ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

41ನೇ ರಾಜ್ಯ ಮಟ್ಟದ ನಾಟಕ ಸ್ಪರ್ಧೆ 10ರಿಂದ

ರಂಗಭೂಮಿ ಉಡುಪಿ ಸಂಸ್ಥೆಯಿಂದ ಆಯೋಜನೆ: 7 ತಂಡಗಳಿಂದ ನಾಟಕ ಪ್ರದರ್ಶನ
Last Updated 8 ಜನವರಿ 2021, 14:52 IST
ಅಕ್ಷರ ಗಾತ್ರ

ಉಡುಪಿ: ರಂಗಭೂಮಿ ಉಡುಪಿ ಸಂಸ್ಥೆಯಿಂದ 41ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.10ರಂದು ಸಂಜೆ 6ಕ್ಕೆ ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ್ಣ ಬಯಲು ರಂಗಮಂದಿರದಲ್ಲಿ ನಾಟಕ ಸ್ಪರ್ಧೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್‌ ಎಸ್‌.ನಾಯಕ್ ಉದ್ಘಾಟಿಸಲಿದ್ದಾರೆ. ದಿ.ಡಾ.ಟಿಎಂಎ ಪೈ, ದಿ.ಎಸ್‌.ಎಲ್‌.ನಾರಾಯಣ ಭಟ್‌ ಹಾಗೂ ದಿ.ಮಲ್ಪೆ ಮಧ್ವರಾಜ್ ಸ್ಮರಣಾರ್ಥ ನಾಟಕ ಸ್ಪರ್ಧೆ ನಡೆಯುತ್ತಿವೆ. ಕೋವಿಡ್‌ನಿಂದಾಗಿ ಈ ವರ್ಷ ರಾಜ್ಯದ ಆಯ್ದ ಜಿಲ್ಲೆಗಳಿಂದ 7 ತಂಡಗಳು ಮಾತ್ರ ಭಾಗವಹಿಸುತ್ತಿದ್ದು, 7 ನಾಟಕಗಳು ಪ್ರದರ್ಶನಗೊಳ್ಳಲಿವೆ. ಜ. 16ರವರೆಗೆ ಪ್ರತಿದಿನ ನಾಟಕಗಳ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರಿನ 2, ಉಡುಪಿ, ಮೈಸೂರು, ಧಾರವಾಡ, ಕೋಲಾರ ಹಾಗೂ ಕೊಪ್ಪಳದ ತಲಾ ಒಂದು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ವಿಜೇತ ತಂಡಗಳಿಗೆ ಪ್ರಥಮ ಬಹುಮಾನವಾಗಿ ₹ 35,000, ದ್ವಿತೀಯ ₹ 25,000, ತೃತೀಯ ₹ 15,000 ನಗದು ಪುರಸ್ಕಾರ ನೀಡಲಾಗುವುದು. ಶ್ರೇಷ್ಠ ನಟ, ನಿರ್ದೇಶನ,ನಟಿ, ಪ್ರಸಾದನ, ರಂಗಪರಿಕರ, ಸಂಗೀತ, ಬೆಳಕು, ಹಾಸ್ಯನಟ, ಬಾಲನಟ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ನಗದು ಸಹಿತ ಪ್ರಶಸ್ತಿಗಳಿವೆ ಎಂದರು.

ಉಡುಪಿ ರಂಗಭೂಮಿ ಸಂಸ್ಥೆಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಸತತ 40 ವರ್ಷಗಳಿಂದ ನಿರಂತರವಾಗಿ ರಾಜ್ಯಮಟ್ಟದ ನಾಟಕ ಸ್ಪರ್ಧೆಗಳನ್ನು ಆಯೋಜಿಸುತ್ತಿರುವುದು ಸಂಸ್ಥೆಯ ಅಗ್ಗಳಿಕೆ. ಕೋವಿಡ್ ನಂತರ ಮೊದಲ ಬಾರಿಗೆ ಬಹಿರಂಗವಾಗಿ ನಾಟಕ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ನಾಟಕ ನೋಡುವ ಅವಕಾಶ ವಂಚಿತರಾಗಿದ್ದ ಕಲಾಸಕ್ತರಿಗೆ ಮತ್ತೆ ಮನರಂಜನೆ ಸಿಗಲಿದೆ ಎಂದರು.

7 ದಿನ 7 ನಾಟಕಗಳು

ಜ.10 ರಂದು ಸಂಜೆ 6.30ಕ್ಕೆ ಕೋಲಾರದ ರಂಗವಿಜಯ ತಂಡದಿಂದ ‘ತೊರೆದು ಜೀವಿಸಬಹುದೇ’ ನಾಟಕ ಪ್ರದರ್ಶನವಾಗಲಿದೆ. 11ರಂದು ಧಾರವಾಡದ ಸಮುದಾಯ ತಂಡದಿಂದ ‘ತಲೆದಂಡ’, 12ರಂದು ಮೈಸೂರಿನ ಜಿಪಿಐಇಆರ್‌ ರಂಗತಂಡದಿಂದ ‘ಮಂಟೆಸ್ವಾಮಿ ಕಥಾಪ್ರಸಂಗ’, 13ರಂದು ಉಡುಪಿಯ ಸುಮನಸಾ ಕೊಡವೂರು ತಂಡದಿಂದ ‘ನೆರಳಿಲ್ಲದ ಮನುಷ್ಯರು’, 14ರಂದು ಕೊಪ್ಪಳದ ಶಿಕ್ಷಕರ ಕಲಾಸಂಘದಿಂದ ‘ರಾವಿನದಿಯ ದಂಡೆಯಲ್ಲಿ’ 15ರಂದು ಬೆಂಗಳೂರಿನ ಸಮಷ್ಠಿ ತಂಡದಿಂದ ‘ಕಂತು’ ಹಾಗೂ 16ರಂದು ಬೆಂಗಳೂರಿನ ಅದಮ್ಯ ರಂಗಸಂಸ್ಕೃತಿ ಟ್ರಸ್ಟ್‌ನಿಂದ ‘ನಾನು ಚಂದ್ರಗುಪ್ತನೆಂಬ ಮೌರ್ಯ’ ನಾಟಕ ಪ್ರದರ್ಶನಗೊಳ್ಳಲಿದೆ.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಎಂ.ನಂದಕುಮಾರ್, ಭಾಸ್ಕರ್ ರಾವ್ ಕಿದಿಯೂರು, ಜತೆ ಕಾರ್ಯದರ್ಶಿ ಮೇಟಿ ಮುದಿಯಪ್ಪ, ಸದಸ್ಯರಾದ ಶ್ರೀಪಾದ ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT