ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ನಲ್ಲಿ ಕಾಣದ ಅಂತರ; ನಿಂತು ಸಂಚಾರ

5 ಬಸ್‌ಗಳ ಚಾಲಕರು ನಿರ್ವಾಹಕರ ವಿರುದ್ಧ ಪ್ರಕರಣ, ಮಾಸ್ಕ್ ಧರಿಸದವರಿಗೆ ದಂಡ: ಜಿಲ್ಲಾಧಿಕಾರಿ ಜಿ.ಜಗದೀಶ್‌ ಕಾರ್ಯಾಚರಣೆ
Last Updated 19 ಏಪ್ರಿಲ್ 2021, 14:24 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್‌ 2ನೇ ಅಲೆ ವೇಗವಾಗಿ ಹಬ್ಬುತ್ತಿದ್ದರೂ ಸಾರ್ವಜನಿಕರು ಸುರಕ್ಷತಾ ಕ್ರಮಗಳ ಪಾಲನೆಗೆ ಅಸಡ್ಡೆ ತೋರುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಜಿ.ಜಗದೀಶ್‌ ಮತ್ತೊಮ್ಮೆ ರಸ್ತೆಗಿಳಿದು ದಂಡಾಸ್ತ್ರ ಪ್ರಯೋಗಿಸಿದರು.

ಉಡುಪಿಯ ಸಂತೆಕಟ್ಟೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಸಿದ ಜಿಲ್ಲಾಧಿಕಾರಿ ಮಾಸ್ಕ್ ಧರಿಸದವರಿಗೆ ದಂಡ ಹಾಕಿದರು. ದಾಳಿಯ ವೇಳೆ ಖಾಸಗಿ ಬಸ್‌ನ ನಿರ್ವಾಹಕರೊಬ್ಬರು ಮಾಸ್ಕ್ ಹಾಕದಿರುವುದು ಹಾಗೂ ಬಸ್‌ನ ಆಸನ ಸಾಮರ್ಥ್ಯ ಮೀರಿ ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗುತ್ತಿರುವುದನ್ನು ಕಂಡು ಸಿಟ್ಟಿಗೆದ್ದ ಜಿಲ್ಲಾಧಿಕಾರಿಗಳು, ಚಾಲಕ ಹಾಗೂ ನಿರ್ವಾಹಕನನ್ನು ಕೆಳಗಿಳಿಸಿ ತೀವ್ರ ತರಾಟೆಗೆ ತೆಗೆದುಕೊಂಡರು.

‘ಕೋವಿಡ್‌ನಿಂದ ಜನ ಸಾಯುತ್ತಿದ್ದರೂ ಬಸ್‌ನಲ್ಲಿ ಕನಿಷ್ಠ ಮಾಸ್ಕ್ ಧರಿಸಬೇಕು ಎಂಬ ಕನಿಷ್ಠ ಪ್ರಜ್ಞೆ ಇಲ್ಲದಿರುವುದು ನಾಚಿಕೆಗೇಡು. ಬಸ್‌ನಲ್ಲಿ ಆಸನಗಳ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವಂತಿಲ್ಲ ಎಂಬ ನಿಯಮವಿದ್ದರೂ ಪಾಲನೆ ಮಾಡದಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಬಸ್‌ನ ಚಾಲಕ ಹಾಗೂ ನಿರ್ವಾಹಕನ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದರು.

ಬಸ್‌ನಲ್ಲಿ ನಿಂತು ಪ್ರಯಾಣಿಸುತ್ತಿದ್ದವರನ್ನು ಕೆಳಗಿಳಿಸಿ ಬೇರೆ ಬಸ್‌ಗಳಲ್ಲಿ ತೆರಳುವಂತೆ ತಿಳಿಸಿ, ಟಿಕೆಟ್ ಹಣ ಮರುಪಾವತಿ ಮಾಡುವಂತೆ ನಿರ್ವಾಹನಿಗೆ ಆದೇಶಿಸಿದರು. ಬಳಿಕ ಬ್ಯಾಂಕ್‌, ಮೆಡಿಕಲ್ ಶಾಪ್, ಕ್ಲಿನಿಕ್, ಸಹಕಾರಿ ಸಂಘ ಹಾಗೂ ಎಟಿಎಂನಲ್ಲಿ ಮಾಸ್ಕ್ ಧರಿಸದವರಿಗೆ ದಂಡ ಹಾಕಿದರು.

ದಾಳಿಯ ನಂತರ ಮಾತನಾಡಿದ ಜಿಲ್ಲಾಧಿಕಾರಿ, ಬಸ್‌ಗಳಲ್ಲಿ ನಿಗಧಿಗಿಂತ ಹೆಚ್ಚು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವಂತಿಲ್ಲ ಎಂಬ ನಿಯಮವಿದ್ದರೂ ಪಾಲನೆಯಾಗುತ್ತಿಲ್ಲ. ನಿಯಮ ಪಾಲಿಸದ 5 ಬಸ್‌ಗಳ ಚಾಲಕರು ಹಾಗೂ ನಿರ್ವಾಹಕರ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ. ಮತ್ತೆ ನಿಯಮ ಉಲ್ಲಂಘಿಸಿದರೆ ಬಸ್‌ಗಳ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಸ್‌ಗಳಲ್ಲಿ ಅಂತರ ಪಾಲಿಸದೆ ಪ್ರಯಾಣಿಸಿದರೆ ಸುಲಭವಾಗಿ ಸೋಂಕು ತಗುಲುವ ಅಪಾಯಗಳಿರುತ್ತವೆ. ಸಾರ್ವಜನಿಕರು ಬಸ್‌ಗಳಲ್ಲಿ ನಿಂತು ಪ್ರಯಾಣ ಮಾಡಬಾರದು. ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಕೋವಿಡ್ ಎರಡನೇ ಅಲೆ ತಡೆಗೆ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ದಾಳಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ.ನವೀನ್‌ ಭಟ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ನಗರಸಭೆ ಪೌರಾಯುಕ್ತ ಉದಯ್‌ಶೆಟ್ಟಿ ಹಾಗೂ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT