯಲು ಮಾಡಿದರೂ ಸರ್ಕಾರ ಉಡಾಫೆಯಿಂದ ವರ್ತಿಸುತ್ತಿದೆ. ಲೆಕ್ಕ ಕೊಡುವುದಾಗಿ ಹೇಳಿ ಲೀಗಲ್‌ ನೋಟಿಸ್‌ ಕಳುಹಿಸುತ್ತಿದೆ ಎಂದು ಟೀಕಿಸಿದರು.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಅವ್ಯವಹಾರ ನಡೆದಿದ್ದರೆ ತನಿಖೆಗೆ ಒಪ್ಪಿಸಿ. ಇದಕ್ಕೆ ತಕರಾರಿಲ್ಲ. ಒಟ್ಟಿನಲ್ಲಿ ಸತ್ಯಾಸತ್ಯಾತೆಗಳು ಹೊರಬರಬೇಕು ಎಂದು ಗುಂಡೂರಾವ್‌ ಒತ್ತಾಯಿಸಿದರು.

ಕೇಂದ್ರ ಸರ್ಕಾರ 4 ಲಕ್ಷಕ್ಕೆ, ತಮಿಳುನಾಡು ಸರ್ಕಾರ ₹ 4.7 ಲಕ್ಷಕ್ಕೆ ವೆಂಟಿಲೇಟರ್‌ ಖರೀದಿಸಿದರೆ, ರಾಜ್ಯ ಸರ್ಕಾರ ₹ 5.6 ಲಕ್ಷದಿಂದ ₹ 18 ಲಕ್ಷ ವೆಚ್ಚಮಾಡಿದೆ. ಪಿಪಿಇ ಕಿಟ್‌ಗೆ ಮಾರುಕಟ್ಟೆಯಲ್ಲಿ ₹ 330 ದರವಿದ್ದರೆ ₹ 2,117 ಖರೀದಿ ಮಾಡಲಾಗಿದೆ. ₹ 50–60 ದರದ ಮಾಸ್ಕ್‌ಗಳನ್ನು ₹ 125, ₹ 150 ದರಕ್ಕೆ ಕೊಂಡುಕೊಳ್ಳಲಾಗಿದೆ. ಈ ಎಲ್ಲ ಅವ್ಯವಹಾರದ ಬಗ್ಗೆ ಕಾಂಗ್ರೆಸ್‌ ಪ್ರಶ್ನೆ ಮಾಡಿದರೆ ಸಚಿವರು ಉತ್ತರ ನೀಡದೆ ಜನರ ದಾರಿತಪ್ಪಿಸುಲ ಯತ್ನಿಸುತ್ತಿದ್ದಾರೆ ಎಂದರು.

ಕೇಂದ್ರ ಸರ್ಕಾರ ಘೋಷಿಸಿರುವ ₹ 20 ಲಕ್ಷ ಪ್ಯಾಕೇಜ್‌ ಯಾರಿಗೆ ತಲುಪಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಅಸಂಘಟಿತ ವಲಯದ ಕಾರ್ಮಿಕರು, ಬಡವರು, ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ಘೋಷಿಸಿರುವ ಪ್ಯಾಕೇಜ್‌ ಕೂಡ ಫಲಾನುಭವಿಗಳಿಗೆ ತಲುಪಿಲ್ಲ ಎಂದು ಗುಂಡೂರಾವ್‌ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವೆ ಜಯಮಾಲಾ, ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಯು.ಆರ್. ಸಭಾಪತಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ಜಿ.ಎ. ಬಾವಾ, ಹರೀಶ್ ಕಿಣಿ, ಗೀತಾ ವಾಗ್ಲೆ, ಮುರಳಿ ಶೆಟ್ಟಿ, ಭಾಸ್ಕರ್ ರಾವ್ ಕಿದಿಯೂರು, ದಿನೇಶ್ ಪುತ್ರನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT