ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಹದಗೆಟ್ಟ ರಸ್ತೆಗಳು– ಹೊಂಡ ಗುಂಡಿಗಳಲ್ಲಿ ಉರುಳು ಸೇವೆ ಮಾಡಿ ಪ್ರತಿಭಟನೆ

ಆಡಳಿತ ವ್ಯವಸ್ಥೆಯ ವಿರುದ್ಧ ನಿತ್ಯಾನಂದ ವಳಕಾಡು ವಿಭಿನ್ನ ಪ್ರತಿಭಟನೆ
Last Updated 13 ಸೆಪ್ಟೆಂಬರ್ 2022, 13:14 IST
ಅಕ್ಷರ ಗಾತ್ರ

ಉಡುಪಿ: ಸಮಸ್ಯೆಗಳ ವಿರುದ್ಧ ಸದಾ ವಿಭಿನ್ನವಾಗಿ ಪ್ರತಿಭಟನೆ ನಡೆಸುವ ಮೂಲಕ ಆಡಳಿತ ವ್ಯವಸ್ಥೆಗೆ ಬಿಸಿ ಮುಟ್ಟಿಸುವ ಸಮಾಜ ಸೇವಕ ನಿತ್ಯಾನಂದ ವಳಕಾಡು ಮಂಗಳವಾರವೂ ವಿನೂತನವಾಗಿ ಪ್ರತಿಭಟನೆ ನಡೆಸಿ ಗಮನ ಸೆಳೆದರು.

ಉಡುಪಿ–ಮಣಿಪಾಲ ನಡುವಿನ ಇಂದ್ರಾಳಿ ರೈಲ್ವೆ ಸೇತುವೆ ಬಳಿಯ ಹೆದ್ದಾರಿಯಲ್ಲಿರುವ ಹೊಂಡ ಗುಂಡಿಗಳಲ್ಲಿ ಉರುಳು ಸೇವೆಮಾಡಿ ಆಡಳಿತವ್ಯವಸ್ಥೆಯನ್ನು ಅಣಕಿಸಿದರು.

ಜಿಲ್ಲಾ ನಾಗರಿಕ ಸಮಿತಿಯ ಸದಸ್ಯರೊಂದಿಗೆ ಖಾವಿಧಾರಿಯಾಗಿ ಬಂದಿದ್ದ ನಿತ್ಯಾನಂದ ವಳಕಾಡು ಹನುಮಂತ ದೇವರಿಗೆ ಪೂಜೆ ಸಲ್ಲಿಸಿ, ಮಂಗಳಾರತಿ ಮಾಡಿ ಕಾಯಿ ಹೊಡೆದು ರಸ್ತೆಯಲ್ಲಿದ್ದ ಗುಂಡಿಗಳಲ್ಲಿ ಉರುಳಾಡಿದರು. ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆ ನಡೆಸಿದರು. ಸುಮಾರು 100 ಮೀಟರ್‌ನಷ್ಟು ಉರುಳುಸೇವೆ ಮಾಡಿ ನಗರಸಭೆ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕರು ರಸ್ತೆ ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆ ವೀಕ್ಷಿಸಿದರು. ಕೆಲವರು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿದರು. ಗುಂಡಿ ಮುಚ್ಚಲು ಕ್ರಮ ಕೈಗೊಳ್ಳದ ನಗರಾಡಳಿತ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದ ದೃಶ್ಯ ಕಂಡುಬಂತು.

ನಿತ್ಯಾನಂದ ವಳಕಾಡು ಅವರ ಉರುಳುಸೇವೆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದವು. ಆಡಳಿತ ವ್ಯವಸ್ಥೆಯ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದರು.

ಉರುಳುಸೇವೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ನಿತ್ಯಾನಂದ ವಳಕಾಡು ‘ರಸ್ತೆ ತೆರಿಗೆ ಕಟ್ಟುವ ವಾಹನ ಸವಾರರಿಗೆ ಗುಣಮಟ್ಟದ ಹಾಗೂ ಗುಂಡಿ ಮುಕ್ತ ರಸ್ತೆ ನಿರ್ಮಿಸಿಕೊಡಬೇಕಾಗಿರುವುದು ಸರ್ಕಾರದ ಕರ್ತವ್ಯ. ಆದರೆ, ಉಡುಪಿ ಹಾಗೂ ಮಣಿಪಾಲ ರಸ್ತೆಗಳು ತೀರಾ ಹದಗೆಟ್ಟಿದ್ದು ಗುಂಡಿಯೊಳಗೆ ರಸ್ತೆಯನ್ನು ಹುಡುಕಬೇಕಾದ ಪರಿಸ್ಥಿತಿ ಇದೆ.

ಪ್ರತಿನಿತ್ಯ ಸವಾರರು ಅಪಘಾತಗಳಿಗೆ ತುತ್ತಾಗಿ ಆಸ್ಪತ್ರೆ ಸೇರುತ್ತಿದ್ದಾರೆ. ಮಹಿಳೆಯರು, ವೃದ್ಧರು ವಾಹನ ಓಡಿಸಲು ಸಾದ್ಯವಿಲ್ಲದಷ್ಟು ರಸ್ತೆಗಳು ಹಾಳಾಗಿವೆ. ಬೀದಿ ದೀಪಗಳನ್ನು ಹಾಕುವಂತೆ, ಗುಂಡಿಗಳನ್ನು ಮುಚ್ಚುವಂತೆ ನಿರಂತರವಾಗಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಹಾಗಾಗಿ ಉರುಳುಸೇವೆ ಮಾಡಬೇಕಾಯಿತು ಎಂದರು.

ಇಂದ್ರಾಳಿ ಸೇತುವೆ ಬಳಿಯ ಒಂದು ಬದಿಯಲ್ಲಿ ಶಾಲೆ ಇದೆ. ಮತ್ತೊಂದು ಬದಿಯಲ್ಲಿ ರೈಲ ನಿಲ್ದಾಣಕ್ಕೆ ಹೋಗುವ ರಸ್ತೆ ಇದೆ. ಮಧ್ಯೆ ಹೆದ್ದಾರಿ ಹಾದುಹೋಗಿದ್ದು ಸದಾ ವಾಹನಗಳ ದಟ್ಟಣೆ ಇರುತ್ತದೆ. ರಸ್ತೆ ತುಂಬಾ ಗುಂಡಿಗಳು ಬಿದ್ದಿರುವುದರಿಂದ ಸವಾರರಿಗೆ ವಾಹನ ಓಡಿಸಲು ಹಾಗೂ ಪಾದಚಾರಿಗಳಿಗೆ ನಡೆದಾಡಲು ಸಮಸ್ಯೆಯಾಗಿದೆ.

ಗುಂಡಿಗಳನ್ನು ತಪ್ಪಿಸಲು ಹೋಗಿ ಅಪಘಾತಗಳು ಸಂಭವಿಸುತ್ತಿವೆ. ಗುಂಡಿಯಲ್ಲಿ ತುಂಬಿರುವ ಕೆಸರು ನೀರು ಪಾದಚಾರಿಗಳಿಗೆ ಹಾಗೂ ಶಾಲಾ ಮಕ್ಕಳಿಗೆ ಸಿಡಿದು ಸಮಸ್ಯೆಯಾಗುತ್ತಿದೆ. ಇಷ್ಟಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗುಂಡಿ ಮುಚ್ಚುವ ಗೋಜಿಗೆ ಹೋಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT