ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂತ ವೈದ್ಯ ಡಾ.ಕೃಷ್ಣಮೂರ್ತಿ ಸಾವು ಪ್ರಕರಣ: ತನಿಖೆ ಚುರುಕು

ಡಾ.ಕೃಷ್ಣಮೂರ್ತಿ ಮೃತದೇಹ ಪತ್ತೆಯಾದ ಸ್ಥಳಕ್ಕೆ ಎಸ್ಪಿ ಭೇಟಿ
Last Updated 15 ನವೆಂಬರ್ 2022, 5:29 IST
ಅಕ್ಷರ ಗಾತ್ರ

ಕುಂದಾಪುರ: ಕಾಸರಗೋಡು ಜಿಲ್ಲೆಯ ಬದಿಯಡ್ಕದ ದಂತ ವೈದ್ಯ ಡಾ.ಕೃಷ್ಣಮೂರ್ತಿ ಸರ್ಪಂಗಳ ಅವರ ಮೃತದೇಹ ಪತ್ತೆಯಾದ ಹಟ್ಟಿಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡು ಅಜ್ಜಿಮನೆ ಸಮೀಪದ ಕೊಂಕಣ ರೈಲ್ವೆ ಹಳಿ ಪ್ರದೇಶಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚಿಂದ್ರ ಸೋಮವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಪ್ರಕರಣವನ್ನು ಗಂಭೀರವಾಗಿ ಪರಿಗ ಣಿಸಿರುವ ಉಡುಪಿ ಜಿಲ್ಲಾ ಪೊಲೀಸರು ವಿಸ್ಕೃತ ತನಿಖೆಗೆ ಮುಂದಾಗಿದ್ದಾರೆ. ಪೊಲೀಸ್ ತಂಡ ಬೇರೆ ಆಯಾಮಗಳಲ್ಲಿ ತನಿಖೆ ಮುಂದುವರಿಸಿದೆ. ಎಸ್ಪಿ ಜತೆ ಡಿವೈಎಸ್‌ಪಿ ಶ್ರೀಕಾಂತ ಕೆ ಹಾಗೂ ಸರ್ಕಲ್‌ ಇನ್‌ಸ್ಪೆಕ್ಟರ್ ಗೋಪಿಕೃಷ್ಣ, ಶಂಕರನಾರಾಯಣ ಪೊಲೀಸ್ ಠಾಣಾಧಿಕಾರಿ ಶ್ರೀಧರ ನಾಯ್ಕ್, ಕಂಡ್ಲೂರು ಠಾಣಾಧಿಕಾರಿ ಪವನ್‌, ಕುಂದಾಪುರ ಠಾಣೆಯ ಅಪರಾಧ ವಿಭಾಗದ ಎಸ್‌.ಐ ಪ್ರಸಾದ್ ಇದ್ದರು.

ಹಾಕೆ ಅಕ್ಷಯ್ ಮಚ್ಚಿಂದ್ರ ಮಾಧ್ಯಮದವರ ಜತೆ ಮಾತನಾಡಿ, ‘ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಲಾಗಿದೆ. ಕುಂದಾಪುರ ಡಿವೈಎಸ್‌ಪಿ ತನಿಖೆಯ ಸಂಪೂರ್ಣ ಉಸ್ತುವಾರಿ ವಹಿಸಲಿದ್ದಾರೆ. ತನಿಖಾ ತಂಡ ಈಗಾಗಾಲೇ ಕಾಸರಗೋಡು ಹಾಗೂ ಬದಿಯಡ್ಕಕ್ಕೆ ತೆರಳಿ ಮಾಹಿತಿ ಕಲೆ ಹಾಕಿದೆ. ರೈಲ್ವೆಗೆ ಸಂಬಂಧಪಟ್ಟ ವಿವರ ಹಾಗೂ ಸಿಸಿಟಿವಿ ದೃಶ್ಯಾವಳಿ ಕಲೆಹಾಕಲಾಗುತ್ತಿದೆ. ವಿಧಿ ವಿಜ್ಞಾನ ತಜ್ಞರ ಬಳಿಯೂ ಅಭಿಪ್ರಾಯ ಪಡೆದುಕೊಳ್ಳಲಾಗಿದೆ. ಕಾಸರಗೋಡು ಪೊಲೀಸರ ಜೊತೆಯೂ ಸಂಪರ್ಕದಲ್ಲಿದ್ದೇವೆ’ ಎಂದರು.

ಘಟನೆ ಹಿನ್ನೆಲೆ: ಡಾ.ಕೃಷ್ಣಮೂರ್ತಿ ಸರ್ಪಂಗಳ ಅವರು ನ.8ರಂದು ಆಸ್ಪತ್ರೆಯಲ್ಲಿ ನಡೆದಿದ್ದ ಪ್ರಕರಣ ವೊಂದರ ಬಳಿಕ ಬದಿಯಡ್ಕದಿಂದ ನಾಪತ್ತೆಯಾಗಿದ್ದರು. ಅವರ ಬೈಕ್ ಬದಿಯಡ್ಕ ಪೇಟೆಯಲ್ಲಿ ಪತ್ತೆಯಾಗಿತ್ತು. ಈ ಕುರಿತು ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ನ.9ರಂದು ಕಂಡ್ಲೂರಿನ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡು ಅಜ್ಜಿಮನೆ ಸಮೀಪದ ಕೊಂಕಣ ರೈಲ್ವೆ ಹಳಿಯ 50 ಮೀಟರ್ ಅಂತರದಲ್ಲಿ ಎರಡು ಭಾಗವಾದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿತ್ತು.

ಪ್ರತಿಭಟನೆ: ವೈದ್ಯರ ಸಾವಿನ ಕುರಿತಂತೆ ಬದಿಯಡ್ಕದಲ್ಲಿ ಪ್ರತಿಭಟನೆ, ಹರತಾಳಗಳೆಲ್ಲ ನಡೆದಿದ್ದವು. ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಕರ್ನಾಟಕ ಸರ್ಕಾರದ ಸಚಿವರಿಗೆ ಮನವಿ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT