ಬ್ರಹ್ಮಾವರ: ರೈತರ ಹಿತಾಸಕ್ತಿಗೆ ಪೂರಕವಾಗುವ ಯೋಜನೆಯನ್ನು ರೂಪಿಸಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಹೇಳಿದರು.
ಬ್ರಹ್ಮಾವರದಲ್ಲಿ ಬುಧವಾರ ನಡೆದ ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆಯ 23-24ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಖಾನೆಯ ಗುಜರಿ ಮಾರಾಟದಲ್ಲಿ ಅವ್ಯವಹಾರ ಆಗಿದೆ, ಅಕ್ರಮವಾಗಿ ತಳಕಟ್ಟಿನ ಕಲ್ಲು, ಮಣ್ಣು ಸಹ ಮಾರಾಟ ಮಾಡಲಾಗಿದೆ. ಈ ಕುರಿತು ಪೊಲೀಸ್ ತನಿಖೆ ನಡೆಯಬೇಕು. ಮೂರು ವರ್ಷಗಳ ಮರು ಆಡಿಟ್ ನಡೆಯಬೇಕು, ತಪ್ಪು ಮಾಹಿತಿ ನೀಡಿದವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ, ಕಾರ್ಖಾನೆಗೆ ಆದ ನಷ್ಟ ವಸೂಲಿ ಮಾಡುವಂತೆ ಸದಸ್ಯರು ಆಗ್ರಹಿಸಿದರು.
ಇಲ್ಲಿನ ಸಕ್ಕರೆ ಕಾರ್ಖಾನೆಯ 110 ಎಕರೆ ಸ್ಥಳದಲ್ಲಿ ಕರಾವಳಿಯ ಮೂರು ಜಿಲ್ಲೆಗಳ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಕ್ಕರೆ ಜತೆಗೆ ಕೃಷಿ ಉತ್ಪನ್ನ ಮೌಲ್ಯವರ್ಧನೆ ಉದ್ದಿಮೆಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಯಿತು.
ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ, ಸ್ಥಳ ಸದ್ಭಳಕೆ ಕುರಿತು ವಿಸ್ತೃತ ಮಾಹಿತಿ ಪಡೆದು ಮುನ್ನಡೆಯಲಾಗುವುದು. ಅವ್ಯವಹಾರ ಕುರಿತು ಈಗಾಗಲೇ ಪೊಲೀಸ್ ತನಿಖೆ ನಡೆದು ವರದಿ ಸಲ್ಲಿಕೆಯಾಗಿದೆ. ತಾಂತ್ರಿಕ ಸಮಿತಿ ವರದಿ ನೀಡಲಾಗಿದೆ. ತಪ್ಪುಗಳ ಬಗ್ಗೆ ಪುನರ್ ಪರಿಶೀಲನೆ ನಡೆಸಿ ಸ್ಪಷ್ಟೀಕರಣ ಪಡೆಯುವುದಾಗಿ ತಿಳಿಸಿದರು. ಮರು ಆಡಿಟ್ ಸೇರಿದಂತೆ ರೈತರ ಬೇಡಿಕೆ, ಸಭೆಯ ಚರ್ಚೆಯನ್ನು ದಾಖಲಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದರು.