ಶುಕ್ರವಾರ, ಆಗಸ್ಟ್ 6, 2021
21 °C
ದುಡಿಯುವ ಎಲ್ಲ ವರ್ಗಗಳ ಪರಿಗಣಿಸಿ, ಕಠಿಣ ನಿಬಂಧನೆಗಳು ಬೇಡ; ಸರ್ಕಾರಕ್ಕೆ ಒತ್ತಾಯ

ಮೂಗಿಗೆ ತುಪ್ಪ ಸವರಿದ ಸರ್ಕಾರ: ಕೆಲವರಿಗುಂಟು; ಹಲವರಿಗಿಲ್ಲ

ಬಾಲಚಂದ್ರ.ಎಚ್‌ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕೋವಿಡ್‌ ಎರಡನೇ ಅಲೆಯಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ, ಆಟೊ, ಟ್ಯಾಕ್ಸಿ ಚಾಲಕರಿಗೆ, ಬೀದಿಬದಿ ವ್ಯಾಪಾರಿಗಳಿಗೆ, ನೇಕಾರರಿಗೆ, ಬೆಳೆಗಾರರಿಗೆ, ಕಲಾವಿದರಿಗೆ, ಮೀನುಗಾರರಿಗೆ ಸೇರಿದಂತೆ ಹಲವು ವರ್ಗಗಳಿಗೆ ರಾಜ್ಯ ಸರ್ಕಾರ ಈಚೆಗೆ ₹ 1,250 ಕೋಟಿ ಮೊತ್ತದ ಪರಿಹಾರ ಪ್ಯಾಕೇಜ್‌ ಘೋಷಿಸಿದೆ.

ಆದರೆ, ಪರಿಹಾರ ಪಡೆಯಲು ಹಲವು ನಿಬಂಧನೆ ಹಾಕಿರುವ ಪರಿಣಾಮ ಸಾವಿರಾರು ಫಲಾನುಭವಿಗಳು ಪರಿಹಾರ ವಂಚಿತರಾಗಬೇಕಾಗಿದೆ. ಕೋವಿಡ್‌ ಸಂಕಷ್ಟಕ್ಕೆ ತುತ್ತಾಗಿರುವ ಎಲ್ಲ ವರ್ಗಗಳನ್ನು ಪರಿಹಾರಕ್ಕೆ ಪರಿಗಣಿಸದಿರುವುದು ಕೂಡ ಲೋಪ. ಸಂಕಷ್ಟಕ್ಕೆ ತುತ್ತಾದವರಿಗೆ ಆರ್ಥಿಕ ನೆರವು ನೀಡುವ ನೈಜ ಕಾಳಜಿ ಸರ್ಕಾರಕ್ಕಿದ್ದರೆ ನಿಬಂಧನೆಗಳನ್ನು ಸಡಿಲಿಸಬೇಕು. ಅರ್ಹರಿಗೆ ಪರಿಹಾರ ಕೊಡಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ.

ಮಲತಾಯಿ ಧೋರಣೆ:

ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಹಲವು ವರ್ಗಗಳು ಇದ್ದರೂ ಕೆಲವೇ ವರ್ಗಗಳನ್ನು ಮಾತ್ರ ಪರಿಹಾರಕ್ಕೆ ಆಯ್ಕೆ ಮಾಡಿರುವುದು ಸರಿಯಲ್ಲ. ಕರಾವಳಿಯಲ್ಲಿ ಸಾವಿರಾರು ನೌಕರರು ಖಾಸಗಿ ಬಸ್‌ಗಳಲ್ಲಿ ನಿರ್ವಾಹಕರು, ಚಾಲಕರಾಗಿ ದುಡಿಯುತ್ತಿದ್ದಾರೆ. ಹೋಟೆಲ್‌ಗಳಲ್ಲಿ ಕಾರ್ಮಿಕರಾಗಿ, ಸ್ವಚ್ಛತಾ ಕೆಲಸಗಾರರಾಗಿದ್ದಾರೆ. ಸಣ್ಣ ವ್ಯಾಪಾರಿಗಳಿದ್ದಾರೆ. ಪೆಟ್ರೋಲ್ ಬಂಕ್‌ನಲ್ಲಿದ್ದಾರೆ ಇವರೆಲ್ಲರೂ ಪರಿಹಾರ ವಂಚಿತರಾಗಿದ್ದಾರೆ.‌

ಪಿಎಫ್‌ ಇದ್ದವರಿಗೆ ಪರಿಹಾರ ಇಲ್ಲ:

ಬೀಡಿ ಕಾರ್ಮಿಕರು, ಹೆಂಚು ಕಾರ್ಮಿಕರು, ರೈಸ್‌ಮಿಲ್ ಹಾಗೂ ಗೋಡಂಬಿ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ದೊಡ್ಡ ಶ್ರಮಿಕ ವರ್ಗ ಜಿಲ್ಲೆಯಲ್ಲಿದೆ. ಇವರೆಲ್ಲರಿಗೂ ಇಎಸ್‌ಐ, ಪಿಎಫ್‌, ವೇತನ ನೀಡಲಾಗುತ್ತಿದೆ ಎಂಬ ಕಾರಣವೊಡ್ಡಿ ಪರಿಹಾರದಿಂದ ಹೊರಗಿಟ್ಟಿರುವುದು ಅವೈಜ್ಞಾನಿಕ. ಲಾಕ್‌ಡೌನ್‌ನಿಂದಾಗಿ ಉದ್ಯೋಗವಿಲ್ಲದೆ ವೇತನದಿಂದ ವಂಚಿತರಾಗಿರುವ ಈ ವರ್ಗಕ್ಕೆ ಪರಿಹಾರ ಕೊಡಬೇಕು ಎಂದು ಒತ್ತಾಯಿಸುತ್ತಾರೆ ಕಾರ್ಮಿಕ ಮುಖಂಡರು ಹಾಗೂ ಹೋರಾಟಗಾರರಾದ ಬಾಲಕೃಷ್ಣ ಶೆಟ್ಟಿ.

ಬ್ಯಾಡ್ಜ್ ಇದ್ದವರಿಗೆ ಮಾತ್ರ ಪರಿಹಾರ:

ಬ್ಯಾಡ್ಜ್‌ ಹೊಂದಿರುವ ಆಟೊ ಚಾಲಕರು ಮಾತ್ರ ಪರಿಹಾರಕ್ಕೆ ಅರ್ಹರು ಎಂಬ ನಿಯಮ ಸರಿಯಲ್ಲ. ಜಿಲ್ಲೆಯಲ್ಲಿ ಸ್ವಂತ ಆಟೋ ಇಲ್ಲದ ಚಾಲಕರು ಹೆಚ್ಚಾಗಿದ್ದಾರೆ. ದಿನಕ್ಕೆ ₹ 300 ರಿಂದ ₹ 400 ಬಾಡಿಗೆ ಕೊಟ್ಟು ಆಟೊ ಓಡಿಸುತ್ತಾರೆ. ಹೆಚ್ಚಿನವರ ಬಳಿ ಬ್ಯಾಡ್ಜ್ ಇಲ್ಲವಾದ್ದರಿಂದ ಸರ್ಕಾರದ ಪರಿಹಾರ ಸಿಗುತ್ತಿಲ್ಲ. ಬದಲಿಗೆ ಆಟೋ ಮಾಲೀಕನ ಜೇಬು ಸೇರುತ್ತಿದೆ. ನಿಜವಾದ ಫಲಾನುಭವಿಗೆ ಅನ್ಯಾಯವಾಗುತ್ತಿದೆ ಎನ್ನುತ್ತಾರೆ ಯಶೋಧಾ ಆಟೋ ಯೂನಿಯನ್ ಅಧ್ಯಕ್ಷರಾದ ಕೃಷ್ಣಮೂರ್ತಿ.

ಚಾಲಕರ ಆಧಾರ್ ಸಂಖ್ಯೆ, ಆಟೋ ನೋಂದಣಿ ಸಂಖ್ಯೆ ಹಾಗೂ ಚಾಲನಾ ಪರವಾನಗಿ ಪ್ರತಿಯನ್ನು ಪಡೆದು ಪರಿಹಾರ ನೀಡಬಹುದಿತ್ತು. ಹಣವೂ ಖರ್ಚಾಗಬಾರದು, ಪರಿಹಾರವೂ ಕೊಟ್ಟಂತಾಗಬೇಕು ಎಂಬ ಉದ್ದೇಶ ಸರ್ಕಾರದ್ದು ಎಂದು ಅಸಮಾಧಾನ ವ್ಯಕ್ತಪಡಿಸಿದರು ಕೃಷ್ಣಮೂರ್ತಿ.

ಮೀನುಗಾರರಿಗೆ ಪರಿಹಾರ:

ಉಳಿತಾಯ ಪರಿಹಾರ ಯೋಜನೆಯಲ್ಲಿ ನೋಂದಾಯಿತ 10,028 ಮೀನುಗಾರರಿಗೆ ತಲಾ ₹ 3,000 ಕೊಡಬೇಕು ಎಂದು ಹಿಂದೆ ಸರ್ಕಾರ ನಿರ್ದೇಶನ ನೀಡಿತ್ತು. ಮೋಟಾರೀಕೃತ ನಾಡದೋಣಿ ಮಾಲೀಕರಿಗೆ ಪರಿಹಾರ ನೀಡುವ ಬಗ್ಗೆಯೂ ಚರ್ಚೆಯಾಯಿತು. ಬಳಿಕ ಪಾತಿ ದೋಣಿ (ಸಾಂಪ್ರದಾಯಿಕ ನಾಡದೋಣಿ) ಮೀನುಗಾರರಿಗೆ ಪರಿಹಾರ ನೀಡಬೇಕು ಎಂಬ ನಿರ್ದೇಶನ ಬಂತು. ಯಾರಿಗೆ ಪರಿಹಾರ ನೀಡಬೇಕು ಎಂದು ಇನ್ನೂ ಅಂತಿಮ ನಿರ್ಧಾರ ಮಾಡಿಲ್ಲ ಎನ್ನುತ್ತಾರೆ ಮೀನುಗಾರ ಮುಖಂಡರು ಹಾಗೂ ಅಧಿಕಾರಿಗಳು.

ಈ ವರ್ಷ 723 ಕಲಾವಿದರು ಪರಿಹಾರ ಧನಕ್ಕಾಗಿ ಅರ್ಜಿ ಸಲ್ಲಿಸಿದ್ದು, 681 ಮಂದಿಗೆ ಪರಿಹಾರ ನೀಡಲು ಶಿಫಾರಸು ಮಾಡಲಾಗಿದೆ. ಸಂಗೀತ, ನೃತ್ಯ, ಯಕ್ಷಗಾನ, ದೈವಾರಾಧನೆ, ಸಾಹಿತ್ಯ, ಶಿಲ್ಪಕಲೆ, ಚಿತ್ರಕಲೆ, ಲಿಲಿತಕಲೆಗಳ ಕಲಾವಿದರು ಅರ್ಜಿ ಹಾಕಿದ್ದಾರೆ. ಕಳೆದ ವರ್ಷ 461 ಮಂದಿಗೆ ಪರಿಹಾರ ನೀಡಲಾಗಿತ್ತು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ ಮಾಹಿತಿ ನೀಡಿದರು.

‘ಕಾರ್ಮಿಕ ಕಲ್ಯಾಣ ಮಂಡಳಿ ರಚಿಸಿ’

ಜಿಲ್ಲೆಯಲ್ಲಿ ನೋಂದಣಿ ಮಾಡಿಸಿಕೊಳ್ಳದ ಸಾವಿರಾರು ಮೀನುಗಾರರು, ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಸಾವಿರಾರು ಕಾರ್ಮಿಕರು ಇದ್ದಾರೆ. ಬ್ಯಾಡ್ಜ್‌ ಇಲ್ಲದ ರಿಕ್ಷಾ ಚಾಲಕರಿದ್ದಾರೆ. ಇವರೆಲ್ಲ ಪರಿಹಾರದಿಂದ ವಂಚಿತರಾಗಿದ್ದಾರೆ. ಆದಾಯ ತೆರಿಗೆ ವ್ಯಾಪ್ತಿಗೊಳಪಡದ ಎಲ್ಲರಿಗೂ ಕನಿಷ್ಠ 6 ತಿಂಗಳು ಪ್ರತಿತಿಂಗಳು ₹ 7,500 ಪರಿಹಾರ ನೀಡಬೇಕು. ಕೇವಲ ಎರಡರಿಂದ ಮೂರು ಸಾವಿರ ಕೊಟ್ಟು ಕೈತೊಳೆದುಕೊಳ್ಳುವುದರಿಂದ ಬಡವರ ಕಷ್ಟ ನೀಗುವುದಿಲ್ಲ. ಕೇರಳದಲ್ಲಿ 32 ವರ್ಗಗಳಿಗೆ ಪ್ರತ್ಯೇಕ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಲಾಗಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ರಚಿಸಿ ಪರಿಹಾರ ಕೊಡಬೇಕು ಎಂದು ಕಾರ್ಮಿಕರ ಪರ ಹೋರಾಟಗಾರ ಬಾಲಕೃಷ್ಣ ಶೆಟ್ಟಿ ಹೇಳಿದರು.

2020ರಲ್ಲಿ ಸಿಕ್ಕ ಪರಿಹಾರ ಎಷ್ಟು

ಕಳೆದ ವರ್ಷ ಕೋವಿಡ್‌ ಲಾಕ್‌ಡೌನ್ ಅವಧಿಯಲ್ಲಿ ಸರ್ಕಾರ ಘೋಷಿಸಿದ್ದ ಪರಿಹಾರ ಪ್ಯಾಕೇಜ್‌ನಡಿ ಜಿಲ್ಲೆಯ 30,195 ಕಟ್ಟಡ ಕಾರ್ಮಿಕರಿಗೆ ತಲಾ ₹ 5,000 ಪರಿಹಾರವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಅರ್ಜಿ ಹಾಕಿದ್ದ 1,048 ಕ್ಷೌರಿಕರ ಪೈಕಿ 999 ಮಂದಿಗೆ ಹಾಗೂ ಅರ್ಜಿ ಹಾಕಿದ 368 ಅಗಸರ ಪೈಕಿ 291 ಮಂದಿಗೆ ತಲಾ ₹ 5000 ಪರಿಹಾರ ನೀಡಲಾಗಿದೆ ಎಂದು ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಬಿ.ಆರ್.ಕುಮಾರ್ ಮಾಹಿತಿ ನೀಡಿದರು.

2021ರಲ್ಲಿ ಸಿಕ್ಕ ಪರಿಹಾರ (ಜೂನ್‌ 19ರವರೆಗಿನ ಮಾಹಿತಿ)

ಪ್ರಸಕ್ತ ವರ್ಷ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ಗುರುತಿಸಲಾಗಿರುವ ಹಮಾಲರು, ಚಿಂದಿ ಹಾಯುವರು, ಗೃಹ ಕಾರ್ಮಿಕರು, ಟೈಲರ್‌ಗಳು, ಮೆಕ್ಯಾನಿಕ್‌, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಭಟ್ಟಿ ಕಾರ್ಮಿಕರು 4,714 ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅರ್ಜಿ ವಿಲೇವಾರಿ ಪ್ರಕ್ರಿಯೆ ಆರಂಭವಾಗಿದ್ದು, ಪ್ರಾಥಮಿಕ ಹಂತದಲ್ಲಿ 905 ಕ್ಷೌರಿಕರಿಗೆ ಹಾಗೂ 279 ಅಗಸರಿಗೆ ತಲಾ ₹ 2,000 ಪರಿಹಾರ ಹಣ ಜಮೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ ಹೇಗೆ ?

ಕಳೆದ ವರ್ಷ ಪರಿಹಾರ ಪಡೆದ ಕ್ಷೌರಿಕರು ಹಾಗೂ ಅಗಸರು ಮತ್ತೆ ಅರ್ಜಿ ಹಾಕಬೇಕಿಲ್ಲ. ಈಗಾಗಲೇ ಅವರ ಖಾತೆಗೆ ಹಣ ಹಾಕಲಾಗಿದೆ. ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ 11 ವರ್ಗಗಳ ಕಾರ್ಮಿಕರು ಪರಿಹಾರ ಪಡೆಯಲು ಬಿಪಿಎಲ್‌ ಕಾರ್ಡ್‌ ಹೊಂದಿರಬೇಕು, 65 ವರ್ಷದೊಳಗಿನವರಾಗಿರಬೇಕು. ಆಧಾರ್ ಲಿಂಕ್‌ ಬ್ಯಾಂಕ್ ಖಾತೆ ಹೊಂದಿರಬೇಕು. ಉದ್ಯೋಗ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಸೇವಾ ಸಿಂಧು ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ವೃತ್ತಿ ಕಾಲಂನಲ್ಲಿ ಕೇವಲ ಕಾರ್ಮಿಕ ಎಂದು ನಮೂದಿಬಾರದು, ಹಮಾಲಿ, ಚಿಂದಿ ಹಾಯುವವ, ಟೈಲರ್‌ ಹೀಗೆ ನಿರ್ಧಿಷ್ಟ ವೃತ್ತಿಯನ್ನು ನಮೂದಿಸಬೇಕು. ಇಲ್ಲವಾದರೆ ಅರ್ಜಿ ತಿರಸ್ಕೃತವಾಗುತ್ತದೆ. ಜತೆಗೆ ಉದ್ಯೋಗ ದೃಢೀಕರಣ ಪತ್ರವನ್ನು ಸಂಬಂಧಿತ ಅಧಿಕಾರಿಗಳು, ಗೆಜೆಟೆಡ್ ಅಧಿಕಾರಿಗಳನ್ನು ಹೊರತುಪಡಿಸಿ ಬೇರೆಯವರಿಂದ ಸಹಿ ಹಾಕಿಸಿ ಸಲ್ಲಿಸಿದರೆ ಅರ್ಜಿ ತಿರಸ್ಕೃತವಾಗುತ್ತದೆ. ಜುಲೈ 20ರೊಳಗೆ ಅರ್ಜಿ ಸಲ್ಲಿಸಬೇಕು.

–ಬಿ.ಆರ್.ಕುಮಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು