ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಶಿವನಾಮ ಸ್ಮರಣೆಯಲ್ಲಿ ಮಿಂದ ಭಕ್ತರು

ಸಂಭ್ರಮದ ಮಹಾಶಿವರಾತ್ರಿ; ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸೊಬಗು
Last Updated 19 ಫೆಬ್ರುವರಿ 2023, 4:11 IST
ಅಕ್ಷರ ಗಾತ್ರ

ಉಡುಪಿ: ಮಹಾಶಿವರಾತ್ರಿ ಪ್ರಯುಕ್ತ ಜಿಲ್ಲೆಯಾದ್ಯಂತ ಶಿವನ ದೇವಾಲಯಗಳಲ್ಲಿ ಮಂಜುನಾಥನ ಸ್ಮರಣೆ ನಡೆಯಿತು. ಮಡಿಯುಟ್ಟು ದೇವಸ್ಥಾನಗಳಿಗೆ ತೆರಳಿದ ಭಕ್ತರು ದೇವರ ದರ್ಶನ ಪಡೆದರು.

ಉಡುಪಿಯ ಇತಿಹಾಸ ಪ್ರಸಿದ್ಧ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ದೇವರಿಗೆ ಪಂಚಾಮೃತ ಅಭಿಷೇಕ, ಎಳನೀರು ಅಭಿಷೇಕ ನೆರವೇರಿತು. ಬಳಿಕ ಶತರುದ್ರ ಪಾರಾಯಣ, ನವಕ ಪ್ರಧಾನ ಹೋಮ, ಕಲಶಾಭಿಷೇಕ, ಅಲಂಕಾರ ಪೂಜೆ, ಸಹಸ್ರ ನಾಮಾರ್ಚನೆ, ಬಿಲ್ವಾರ್ಚನೆ ಬಳಿಕ ಅರ್ಚಕ ವಾಸುದೇವ ಉಪಾಧ್ಯ ಮಹಾಪೂಜೆ ಸಲ್ಲಿಸಿದರು.

ಸಂಜೆ ನಂದಿಕೋಣ, ರಕ್ತೇಶ್ವರಿ ಬೊಬ್ಬರ್ಯ ದೈವಗಳಿಗೆ ವಾರ್ಷಿಕ ಪೂಜೆ, ಉತ್ಸವ, ಬಲಿ ಬಳಿಕ ಅದ್ಧೂರಿ ರಥೋತ್ಸವ ಜರುಗಿತು. ರಾತ್ರಿ ಮಹಾರಂಗ ಪೂಜೆ, ಭೂತ ಬಲಿ, ಕ್ಷೇತ್ರಪಾಲನಿಗೆ ಪೂಜೆ ನೆರವೇರಿತು. ಫೆ.19ರಂದು ತುಲಾಭಾರ ಸೇವೆ, ಅಲಂಕಾರ ಪೂಜೆ, ಮಹಾಪೂಜೆ, ಮಹಾ ಮಂತ್ರಾಕ್ಷತೆ ಬಳಿಕ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಶನಿವಾರ ಕವಿರತ್ನ ಕಾಳಿದಾಸ ಯಕ್ಷಗಾನ ಬಯಲಾಟ ಪ್ರಸಂಗ ನಡೆಯಿತು. ಭಾನುವಾರ ಸಂಜೆ 6ಕ್ಕೆ ಒಡಿಸ್ಸಿ ನೃತ್ಯ, ಮೋಹಿನಿ ಭಸ್ಮಾಸುರ ನೃತ್ಯ ಪ್ರದರ್ಶನ, ಭರತನಾಟ್ಯ ನಡೆಯಲಿದೆ.

ಕೃಷ್ಣಮಠದ ರಥಬೀದಿಯಲ್ಲಿರುವ ಐತಿಹಾಸಿಕ ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ದೇವಸ್ಥಾನಗಳಲ್ಲಿ ಭಕ್ತರ ಸಂದಣಿ ಹೆಚ್ಚಾಗಿತ್ತು. ಭಕ್ತರು ಅನಂತೇಶ್ವರನಿಗೆ ತೈಲ ಸಮರ್ಪಿಸಿ ದರ್ಶನ ಪಡೆದರು. ಚಂದ್ರಮೌಳೀಶ್ವರನಿಗೆ ಎಳನೀರು ಸಮರ್ಪಿಸಲಾಯಿತು.

ಶಿವರಾತ್ರಿ ಅಂಗವಾಗಿ ಫೆ.24ರವರೆಗೂ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನ ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ರಾತ್ರಿ ಬಲಿ, ಕಟ್ಟೆಪೂಜೆ ನಡೆಯಲಿದ್ದು ಫೆ.22ರಂದು ಸಂಜೆ 5.30ಕ್ಕೆ ಮಹಾ ರಥೋತ್ಸವ ನಡೆಯಲಿದೆ.

ಪ್ರತಿನಿತ್ಯ ಸಂಜೆ ಭಜನೆ, ಧಾರ್ಮಿಕ ಪ್ರವಚನಗಳು ನಡೆಯಲಿವೆ. ಭಾನುವಾರ ವಿದ್ವಾನ್ ಸಂದೇಶಾಚಾರ್ ಝಳಕೀಕರ್ ಅವರಿಂದ ಲಕ್ಷ್ಮೀ ಶೋಭಾನೆ, ದಾಮೋದರ ಶೇರಿಗಾರ್ ಬಳಗದಿಂದ ಸ್ಯಾಕ್ಸೊಫೋನ್ ವಾದನ ನಡೆಯಿತು. 19ರಂದು ಸಂಜೆ 4.30ಕ್ಕೆ ವೀಣಾವಾದನ, ರಾತ್ರಿ 7ಕ್ಕೆ ದಕ್ಷಯಜ್ಞ ಯಕ್ಷಗಾನ ಪ್ರಸಂಗ, 20ರಂದು ಭಕ್ತಿ ಸಂಗೀತ, ಶಿವ ವರ್ಣಮ್ ಯುಗಳ ನೃತ್ಯ, 21ರಂದು ಸಂಜೆ 4.30ಕ್ಕೆ ಹರಿಕಥೆ ಗಿರಿಜಾ ಕಲ್ಯಾಣ, ರಾತ್ರಿ 7ಕ್ಕೆ ಶ್ರೀಕೃಷ್ಣ ಲೀಲೆ ಯಕ್ಷಗಾನ ಪ್ರಸಂಗ, 22ರಂದು ರಾತ್ರಿ 7ಕ್ಕೆ ಯಕ್ಷಗಾನ
ಪ್ರದರ್ಶನ ಇದೆ.

ಮಹಾತೋಭಾರ ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಅಷ್ಟೋತ್ತರ ಶತನಾಮಾವಳಿ ಪಠಣ, ಬಿಲ್ವಪತ್ರೆ, ಪುಷ್ಪಾರ್ಚನೆ, ಶತರುದ್ರ ಪಾರಾಯಣ, ಶತರುದ್ರಾಭಿಷೇಕ, ರಂಗಪೂಜೆ ನಡೆಯಿತು.

ಬ್ರಹ್ಮಾವರದ ಮಹಾಲಿಂಗೇಶ್ವರ ದೇವಸ್ಥಾನ, ಆರೂರು ಮಹಾತೋಭಾರ ವಿಷ್ಣುಮೂರ್ತಿ ದೇವಸ್ಥಾನ, ಬಾರ್ಕೂರು ಕೋಟೆಕೇರಿ ಮಹತೋಭಾರ ಪಂಚಲಿಂಗೇಶ್ವರ ದೇವಸ್ಥಾನ, ಮೂಡುಕೇರಿ ಸೋಮೇಶ್ವರಿ ದೇವಸ್ಥಾನ, ಕೋಟದ ಪುರಾಣ ಪ್ರಸಿದ್ಧ ಮಹತೋಭಾರ ಹಿರೇ ಮಹಾಲಿಂಗೇಶ್ಚರ ದೇವಸ್ಥಾನ, ಮಣೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು.

ಕೋಟ ಮೂಡು ಹಿಳಿಯಾರು ಅಲ್ಸೆಕೆರೆ ಮಹಾಲಿಂಗೇಶ್ವರ ದೇವಸ್ಥಾನ, ವಡ್ಡರ್ಸೆ ಮಹಾಲಿಂಗೇಶ್ವರ ದೇವಸ್ಥಾನ, ಕಾರ್ಕಳ ತಾಲ್ಲೂಕಿನ ಪಳ್ಳಿ ಕ್ಷೇತ್ರ ಅಡಪಾಡಿ ಉಮಾಮಹೇಶ್ವರ, ದುರ್ಗಾಪರಮೇಶ್ವರೀ ದೇವಸ್ಥಾನ, ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನ, ಕುಂಭಾಸಿಯ ಹರಿ-ಹರ ದೇವಸ್ಥಾನ ಹಾಗೂ ಶಂಕರನಾರಾಯಣದ ಕ್ರೋಢ ಶಂಕರನಾರಾಯಣ ದೇವಸ್ಥಾನಗಳಲ್ಲಿ ಶಿವರಾತ್ರಿ ಸಂಭ್ರಮ ಕಳೆಗಟ್ಟಿತ್ತು.

ಕುಂದಾಪುರದ ಕುಂದೇಶ್ವರ, ಮಹಿಲಾರೇಶ್ವರ, ಬಸ್ರೂರಿನ ಮಹತೋಭಾರ ಮಹಾಲಿಂಗೇಶ್ವರ, ಬೈಂದೂರಿನ ಸೇನೇಶ್ವರ, ಕಿರಿಮಂಜೇಶ್ವರ ಅಗಸ್ತ್ಯೇಶ್ವರ, ಕೊಟಪಾಡಿ ಗುಹೇಶ್ವರ ದೇವಸ್ಥಾನ, ಹಟ್ಟಿಯಂಗಡಿ ಏಕನಾಥೇಶ್ವರ, ಆನಗಳ್ಳಿ ದತ್ತಾಶ್ರಮದ ನರ್ಮದೇಶ್ವರ ದೇವಸ್ಥಾನಗಳಲ್ಲಿ ಶಿವನ ಆರಾಧನೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT