ಶನಿವಾರ, ಜೂನ್ 19, 2021
22 °C
ಗಡಿಗಳಲ್ಲಿ ಚೆಕ್ ಪೋಸ್ಟ್‌ ನಿರ್ಮಾನ ಮಾಡಿ : ಜಿಲ್ಲಾಧಿಕಾರಿ ಜಿ.ಜಗದೀಶ್

ಅಂತರ ಕಾಪಾಡಲು ಅಂಗಡಿಗಳ ಮುಂದೆ ಮಾರ್ಕಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕೋವಿಡ್ 2ನೇ ಅಲೆ ನಿಯಂತ್ರಣಕ್ಕೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆದು ಅನಗತ್ಯ ವಾಹನ ಸಂಚಾರ ನಿಯಂತ್ರಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆ ನೀಡಿದರು.

ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್ ಮಾರ್ಗಸೂಚಿ ಅನುಷ್ಠಾನ ಕುರಿತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಗಡಿ ಪ್ರದೇಶಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆದು ಅಗತ್ಯ ಸಿಬ್ಬಂದಿ ನಿಯೋಜಿಸಬೇಕು. ವೈದ್ಯಕೀಯ ಕಾರಣ ಹಾಗೂ ಸೂಕ್ತ ಪಾಸ್‌ಗಳನ್ನು ಹೊಂದಿದವರಿಗೆ ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆ ಮಾಡಿ ಗಡಿಯೊಳಗೆ ಪ್ರವೇಶಿಸಲು ಅವಕಾಶ ನೀಡಬೇಕು ಎಂದು ಸೂಚಿಸಿದರು.

ಬೆಳಿಗ್ಗೆ 6 ರಿಂದ 10ವರೆಗೆ ಅವಶ್ಯಕ ವಸ್ತುಗಳ ಖರೀದಿಗೆ ಅವಕಾಶವಿದ್ದು, ಮಾರುಕಟ್ಟೆಯಲ್ಲಿ ಅಂತರ ಕಾಯ್ದುಕೊಳ್ಳಲು ಅಂಗಡಿಗಳ ಮುಂದೆ ಮಾರ್ಕಿಂಗ್ ವ್ಯವಸ್ಥೆ ಮಾಡಬೇಕು. 10 ಗಂಟೆಯ ನಂತರ ತೆರೆದಿರುವ ಅಂಗಡಿಗಳ ಪರವಾನಗಿಯನ್ನು ಕೋವಿಡ್ ಮುಗಿಯುವವರೆಗೂ ಅಮಾನತು ಮಾಡಿ ಎಂದು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೂಕ್ತ ಅನುಮತಿಯೊಂದಿಗೆ ಜಿಲ್ಲೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲು ಅವಕಾಶ ನೀಡಿ. ರಕ್ತದಾನ ಮಾಡಲು ತೆರಳುವವರಿಗೆ ಸಂಚರಿಸಲು ಅವಕಾಶ ನೀಡಿ ಎಂದರು.

ಹೋಂ ಐಸೋಲೇಷನ್ ಮತ್ತು ಹೋಂ ಕ್ವಾರಂಟೈನ್‌ನಲ್ಲಿರುವವರನ್ನು ನಿಯತವಾಗಿ ಭೇಟಿನೀಡಿ ವರದಿ ನೀಡಬೇಕು. ಪಾಸಿಟಿವ್ ಇದ್ದು, ಹೋಂ ಐಸೋಲೇಷನ್‌ನಿಂದ ಹೊರಬಂದರೆ, ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಸಂಚರಿಸಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಎಂದು ಸೂಚನೆ ನೀಡಿದರು.

ಕೋವಿಡ್ ಹೆಚ್ಚು ಕಂಡಬಂದರೆ ಕಂಟೈನ್‌ಮೆಂಟ್ ಹಾಗೂ ಮೈಕ್ರೋ ಕಂಟೈನ್ಮೆಂಟ್‌ ವಲಯಗಳನ್ನು ರಚಿಸಿ, ಕೋವಿಡ್‌ ಪರೀಕ್ಷೆ ಹೆಚ್ಚುಗೊಳಿಸಿ ಸೋಂಕಿತರನ್ನು ಶೀಘ್ರ ಪತ್ತೆಹಚ್ಚಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾಡಳಿತದಿಂದ ಶಿಫಾರಸು ಮಾಡುವ ಕೋವಿಡ್ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಶೇ 75 ಬೆಡ್‌ಗಳು ಮೀಸಲಿಡಬೇಕು. ನಿಯಮ ಪಾಲನೆ ಆಗಿದೆಯೇ ಎಂದು ಅಧಿಕಾರಿಗಳು ಪರಿಶೀಲಿಸಿ ವರದಿ ನೀಡಬೇಕು. ಸೋಂಕಿತರಿಗೆ ಹೋಂ ಐಸೋಲೇಷನ್‌ಗೆ ಮನೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದಿದ್ದರೆ ಹೋಂ ಕೇರ್ ಸೆಂಟರ್ ತೆರೆಯುವ ಬಗ್ಗೆ ಕ್ರಮ ಕೈಗೊಳ್ಳಿ. ಮುಂಜಾಗ್ರತೆಯಾಗಿ ಎಲ್ಲಾ ತಾಲ್ಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್‌ಗಳು ಲಭ್ಯವಿರುವಂತೆ ವ್ಯವಸ್ಥೆ ಮಾಡಿಕೊಳ್ಳಿ ಎಂದರು.

ಹಿಂದೆ ಕೋವಿಡ್ ನಿಯಂತ್ರಣದಲ್ಲಿ ಜಿಲ್ಲಾಡಳಿತ ರಾಜ್ಯಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸಿತ್ತು. ಈ ಬಾರಿಯೂ ಎಲ್ಲ ಅಧಿಕಾರಿಗಳು ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು. ಸಾರ್ವಜನಿಕರೂ ಜಿಲ್ಲಾಡಳಿತದೊಂದಿಗೆ ಕೈಜೋಡಿಸುವ ಮೂಲಕ ಕೋವಿಡ್ 2ನೇ ಅಲೆ ನಿಯಂತ್ರಣಕ್ಕೆ ಸಹಕರಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ. ನವೀನ್ ಭಟ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು