ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ನಿಯಂತ್ರಣಕ್ಕೆ ‘ದಂಡಾಸ್ತ್ರ’ ಪ್ರಯೋಗ

ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದವರಿಂದ ₹ 28.09 ಲಕ್ಷ ದಂಡ ವಸೂಲಿ
Last Updated 10 ಏಪ್ರಿಲ್ 2021, 13:46 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್‌–19 ನಿಯಂತ್ರಣಕ್ಕೆ ದಂಡದ ಅಸ್ತ್ರ ಪ್ರಯೋಗಿಸಿದ ಜಿಲ್ಲಾಡಳಿತ ಇದುವರೆಗೂ ಸಾರ್ವಜನಿಕರಿಂದ ₹ 28.09 ಲಕ್ಷ ದಂಡ ವಸೂಲಿ ಮಾಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳದ, ಮಾಸ್ಕ್ ಧರಿಸದ ಹಾಗೂ ಕೋವಿಡ್ ಮಾರ್ಗಸೂಚಿ ಪಾಲಿಸಿದವರಿಂದ ದಂಡ ಪಡೆಯಲಾಗಿದೆ.

12 ಇಲಾಖೆಗಳಿಗೆ ದಂಡ ಹಾಕುವ ಅಧಿಕಾರ:

ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಅಬಕಾರಿ ಇಲಾಖೆ, ಕಂದಾಯ, ಪೊಲೀಸ್, ಮೀನುಗಾರಿಕೆ, ಪ್ರವಾಸೋದ್ಯಮ, ಸಾರಿಗೆ, ಎಪಿಎಂಸಿ, ಧಾರ್ಮಿಕ ದತ್ತಿ, ಸಾರ್ವಜನಿಕ ಶಿಕ್ಷಣ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಗಳಿಗೆ ಜಿಲ್ಲಾಡಳಿತ ದಂಡ ಹಾಕುವ ಅಧಿಕಾರ ನೀಡಿದ್ದು, ಇದುವರೆಗೂ (ಏ.9ರವರೆಗಿನ ಮಾಹಿತಿ) 26,330 ಮಂದಿಯಿಂದ ₹ 28,09,400 ದಂಡವನ್ನು ವಸೂಲು ಮಾಡಲಾಗಿದೆ.

ಉಡುಪಿ ನಗರಸಭೆ ಅಧಿಕಾರಿಗಳು 1,543 ಜನರಿಂದ ₹ 1,71,300, ಕಾರ್ಕಳ ಪುರಸಭೆ ಅಧಿಕಾರಿಗಳು 342 ಪ್ರಕರಣಗಳಲ್ಲಿ ₹ 34,150, ಕುಂದಾಪುರ ಪುರಸಭೆಯಿಂದ 661 ಮಂದಿ ನಿಯಮ ಉಲ್ಲಂಘಿಸಿದವರಿಂದ ₹ 66,200, ಕಾಪು ಪುರಸಭೆಯಿಂದ 538 ಜನರಿಂದ ₹ 54,600, ಸಾಲಿಗ್ರಾಮ ಪಟ್ಟಣ ಪಂಚಾಯಿತಿಯಿಂದ 361 ಮಂದಿಯಿಂದ ₹ 36,100 ಹಾಗೂ ಬೈಂದೂರು ಪಟ್ಟಣ ಪಂಚಾಯಿತಿಯಿಂದ 203 ಮಂದಿಯಿಂದ ₹ 20,300 ದಂಡ ಪಡೆಯಲಾಗಿದೆ.

ಪಂಚಾಯತ್ ವ್ಯಾಪ್ತಿಯಲ್ಲಿಯೂ ಕೋವಿಡ್‌ ನಿಯಮ ಪಾಲಿಸಿದವರಿಗೆ ದಂಡ ಹಾಕಲಾಗಿದೆ. ಉಡುಪಿ ತಾಲ್ಲೂಕು ಪಂಚಾಯಿತಿಯಿಂದ ₹ 46,100, ಕಾರ್ಕಳದಿಂದ ₹ 93,000, ಕುಂದಾಪುರದಿಂದ ₹ 80,300, ಕಾಪುವಿನಿಂದ ₹ 36,400, ಬ್ರಹ್ಮಾವರದಿಂದ ₹ 52,500, ಹೆಬ್ರಿಯಿಂದ ₹ 27,500, ಬೈಂದೂರಿನಿಂದ ₹ 1,10,200 ದಂಡ ಹಾಕಲಾಗಿದೆ.

ಅಬಕಾರಿ ಇಲಾಖೆ ಅಧಿಕಾರಿಗಳು ಉಡುಪಿ ತಾಲ್ಲೂಕಿನಲ್ಲಿ ₹ 33,330, ಕಾರ್ಕಳದಲ್ಲಿ ₹ 21,400, ಕುಂದಾಪುರದಲ್ಲಿ ₹ 23,500, ಕಾಪುವಿನಲ್ಲಿ ₹ 11,600, ಬ್ರಹ್ಮಾವರದಲ್ಲಿ ₹ 15,400, ಹೆಬ್ರಿಯಲ್ಲಿ ₹ 5,600, ಬೈಂದೂರಿನಲ್ಲಿ ₹ 9,600 ದಂಡ ವಿಧಿಸಲಾಗಿದೆ.

ಕಂದಾಯ ಇಲಾಖೆ ಅಧಿಕಾರಿಗಳು ಉಡುಪಿಯಲ್ಲಿ ₹ 23,400, ಕಾರ್ಕಳದಲ್ಲಿ ₹ 28,900, ಕುಂದಾಪುರದಲ್ಲಿ ₹5,000, ಕಾಪುವಿನಲ್ಲಿ ₹ 10,200, ಬ್ರಹ್ಮಾವರದಲ್ಲಿ ₹ 8,200, ಹೆಬ್ರಿಯಲ್ಲಿ ₹ 13,000 ಹಾಗೂ ಬೈಂದೂರಿನಲ್ಲಿ ₹ 8,600 ದಂಡ ಹಾಕಿದ್ದಾರೆ.‌

ಪೊಲೀಸ್ ಇಲಾಖೆ ಅತಿ ಹೆಚ್ಚು:

ದಂಡ ವಿಧಿಸುವ ಅಧಿಕಾರ ಪಡೆದಿದ್ದ 12 ಇಲಾಖೆಗಳಲ್ಲಿ ಪೊಲೀಸ್ ಇಲಾಖೆ 15954 ಪ್ರಕರಣಗಳಲ್ಲಿ ₹ 17,49,950 ಗರಿಷ್ಠ ಪ್ರಮಾಣದ ದಂಡ ಹಾಕಿದ್ದರೆ, ಮೀನುಗಾರಿಕೆ ಇಲಾಖೆ ₹ 5,100, ಪ್ರವಾಸೋದ್ಯಮ ಇಲಾಖೆ ₹ 6,900, ಸಾರಿಗೆ ಇಲಾಖೆ ₹ 800 ದಂಡ ವಸೂಲಿ ಮಾಡಿದೆ.

ನಾಲ್ಕು ಇಲಾಖೆಗಳು ಶೂನ್ಯ:

ಎಪಿಎಂಸಿ, ಧಾರ್ಮಿಕ ದತ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಗಳಿಗೂ ದಂಡ ಹಾಕಲು ಜಿಲ್ಲಾಡಳಿತ ಅನುಮತಿ ನೀಡಿದ್ದರೂ ನಾಲ್ಕೂ ಇಲಾಖೆಗಳು ಯಾವುದೇ ದಂಡ ವಿಧಿಸಿಲ್ಲ.

‘ಬೊಕ್ಕಸ ತುಂಬಿಸಲು ಅಲ್ಲ; ಜಾಗೃತಿಗೆ ದಂಡ’

ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದವರಿಂದ ಸಂಗ್ರಹಿಸಿರುವ ದಂಡದ ಹಣ ಸರ್ಕಾರದ ಖಜಾನೆಗೆ ಜಮೆಯಾಗಲಿದೆ. ಸ್ಥಳೀಯ ಅಗತ್ಯತೆಗಳಿಗೆ ಬಳಸಿಕೊಳ್ಳಲು ಅವಕಾಶವಿಲ್ಲ. ಸರ್ಕಾರದ ಬೊಕ್ಕಸಕ್ಕೆ ಹಣ ಸಂಗ್ರಹಿಸುವ ಉದ್ದೇಶದಿಂದ ದಂಡ ಹಾಕುತ್ತಿಲ್ಲ. ಸಾರ್ವಜನಿಕರಲ್ಲಿ ಸೋಂಕಿನ ಬಗ್ಗೆ ಇರುವ ಅಸಡ್ಡೆ ದೂರವಾಗಲಿ ಎಂಬುದು ಮುಖ್ಯ ಉದ್ದೇಶ. ನಿಯಮ ಉಲ್ಲಂಘಿಸಿ ದಂಡ ಕಟ್ಟಿದ ವ್ಯಕ್ತಿ ಮತ್ತೊಮ್ಮೆ ದಂಡ ಕಟ್ಟದಂತೆ ನಿಯಮಗಳನ್ನು ಪಾಲಿಸುತ್ತಾನೆ ಎಂಬುದು ಜಿಲ್ಲಾಡಳಿತದ ಆಶಯ ಎನ್ನುತ್ತಾರೆ ಜಿಲ್ಲಾಧಿಕಾರಿ ಜಿ.ಜಗದೀಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT