ಸೋಮವಾರ, ಜೂನ್ 14, 2021
26 °C

ಉಡುಪಿ: ವಾಣಿಜ್ಯ ಚಟುವಟಿಕೆಗಳು ಭಾಗಶಃ ಬಂದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕೋವಿಡ್‌ 2ನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಠಿಣ ಮಾರ್ಗಸೂಚಿ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಗುರುವಾರ ಸಂಜೆಯಿಂದ ವಾಣಿಜ್ಯ ವಹಿವಾಟು ಬಹುತೇಕ ಸ್ಥಬ್ಧಗೊಂಡಿತು.

ನಗರದ ಪ್ರಮುಖ ಭಾಗಗಳಲ್ಲಿ ನಗರಸಭೆ ಅಧಿಕಾರಿಗಳು ಮೈಕ್ ಮೂಲಕ ಅಂಗಡಿ, ಮಳಿಗೆಗಳು, ಶಾಪಿಂಗ್ ಕಾಂಪ್ಲೆಕ್ಸ್‌, ಬಟ್ಟೆ ಅಂಗಡಿ ಸೇರಿದಂತೆ ವಾಣಿಜ್ಯ ಮುಂಗಟ್ಟುಗಳನ್ನು ಮುಚ್ಚುವಂತೆ ವ್ಯಾಪಾರಿಗಳಿಗೆ ಸೂಚನೆ ನೀಡಿದರು. ಅದರಂತೆ ಅಗತ್ಯ ವಸ್ತುಗಳ ಸೇವೆಗಳನ್ನು ಹೊರತುಪಡಿಸಿ ಉಳಿದ ವಾಣಿಜ್ಯ ಚಟುವಟಿಕೆಗಳು ಬಂದ್ ಆದವು.

ಮಾರ್ಗಸೂಚಿಯಲ್ಲಿ ಏನಿದೆ:

ಕೋವಿಡ್–19 ತಡೆಯುವ ನಿಟ್ಟಿನಲ್ಲಿ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆಮಾಡಿದ್ದು ಸಾರ್ವಜನಿಕರು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

ಏ.21ರಿಂದ ಮೇ 4ರವರೆಗೆ ಕೊರೊನಾ ನೈಟ್‌ ಕರ್ಫ್ಯೂ ಹಾಗೂ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರಲಿದ್ದು, ಈ ಅವಧಿ ಹೊರತುಪಡಿಸಿ ಉಳಿದ ಅವಧಿಯಲ್ಲಿ ಜಿಲ್ಲೆಯಾದ್ಯಂತ 144 ಜಾರಿಯಲ್ಲಿರಲಿದೆ.

ಯಾವ ಚಟುವಟಿಕೆಗಳಿಗೆ ನಿರ್ಬಂಧ:

ನೂತನ ಮಾರ್ಗಸೂಚಿ ಪ್ರಕಾರ ಜಿಲ್ಲೆಯ ಸಿನಿಮಾ ಹಾಲ್‌ಗಳು, ಶಾಪಿಂಗ್ ಮಾಲ್‌ಗಳು, ಜಿಮ್‌ಗಳು, ಯೋಗ ಕೇಂದ್ರಗಳು, ಸ್ಪಾಗಳು, ಕ್ರೀಡಾ ಸಂಕೀರ್ಣಗಳು, ಸ್ಟೇಡಿಯಂ, ಈಜುಕೊಳ, ಮನೋರಂಜನಾ ಉದ್ಯಾನ, ಕ್ಲಬ್‌, ಬಾರ್‌, ಸಭಾಂಗಣಗಳು, ಅಸೆಂಬ್ಲಿ ಹಾಲ್‌ಗಳನ್ನು ತೆರೆಯುವಂತಿಲ್ಲ.

ಯಾವ ಚಟುವಟಿಕೆಗಳಿಗೆ ನಿರ್ಬಂಧ ಇಲ್ಲ:

ಪಡಿತರ ಅಂಗಡಿಗಳು ಸೇರಿದಂತೆ ಆಹಾರ ಮತ್ತು ದಿನಸಿ ಅಂಗಡಿಗಳು, ಹಣ್ಣು, ತರಕಾರಿ ಅಂಗಡಿಗಳು, ಡೈರಿ ಮತ್ತು ಹಾಲಿನ ಬೂತ್‌ಗಳು, ಮಾಂಸ ಮತ್ತು ಮೀನು, ಪಶು ಆಹಾರ ಅಂಗಡಿಗಳನ್ನು ತೆರೆಯಲು ಅವಕಾಶ ಇರುತ್ತದೆ.

ತರಕಾರಿ, ಹಣ್ಣು, ಹೂವಿನ ಮಾರುಕಟ್ಟೆಗಳು ತೆರೆದ ಸ್ಥಳ / ಆಟದ ಮೈದಾನಗಳಲ್ಲಿ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ರೆಸ್ಟೋರೆಂಟ್ ಮತ್ತು ಕೆಫೆಗಳಲ್ಲಿ ಕುಳಿತು ಸೇವಿಸಲು ಅವಕಾಶವಿಲ್ಲ. ಪಾರ್ಸೆಲ್‌ಗೆ ಮಾತ್ರ ಅವಕಾಶ ಇದೆ. ವಸತಿ ಗೃಹಗಳಲ್ಲಿರುವ ಹೊಟೇಲ್‌ಗಳಲ್ಲಿ  ಉಳಿದುಕೊಂಡಿರುವ ಅತಿಥಿಗಳಿಗೆ ಮಾತ್ರ ಆಹಾರ ಸರಬರಾಜು ಮಾಡಲು ಅವಕಾಶ ಇರುತ್ತದೆ.

ಸ್ವತಂತ್ರ ಮದ್ಯದಂಗಡಿಗಳು ಮತ್ತು ಮಳಿಗೆಗಳು, ಬಾರ್‌ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್‌ಗಳನ್ನು ನೀಡಲು ಅವಕಾಶವಿದೆ. ಆಹಾರ ಸಂಸ್ಕರಣೆ ಮತ್ತು ಸಂಬಂಧಿತ ಕೈಗಾರಿಕೆಗಳಿಗೆ ಕಾರ್ಯ ನಿರ್ವಹಿಸಲು ಅನುಮತಿ, ಬ್ಯಾಂಕ್‌, ವಿಮಾ ಕಚೇರಿ ಮತ್ತು ಎಟಿಎಂಗೆ ಅನುಮತಿ, ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಅನುಮತಿ, ಇ-ಕಾಮರ್ಸ್ ವಸ್ತುಗಳ ಸರಬರಾಜಿಗೆ ಅನುಮತಿ, ಬಂಡವಾಳ ಮತ್ತು ಸಾಲ ಮಾರುಕಟ್ಟೆ ಸೇವೆಗಳಿಗೆ ಅವಕಾಶ, ಕೋಲ್ಡ್ ಸ್ಟೋರೇಜ್ ಮತ್ತು ಗೋದಾಮಿನ ಸೇವೆಗಳಿಗೆ ಅವಕಾಶ, ಖಾಸಗಿ ಭದ್ರತಾ ಸೇವೆಗಳನ್ನು ಅನುಮತಿಸಲಾಗಿದೆ.

ಕ್ಷೌರ ಅಂಗಡಿ, ಸಲೂನ್, ಬ್ಯೂಟಿ ಪಾರ್ಲರ್‌ ಕಾರ್ಯನಿರ್ವಹಿಸಲು, ನಿರ್ಮಾಣ ಸಾಮಗ್ರಿಗಳ ಅಂಗಡಿಗಳು ತೆರೆಯಲು ಅನುಮತಿ ಇದೆ. ಇವುಗಳನ್ನು ಹೊರತುಪಡಿಸಿ ಎಲ್ಲ ಅಂಗಡಿಗಳು, ವಾಣಿಜ್ಯ ಖಾಸಗಿ ಸಂಸ್ಥೆಗಳು ಮುಚ್ಚಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು