ಭಾನುವಾರ, ಆಗಸ್ಟ್ 18, 2019
26 °C
ಸಿಪಿಐ(ಎಂ) ಜಿಲ್ಲಾಸಮಿತಿ ಪ್ರತಿಭಟನೆ

ಅಧಿಕಾರದಾಸೆಗೆ ಪ್ರಜಾತಂತ್ರ ವಿರೋಧಿ ಕೃತ್ಯ

Published:
Updated:
Prajavani

ಉಡುಪಿ: ಅಧಿಕಾರದ ಆಸೆಗೆ ಬಿಜೆಪಿ ಪ್ರಜಾತಂತ್ರ ವಿರೋಧಿ ಪ್ರಯತ್ನ ಮಾಡುತ್ತಿದ್ದು, ರಾಜ್ಯಪಾಲರ ಕಚೇರಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಸಿಪಿಐ(ಎಂ) ಜಿಲ್ಲಾಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಆರೋಪಿಸಿದರು.

ರಾಜ್ಯಪಾಲರ ಕಚೇರಿ ಹಾಗೂ ಅಧಿಕಾರ ದುರುಪಯೋಗದ ವಿರುದ್ಧ ಶನಿವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.

ಬಿಜೆಪಿ ಮತ್ತೆ ಆಪರೇಷನ್ ಕಮಲ ಮಾಡುವ ಮೂಲಕ ಸ್ವಾರ್ಥ ರಾಜಕಾರಣ ಮಾಡುತ್ತಿದೆ. ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಿ ಅಧಿಕಾರ ಚುಕ್ಕಾಣಿ ಹಿಡಿಯಲು ಯತ್ನಿಸುತ್ತಿದೆ. ರಾಜ್ಯಪಾಲರನ್ನು ಬಳಸಿಕೊಂಡು ಸರ್ಕಾರವನ್ನು ಬೀಳಿಸುವ ಕೆಲಸಕ್ಕೆ ಕೈಹಾಕಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಾಲಮಿತಿಯಲ್ಲಿ ವಿಶ್ವಾಮತ ಯಾಚನೆ ಮುಕ್ತಾಯಗೊಳಿಸಬೇಕು ಎಂದು ರಾಜ್ಯಪಾಲರು ತಾಕೀತು ಮಾಡುವುದು ಸರಿಯಲ್ಲ. ಪ್ರಜಾಪ್ರಭುತ್ವ ವಿರೋಧಿ ಪಕ್ಷವಾದ ಬಿಜೆಪಿಗೆ ಮತದಾರರು ಪಾಠ ಕಲಿಸಬೇಕು ಎಂದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಹುಮತ ಸಾಬೀತು ಪಡಿಸಲು ಒಂದು ವಾರ ಸಮಯ ಕೋರಿದಾಗ, ರಾಜ್ಯಪಾಲರು 15 ದಿನ ಕಾಲಾವಕಾಶ ನೀಡಿದ್ದರು. ಈಗ ಕೆಲವೇ ಗಂಟೆಗಳ ಸಮಯ ನಿಗಧಿ ಮಾಡಲಾಗುತ್ತಿದೆ ಎಂದರು.

ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಕೂಡಲೇ ರಾಜ್ಯದಲ್ಲಿ ಪ್ರಜಾಪ್ರಭುತ್ವ ವಿರೋಧಿ ಕೆಲಸಗಳನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಕೆ.ಶಂಕರ್, ವಿಶ್ವನಾಥ್ ರೈ, ಶಶಿಧರ ಗೊಲ್ಲ, ಉಮೇಶ್ ಕರ್ಕಡ, ನರಸಿಂಹ, ಕವಿರಾಜ್, ರಾಮ ಕರ್ಕಡ, ನಳಿನಿ, ಲಕ್ಷ್ಮಣ್ ಪ್ರತಿಭಟನೆಯಲ್ಲಿ ಇದ್ದರು.

Post Comments (+)