ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗಿ, ಮಲೇರಿಯಾ ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ ಕೂರ್ಮಾರಾವ್

ಶಾಲಾ ಕಾಲೇಜು ಬಳಿ ತಂಬಾಕು ಮಾರಾಟ ಮಾಡಿದರೆ ಕಾನೂನು ಕ್ರಮ ಜರುಗಿಸಿ
Last Updated 13 ಏಪ್ರಿಲ್ 2022, 15:53 IST
ಅಕ್ಷರ ಗಾತ್ರ

ಉಡುಪಿ: ರೋಗ ಬಂದು ಚಿಕಿತ್ಸೆ ಪಡೆಯುವ ಬದಲು ರೋಗ ಬಾರದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಡೆಂಗಿ ಮತ್ತು ಮಲೇರಿಯಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸಾಮಾನ್ಯವಾಗಿ ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಮಳೆ ನೀರು ನಿಂತು ಸೊಳ್ಳೆಗಳ ಸಂತಾನೋತ್ಪತ್ತಿಯೊಂದಿಗೆ ಸೊಳ್ಳೆಗಳ ಉತ್ಪತ್ತಿಯಾಗಿ ಡೆಂಗಿ, ಮಲೇರಿಯಾ ಸೇರಿದಂತೆ ಮತ್ತಿತರ ರೋಗಗಳು ಹರಡುತ್ತದೆ.

ಸೊಳ್ಳೆಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಸ್ಥಳೀಯ ಸಂಸ್ಥೆಗಳು ಹಾಗೂ ಆರೋಗ್ಯ ಇಲಾಖೆಗಳು ಕೈಗೊಳ್ಳಬೇಕು. ಇದರಿಂದ ಸಾಂಕ್ರಮಿಕ ರೋಗಗಳನ್ನು ನಿಯಂತ್ರಿಸಬಹುದು. ರೋಗಗಳ ತಡೆ ಬಗ್ಗೆ ಸಾರ್ವಜನಿಕರಲ್ಲಿಯೂ ಅರಿವು ಮೂಡಿಸುವುದು ಅಗತ್ಯ ಎಂದರು.

ಬಹು ಮಹಡಿ ಕಟ್ಟಡಗಳ ಮೇಲ್ಛಾವಣಿಗಳಲ್ಲಿ ತೆರೆದ ನೀರಿನ ಟ್ಯಾಂಕ್‌ಗಳನ್ನು ಇಡದಂತೆ ನಗರಸಭೆ, ಪುರಸಭೆ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಪರಿವೀಕ್ಷಣೆ ನಡೆಸಬೇಕು. ತೆರೆದ ಟ್ಯಾಂಕ್‌ಗಳು ಕಂಡುಬಂದರೆ ಮುಚ್ಚುವಂತೆ ಮಾಲೀಕರಿಗೆ ಸೂಚನೆ ನೀಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಮಲೇರಿಯಾ, ಡೆಂಗಿ ರೋಗಗಳು ಹೆಚ್ಚಾಗಿ ಕಂಡುಬರುವ ಪ್ರದೇಶಗಳನ್ನು ಗುರುತಿಸಬೇಕು. ಮನೆ ಮನೆಗೆ ಭೇಟಿ ನೀಡಿ ಆರೋಗ್ಯದ ಕುರಿತು ಶಿಕ್ಷಣ ನೀಡಬೇಕು. ಸೊಳ್ಳೆಗಳ ಉತ್ಪತ್ತಿಯಾಗದಂತೆ ಕ್ರಮ ವಹಿಸಬೇಕು ಎಂದರು.

ಕಟ್ಟಡ ನಿರ್ಮಾಣ ಹಾಗೂ ಮೀನುಗಾರಿಕೆ ಹಾಗೂ ಇತರೆ ಕ್ಷೇತ್ರಗಳಲ್ಲಿ ದುಡಿಯಲು ಜಿಲ್ಲೆಗೆ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಬರುತ್ತಾರೆ. ಪ್ರವಾಸಿ ತಾಣಗಳನ್ನು ವೀಕ್ಷಿಸಲು ಸಹ ಹೆಚ್ಚು ಪ್ರವಾಸಿಗರು ಹೊರಗಿನಿಂದ ಬರುತ್ತಾರೆ. ಪರಿಣಾಮ ರೋಗಗಳು ಹರಡುವ ಸಾಧ್ಯತೆ ಇದ್ದು, ಇದರಿಂದ ಎಚ್ಚರ ವಹಿಸುವುದು ಅಗತ್ಯ ಎಂದರು.

ಸಾರ್ವಜನಿಕರಲ್ಲಿ ಡೆಂಗಿ, ಮಲೇರಿಯಾ, ಕೀಟಜನ್ಯ ರೋಗಗಳ ಸಾಮಾನ್ಯ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಆರೋಗ್ಯ ತಪಾಸಣೆ ನಡೆಸಿ, ರೋಗಗಳನ್ನು ಗುರುತಿಸಿ, ಚಿಕಿತ್ಸೆ ನೀಡುವ ಮೂಲಕ ರೋಗ ಹರಡುವುದನ್ನು ತಡೆಯಬೇಕು ಎಂದು ಸಲಹೆ ನೀಡಿದರು.

ಕಳೆದ ವರ್ಷ ಮಲೇರಿಯಾ, ಡೆಂಗಿ ಪ್ರಕರಣಗಳು ನಗರ ಪ್ರದೇಶ ಹಾಗೂ ಕೊಲ್ಲೂರು ವ್ಯಾಪ್ತಿಯಲ್ಲಿ ಹೆಚ್ಚು ಪತ್ತೆಯಾಗಿದ್ದವು. ರೋಗ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ವಹಿಸಿ, ಪ್ರಕರಣಗಳು ಹೆಚ್ಚಾಗದಂತೆ ಜಾಗ್ರತೆ ವಹಿಸಿ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಅಧಿಕಾರಿಗಳಿಗೆ ಸೂಚಿಸಿದರು.

ತಂಬಾಕು ಬಳಸದಂತೆ ಜಾಗೃತಿ ಮೂಡಿಸಿ:‌

ತಂಬಾಕು ಉತ್ಪನ್ನಗಳ ಸೇವನೆಯಿಂದ ಮಾರಣಾಂತಿಕ ಕಾಯಿಲೆಗಳಾದ ಕ್ಯಾನ್ಸರ್, ಹೃದ್ರೋಗಳು ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ತಂಬಾಕು ಉತ್ಪನ್ನಗಳಿಂದ ದೂರ ಉಳಿಯುವಂತೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ತ್ರೈಮಾಸಿಕ ಸಭೆಯಲ್ಲಿ ಸೂಚಿಸಿದರು.

ಯುವಜನತೆಯಲ್ಲಿ ತಂಬಾಕು ಉತ್ಪನ್ನಗಳ ಸೇವನೆ ಹಚ್ಚುತ್ತಿದೆ. ಮಣಿಪಾಲ ಭಾಗದಲ್ಲಿ ತಂಬಾಕು ಪದಾರ್ಥಗಳ ಬಳಕೆ ಹಾಗೂ ಮಾರಾಟ ಹೆಚ್ಚಿದೆ. ಹೆಚ್ಚು ದಾಳಿಗಳನ್ನು ನಡೆಸುವುದರೊಂದಿಗೆ ಕೋಟ್ಪಾ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು ಎಂದು ಸೂಚನೆ ನೀಡಿದರು.

ತಂಬಾಕು ನಿಯಂತ್ರಣಕ್ಕೆ ವಿಶೇಷ ಅಭಿಯಾನ ನಡೆಯಬೇಕು. ಶಾಲಾ-ಕಾಲೇಜುಗಳಲ್ಲಿ ತಂಬಾಕು ಸೇವನೆ ದುಷ್ಪರಿಣಾಮಗಳ ಅರಿವು ಮೂಡಿಸಬೇಕು. ಶಾಲಾ-ಕಾಲೇಜುಗಳು ಹಾಗೂ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಬೇಕು ಎಂದು ನಿರ್ದೇಶನ ನೀಡಿದರು.

ಉಡುಪಿ ತಾಲ್ಲೂಕಿನ ಕೋಡಿಬೆಂಗ್ರೆ, ಕುಂದಾಪುರದ ಬೀಜೂರು ಗ್ರಾಮಗಳು ತಂಬಾಕು ಮುಕ್ತ ಗ್ರಾಮಗಳಾಗಿ ತೋರಿಸಲು ಗ್ರಾಮ ಪಂಚಾಯಿತಿ ಮೂಲಕ ಸರ್ವೇ ಕಾರ್ಯ ಮಾಡಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT