ಸೋಮವಾರ, ಮೇ 16, 2022
27 °C
ಕಾಂಗ್ರೆಸ್‌ ಆಡಳಿತದ ವಿರುದ್ಧ ಸ್ವಪಕ್ಷೀಯರ ಪ್ರತಿಭಟನೆ

ತಳ್ಳಾಟದಲ್ಲಿ ಹರಿದ ವಿನಯಕುಮಾರ್‌ ಸೊರಕೆ ಶರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರ್ವ: ಶಿರ್ವ ಗ್ರಾಮದ ಪದ್ಮಾಬಾಯಿ ಎಂಬುವರ ಮನೆಯನ್ನು ತೆರವುಗೊಳಿಸಿರುವ ಕಾಂಗ್ರೆಸ್ ಆಡಳಿತ ಹೊಂದಿರುವ ಶಿರ್ವ ಗ್ರಾಮ ಪಂಚಾಯಿತಿಯ ವಿರುದ್ಧ ಮಾಜಿ ಸಚಿವ ವಿನಯಕುಮಾರ್ ಸೊರಕೆ ನೇತೃತ್ವದಲ್ಲಿ ಪ್ರತಿಭಟನೆ ಮಂಗಳವಾರ ನಡೆಯಿತು.

ಶಿರ್ವ ಗ್ರಾಮದ ಸರ್ಕಾರಿ ಜಮೀನಿ ನಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆ ಪದ್ಮಾಬಾಯಿ ಗುಡಿಸಲನ್ನು ಕಟ್ಟಿದ್ದು, ಗ್ರಾಮ ಪಂಚಾಯಿತಿ ಈ ಮನೆಯನ್ನು ಏಕಾಏಕಿ ತೆರವುಗೊಳಿಸಿತ್ತು. ಈ ಸಂಬಂಧವಾಗಿ ವಿನಯಕುಮಾರ್ ಸೊರಕೆ ಹಾಗೂ ಕಾಂಗ್ರೆಸ್ ಮುಖಂಡರು ಶಿರ್ವ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈ ವೇಳೆ ಪಿಡಿಒ ಅನಂತ ಪದ್ಮನಾಭ ನಾಯಕ್‌ ಮತ್ತು ಪ್ರತಿಭಟನಕಾರರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದೇ ವೇಳೆ ಉಂಟಾದ ತಳ್ಳಾಟದಿಂದ ವಿನಯಕುಮಾರ್ ಸೊರಕೆ ಅವರ ಷರ್ಟ್ ಹರಿದ ಘಟನೆ ವಿವಾದಕ್ಕೆ ಕಾರಣವಾಯಿತು.

ಪದ್ಮಾಬಾಯಿ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿ ವಾಸವಾಗಿದ್ದರು. ಅದ‌ನ್ನು ಕಂದಾಯ ಅಧಿಕಾರಿಗಳು ಜೆಸಿಬಿ ಮೂಲಕ ತೆರವುಗೊಳಿಸಿದ್ದರು. ಇದನ್ನು ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ ನಡೆದಿತ್ತು. ಇದಕ್ಕೆ ಪ್ರತಿಯಾಗಿ ಸ್ಥಳದಲ್ಲಿ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಮತ್ತು ಸೊರಕೆ ವಿರುದ್ಧ ಘೋಷಣೆ ಕೂಗಿದರು. ಇದರಿಂದಾಗಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಸ್ಥಳಕ್ಕೆ ಬಂದ ಕಾಪು ತಹಶೀಲ್ದಾರ್, ಸಂತ್ರಸ್ತ ಮಹಿಳೆಗೆ ಶೀಘ್ರವೇ ನ್ಯಾಯ ಒದಗಿಸುವ ಭರವಸೆ ನೀಡಿದರು.

ಕಾಂಗ್ರೆಸ್ ವಿರುದ್ಧವೇ ಸೊರಕೆ ಪ್ರತಿಭಟನೆ: ‘ಶಿರ್ವ ಗ್ರಾಮ ಪಂಚಾಯಿತಿ ಯಲ್ಲಿ ತನ್ನ ಕಾಂಗ್ರೆಸ್ ಪಕ್ಷ ಆಡಳಿತ ನಡೆಸುತ್ತಿದ್ದು, ಕಾಂಗ್ರೆಸ್ ಆಡಳಿತದ ವಿರುದ್ಧವೇ ವಿನಯಕುಮಾರ್ ಸೊರಕೆ ಪ್ರತಿಭಟನೆಗೆ ಮುಂದಾಗಿದ್ದು, ಹಳೆ ಅಂಗಿ ಹಾಕಿ ತನ್ನವರಿದಂದಲೇ ಹರಿಸಿಕೊಂಡು ಪೌರುಷ ತೋರಿಸಿದ್ದಾರೆ’ ಎಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಟ್ವೀಟ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.