ಭಾನುವಾರ, ಮೇ 29, 2022
21 °C
ಅದಮಾರು ಮಠ

ಸ್ವಾವಲಂಬನೆಯ ಪಾಠ ಕಲಿಸಿದ ಕೋವಿಡ್‌ ಕಾಲಘಟ್ಟ- ಈಶಪ್ರಿಯ ತೀರ್ಥ ಸ್ವಾಮೀಜಿ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಸನಾತನ ಸಂಸ್ಕೃತಿ ಹಾಗೂ ಭಾರತೀಯ ಪರಂಪರೆ ಉಳಿವಿಗೆ ವಿಶೇಷ ಕಾಳಜಿ, ಪರಿಸರ ಪ್ರೇಮ, ದೇಸಿ ಕಲೆ, ಸಂಸ್ಕೃತಿಗೆ ಒತ್ತು ಹೀಗೆ ಹಲವು ಸಾಮಾಜಿಕ ಕಾರ್ಯಗಳ ಮೂಲಕ ತಮ್ಮ ಪರ್ಯಾಯದ ಅವಧಿಯಲ್ಲಿ ಮಠವನ್ನು ಸಮಾಜಕ್ಕೆ ಮತ್ತಷ್ಟು ಹತ್ತಿರವಾಗಿಸಿದವರು ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ.

ಅದಮಾರು ಮಠದ 33 ಯತಿಗಳಾಗಿ ಜೂನ್ 19, 2014ರಂದು ಸನ್ಯಾಸಾಶ್ರಮ ಸ್ವೀಕರಿಸಿದ ಈಶಪ್ರಿಯ ತೀರ್ಥ ಶ್ರೀಗಳು ಕೊರೊನಾ ಕಾಲಘಟ್ಟದಲ್ಲೂ ಸಂಪ್ರದಾಯಗಳಿಗೆ ಚ್ಯುತಿಬಾರದಂತೆ ಪರ್ಯಾಯವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಜ.18ರಂದು ತಮ್ಮ ಪ್ರಥಮ ಪರ್ಯಾಯ ಅವಧಿಯನ್ನು ಮುಗಿಸುತ್ತಿದ್ದಾರೆ.

–ಮೊದಲ ಪರ್ಯಾಯ ಅವಧಿ ತೃಪ್ತಿ ತಂದಿದೆಯೇ ?

ಪರ್ಯಾಯ ಪೂರ್ವಭಾವಿಯಾಗಿ ಯಾವುದೇ ಸಂಕಲ್ಪ ಮಾಡಿರಲಿಲ್ಲ. ಹಾಗಾಗಿ, ಸಂಕಲ್ಪ ಭಂಗವಾಗುವ ಪ್ರಶ್ನೆ ಎದುರಾಗುವುದಿಲ್ಲ. ಕೋವಿಡ್‌ನಿಂದಾಗಿ ಲಭ್ಯವಾದ ಸಮಯವನ್ನು ಮಠದ ಮೂಲಸೌಕರ್ಯಗಳ ಅಭಿವೃದ್ಧಿಗೆ ಸಮರ್ಥವಾಗಿ ಬಳಸಿಕೊಂಡಿರುವ ತೃಪ್ತಿ ಇದೆ. ಮಠ ಹಾಗೂ ದೇವಸ್ಥಾನಗಳು ಪ್ಲಾಸ್ಟಿಕ್‌ನಿಂದ ಮುಕ್ತವಾಗಿರಬೇಕು ಎಂಬ ಆಶಯ ಈಡೇರಿದೆ.‌

–ನಿಮ್ಮ ಪರ್ಯಾಯದ ಬಹುತೇಕ ಅವಧಿಯಲ್ಲಿ ಲಾಕ್‌ಡೌನ್‌ ಇತ್ತು. ಇದರಿಂದ ಪರ್ಯಾಯಕ್ಕೆ ಪೆಟ್ಟು ಬಿತ್ತೇ ?

ಕೋವಿಡ್‌–19 ಹಾಗೂ ಲಾಕ್‌ಡೌನ್‌ ಸಮಯವನ್ನು ಮಠದ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿ ಬಳಸಿಕೊಳ್ಳಲಾಯಿತು. ಮಠದೊಳಗೆ ಹಲವು ಕಾಮಗಾರಿಗಳು ನಡೆದವು. ಸ್ವಾವಲಂಬನೆ ಹಾಗೂ ಸಾವಯವ ಕೃಷಿಯ ಮಹತ್ವ ಹೆಚ್ಚು ಅರಿವಿಗೆ ಬಂದಿದ್ದೇ ಈ ಲಾಕ್‌ಡೌನ್ ಅವಧಿಯಲ್ಲಿ.

–ಕೋವಿಡ್ ಅವಧಿಯಲ್ಲಿ ಬ್ಯಾಂಕ್‌ನಿಂದ ಸಾಲ ಪಡೆದಿರುವುದು ಮಠದ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ ಎಂಬುದರ ಸೂಚನೆಯೇ ?

ಖಂಡಿತ ಇಲ್ಲ, ಮಠದ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಮಠದ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಹಾಗೂ ಸಾಲದ ಹೊರೆ ಹೆಗಲ ಮೇಲಿದೆ ಎಂಬ ಎಚ್ಚರಿಕೆ ಇರಬೇಕು ಎಂಬ ದೃಷ್ಟಿಯಿಂದ ಬ್ಯಾಂಕ್‌ನಿಂದ ಸಾಲ ಪಡೆಯಲಾಗಿದೆ. ಇದರ ಹೊರತಾಗಿ ಬೇರೆ ಉದ್ದೇಶವಿಲ್ಲ.

– ಪರ್ಯಾಯ ಮುಗಿದ ಬಳಿಕ ಮುಂದಿನ ಕಾರ್ಯಗಳು ಏನು ?

2 ವರ್ಷಗಳ ಪರ್ಯಾಯ ಅವಧಿಯಲ್ಲಿ ದೇವರ ಪೂಜೆ ಮಾಡಿದ್ದು ಸಂತೃಪ್ತಿ ಕೊಟ್ಟಿದೆ. ಮುಂದೆಯೂ ದೇವರ ಸೇವೆ ಹಾಗೂ ಪೂಜೆ ನಿರಂತರವಾಗಿರಲಿದೆ. 

–ಭಕ್ತರಿಗೆ ನಿಮ್ಮ ಸಂದೇಶಗಳೇನು ?

ಕೋವಿಡ್‌ ಕಾಲಘಟ್ಟದಲ್ಲಿ ಸಂಕಷ್ಟಗಳನ್ನು ಎದುರಿಸಿ ಹೇಗೆ ಬದುಕಬೇಕು ಎಂಬುದನ್ನು ಕಲಿತಿದ್ದೇವೆ. ಒಬ್ಬರಿಗೊಬ್ಬರು ನೆರವಾಗುವುದನ್ನು, ಒಟ್ಟಾಗಿ ಬಾಳುವುದನ್ನು ಅರಿತಿದ್ದೇವೆ. ನಮ್ಮ ಬೇರುಗಳನ್ನು ಎಂದೂ ಮರೆಯಬಾರದು. ನಗರಗಳಂತೆ ಹಳ್ಳಿಗಳು ಅಭಿವೃದ್ಧಿಯಾಗಬೇಕು. ಉದ್ಯೋಗಗಳು ಸೃಷ್ಟಿಯಾಗಿ, ಇಲ್ಲಿನ ಯುವಜನತೆ ವಲಸೆ ಹೋಗುವುದನ್ನು ತಪ್ಪಿಸಬೇಕು. ಮಣ್ಣಿನ ಸಂಸ್ಕೃತಿ, ಪರಂಪರೆಯನ್ನು ಕಾಪಾಡಬೇಕು. ಆಧ್ಯಾತ್ಮಿಕ ಹಾಗೂ ಧಾರ್ಮಿಕ ವಿಚಾರಗಳನ್ನು ಪಾಲಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು