ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಪಿಪಿ ಬೇಡ; ಸರ್ಕಾರಿ ಮೆಡಿಕಲ್‌ ಕಾಲೇಜು ಬೇಕು: ಡಾ.ಪಿ.ವಿ.ಭಂಡಾರಿ

ಕರಾವಳಿಯ ಯೂತ್‌ಕ್ಲಬ್‌, ಕೆಎಆರ್‌ಎಸ್‌ನಿಂದ ಮಲ್ಪೆಯಿಂದ ಮಣಿಪಾಲದವರೆಗೆ ಪಾದಯಾತ್ರೆ
Last Updated 1 ಏಪ್ರಿಲ್ 2022, 14:28 IST
ಅಕ್ಷರ ಗಾತ್ರ

ಉಡುಪಿ: ಉಡುಪಿ ಜಿಲ್ಲೆಯಾಗಿ ರಚನೆಗೊಂಡು 22 ವರ್ಷಗಳು ಕಳೆದರೂ ಸರ್ಕಾರಿ ಮೆಡಿಕಲ್‌ ಕಾಲೇಜು ಸ್ಥಾಪನೆಯಾಗದಿರುವುದು ನೋವಿನ ಸಂಗತಿ ಎಂದು ಸಾಮಾಜಿಕ ಹೋರಾಟಗಾರ ಡಾ.ಪಿ.ವಿ.ಭಂಡಾರಿ ಹೇಳಿದರು.

ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಶುಕ್ರವಾರ ಕರಾವಳಿ ಯೂತ್ ಕ್ಲಬ್‌, ಕೆಆರ್‌ಎಸ್‌ ಪಕ್ಷದಿಂದ ಮಲ್ಪೆಯಿಂದ ಮಣಿಪಾಲದವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಮಾತನಾಡಿದರು.

ಡಾ.ವಿ.ಎಸ್‌.ಆಚಾರ್ಯ ಅವರು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದಾಗ ರಾಜ್ಯಕ್ಕೆ 12 ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಿದ್ದರು. ಆದರೆ, ವಿ.ಎಸ್‌.ಆಚಾರ್ಯರ ತವರಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲದಿರುವುದು ಬೇಸರದ ಸಂಗತಿ ಎಂದರು.

ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಸರ್ಕಾರಿ ಕೋಟಾದಡಿ ಮೆಡಿಕಲ್‌ ಸೀಟು ಸಿಕ್ಕರೂ ವಿದ್ಯಾರ್ಥಿಗಳು ₹ 2ರಿಂದ ₹ 3 ಲಕ್ಷ ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ, ಸರ್ಕಾರಿ ಮೆಡಿಕಲ್‌ ಕಾಲೇಜಿನಲ್ಲಿ ₹ 30 ರಿಂದ ₹ 50 ಸಾವಿರ ಶುಲ್ಕವಿದೆ. ಮೆರಿಟ್‌ ಬಂದರೂ ಬಡ ವಿದ್ಯಾರ್ಥಿಗಳು ಯಾವ ಕಾರಣಕ್ಕೆ ಲಕ್ಷಾಂತರ ರೂಪಾಯಿ ಶುಲ್ಕ ಭರಿಸಬೇಕು ಎಂದು ಪ್ರಶ್ನಿಸಿದರು.

ಉಡುಪಿ ಜಿಲ್ಲೆಗೆ ಪಿಪಿಪಿ ಮಾದರಿಯ ಮೆಡಿಕಲ್ ಕಾಲೇಜು ಅಗತ್ಯವಿಲ್ಲ. ಈಗಾಗಲೇ ಪಿಪಿಪಿ ಮಾದರಿಯ ಕೂಸಮ್ಮ ಶಂಭುಶೆಟ್ಟಿ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ವೈಫಲ್ಯ ಕಣ್ಮುಂದಿದೆ. ಕೊಡುವುದಾದರೆ ಪೂರ್ಣ ಪ್ರಮಾಣದ ಸರ್ಕಾರಿ ಮೆಡಿಕಲ್‌ ಕಾಲೇಜು ಕೊಡಬೇಕು ಎಂದರು.

ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಯಾದರೆ ಸೇವೆಯ ಬದಲಾಗಿ ಲಾಭಕ್ಕೆ ಪ್ರಾಧಾನ್ಯತೆ ಸಿಗಲಿದೆ. ಬಡವರ ಆರೋಗ್ಯದ ಹಿತದೃಷ್ಟಿಯಿಂದ, ಬಡ ಮಕ್ಕಳ ಶಿಕ್ಷಣದ ದೃಷ್ಟಿಯಿಂದ ಸರ್ಕಾರಿ ಮೆಡಿಕಲ್‌ ಕಾಲೇಜು ಸ್ಥಾಪನೆಯಾಗಬೇಕು ಎಂದು ಒತ್ತಾಯಿಸಿದರು.

ಕೆಆರ್‌ಎಸ್‌ ಪಕ್ಷದ ಸಂಸ್ಥಾಪಕ ರವಿ ಕೃಷ್ಣಾರೆಡ್ಡಿ ಮಾತನಾಡಿ, ಖಾಸಗಿ ಮೆಡಿಕಲ್‌ ಕಾಲೇಜು ಮಾಫಿಯಾ ದೊಡ್ಡದಾಗಿದ್ದು ಬಡವರಿಗೆ ಉಚಿತ ಹಾಗೂ ಗುಣಮಟ್ಟದ ಚಿಕಿತ್ಸೆ ಸಿಗಬೇಕಾದರೆ, ಬಡ ವಿದ್ಯಾರ್ಥಿಗಳ ಕೈಗೆ ವೈದ್ಯಕೀಯ ಶಿಕ್ಷಣ ಎಟುಕಬೇಕಾದರೆ ಪ್ರತಿ ಜಿಲ್ಲೆಗೂ ಸರ್ಕಾರಿ ಮೆಡಿಕಲ್‌ ಕಾಲೇಜು ಅತ್ಯವಶ್ಯ ಎಂದು ಅಭಿಪ್ರಾಯಪಟ್ಟರು.

ಸರ್ಕಾರಿ ಮೆಡಿಕಲ್‌ ಕಾಲೇಜು ಸ್ಥಾಪನೆಯಾದರೆ ಎಲ್ಲ ವಿಭಾಗಗಳಿಗೂ ತಜ್ಞ ವೈದ್ಯರನ್ನು ನೇಮಕಾತಿ ಮಾಡಿಕೊಳ್ಳಬೇಕಾಗುತ್ತದೆ. ಇದರಿಂದ ಜಿಲ್ಲಾ ಆಸ್ಪತ್ರೆಗೆ ತಜ್ಞ ವೈದ್ಯರ ಸೇವೆ ಲಭ್ಯವಾಗಲಿದ್ದು, ಬಡವರಿಗೆ ಗುಣಮಟ್ಟದ ಉಚಿತ ಚಿಕಿತ್ಸೆ ಸಿಗಲಿದೆ.

ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್‌ ಕಾಲೇಜು, ಪ್ರತಿ ತಾಲ್ಲೂಕಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಹೋಬಳಿ ಮಟ್ಟದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಯಾಗಬೇಕು ಎಂದು ಆಗ್ರಹಿಸಿದರು.

ಮಲ್ಪೆ ಬೀಚ್‌ನಿಂದ ಆರಂಭವಾದ ಪಾದಯಾತ್ರೆ ಆದಿ ಉಡುಪಿ, ಕರಾವಳಿ ಜಂಕ್ಷನ್‌ ಮಾರ್ಗವಾಗಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾಪನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT