ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಣಾಟಕ ಉತ್ತರಾಖಂಡ್‌ ರಾಜ್ಯಗಳ ಸಮ್ಮಿಲನ

ಏಕ್‌ ಭಾರತ್, ಶ್ರೇಷ್ಠ ಭಾರತ್ ಯೋಜನೆಯಡಿ ಅಂತರ ರಾಜ್ಯ ಯುವ ವಿನಿಮಯ ಕಾರ್ಯಕ್ರಮ
Last Updated 10 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಉಡುಪಿ: ನಗರದ ನೆಹರೂ ಯುವ ಕೇಂದ್ರದಲ್ಲಿ ಉತ್ತರಾಖಂಡ ಹಾಗೂ ಕರ್ನಾಟಕ ರಾಜ್ಯಗಳ ಕಲೆ, ಸಂಸ್ಕೃತಿ, ವೈವಿಧ್ಯತೆಗಳ ಸಮಾಗಮವಾಗಿದೆ. ಕೇಂದ್ರ ಸರ್ಕಾರದ ‘ಏಕ್‌ ಭಾರತ್ ಶ್ರೇಷ್ಠ ಭಾರತ್’ ಯೋಜನೆಯಡಿ ಅಂತರ ರಾಜ್ಯ ಯುವ ವಿನಿಯಮ ಕಾರ್ಯಕ್ರಮದಲ್ಲಿ ಸಂಸ್ಕೃತಿಯ ವಿನಿಯಮ ನಡೆಯುತ್ತಿದೆ.

ಭಾರತ ವೈವಿಧ್ಯತೆ, ವೈಶಿಷ್ಟತೆ, ಬಹುಭಾಷೆ, ಬಹು ಸಂಸ್ಕತಿಯ ತವರು. ಇಲ್ಲಿನ ವಿಭಿನ್ನತೆ ವಿಶ್ವದ ಯಾವ ದೇಶದಲ್ಲಿ ಕಾಣಸಿಗಲು ಸಾಧ್ಯವಿಲ್ಲ. ದೇಶದ ವೈವಿಧ್ಯತೆ ಹಾಗೂ ಏಕತೆಯನ್ನು ಮತ್ತಷ್ಟು ಸದೃಢಗೊಳಿಸಲು ಉತ್ತರಾಖಂಡ ಹಾಗೂ ಕರ್ನಾಟಕದ ನಡುವೆ ಸಾಂಸ್ಕೃತಿಕ ಸಮ್ಮಿಲನ ಆರಂಭವಾಗಿದೆ ಎನ್ನುತ್ತಾರೆ ಜಿಲ್ಲಾ ನೆಹರೂ ಯುವ ಕೇಂದ್ರದ ಸಮನ್ವಯಾಧಿಕಾರಿ ವಿಲ್ಫ್ರೆಡ್ ಡಿಸೋಜ.

ಉಡುಪಿ ಜಿಲ್ಲೆಯಲ್ಲಿ ಪ್ರಥಮ ಭಾರಿಗೆ ರಾಷ್ಟ್ರಮಟ್ಟದ ಯುವ ವಿನಿಮಯ ಕಾರ್ಯಕ್ರಮ ಆಯೋಜಿಸಲಾಗಿದೆ. ಡಿ.7ರಿಂದ ಆರಂಭವಾಗಿದ್ದು, 21ರವರೆಗೆ ನಡೆಯಲಿದೆ. ಉತ್ತರಾಖಂಡ್‌ ರಾಜ್ಯದ ವಿವಿಧ ಜಿಲ್ಲೆಗಳಿಂದ 50 ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಿಂದ 50 ಯುವಕ–ಯುವತಿಯರು ಕಾರ್ಯಕ್ರಮದ ಭಾಗವಾಗಿದ್ದಾರೆ.

15 ದಿನಗಳ ಅವಧಿಯಲ್ಲಿ ಎರಡೂ ರಾಜ್ಯಗಳ ವಿದ್ಯಾರ್ಥಿಗಳು ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಲ್ಲಿನ ಕಲೆ, ಸಂಸ್ಕೃತಿ, ಆಚಾರ, ವಿಚಾರ, ಭಾಷಾ ವೈವಿಧ್ಯತೆ, ಜಾನಪದದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ವಿಚಾರಗಳ ವಿನಿಮಯ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಉತ್ತರಾಖಂಡದ ವೈವಿಧ್ಯತೆಯನ್ನು ಅರಿಯಲು ಫೆಬ್ರುವರಿಯಲ್ಲಿ ಕರ್ನಾಟಕದ 50 ಯುವಕ-ಯುವತಿಯರು ಅಲ್ಲಿಗೆ ತೆರಳಲಿದ್ದಾರೆ. ಒಟ್ಟಾರೆ ವೈವಿಧ್ಯಮಯ ಭಾರತವನ್ನು ಅರಿಯುವ ಪ್ರಯತ್ನ ಕಾರ್ಯಕ್ರಮದ ಉದ್ದೇಶ ಎಂದರು.

ಸರ್ಧಾರ್ ವಲ್ಲಭಾಯ್‌ ಪಟೇಲರ 140ನೇ ಜನ್ಮದಿನಾಚರಣೆಯಂದು ‘ಏಕ್ ಭಾರತ್ ಶ್ರೇಷ್ಠ್ ಭಾರತ್‌‌’ ನಿರ್ಮಾಣದ ಘೋಷಣೆ ಮೊಳಗಿತು. ಸದೃಢ ಭಾರತ ನಿರ್ಮಾಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಯೋಜನೆಗೆ ಚಾಲನೆ ನೀಡಿದರು. ರಾಷ್ಟ್ರೀಯ ಭಾವೈಕ್ಯತೆಯನ್ನು ಪಸರಿಸುವುದು ಹಾಗೂ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಭಾವನಾತ್ಮಕ ವೇದಿಕೆಯನ್ನು ಒದಗಿಸುವುದು ಕಾರ್ಯಕ್ರಮದ ಉದ್ದೇಶ ಎಂದರು.

ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವುದು. ಕ್ರೀಡೆ, ಭಾಷಣ, ಪ್ರಬಂಧ, ರಸಪ್ರಶ್ನೆ ಸ್ಪರ್ಧೆಯನ್ನು ನಡೆಸುವುದು. ಆರೋಗ್ಯ, ಶಿಕ್ಷಣ, ತಂತ್ರಜ್ಞಾನ, ಸ್ವಚ್ಛತೆ, ಔದ್ಯೋಗಿಕ ಕ್ಷೇತ್ರಗಳಲ್ಲಿ ವಿಚಾರಗಳ ವಿನಿಮಯ ನಡೆಯಲಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವುದು ಶಿಬಿರದ ಮುಖ್ಯ ಉದ್ದೇಶಗಳಲ್ಲಿ ಒಂದು.

ಸ್ಥಳೀಯ ಭಾಷೆಗಳನ್ನು ಕಲಿಯುವುದು, ಜನಪದ ಗೀತೆ, ನೃತ್ಯ, ನುಡಿಮುತ್ತುಗಳನ್ನು ಅರ್ಥೈಸಿಕೊಳ್ಳುವುದು. ಆಕಾಶವಾಣಿ, ಎಪ್.ಎಂ, ಸ್ಥಳೀಯ ಟಿ.ವಿ. ಚಾನೆಲ್‌ಗಳಲ್ಲಿ ನೃತ್ಯೋತ್ಸವ ಕಾರ್ಯಕ್ರಮಗಳನ್ನು ನೀಡುವುದು ‘ಏಕ್ ಭಾರತ್ ಶ್ರೇಷ್ಠ್ ಭಾರತ್‌’ ವೆಬ್ ಸೈಟ್ ಮೂಲಕ ಯುವಜನತೆಯಲ್ಲಿ ಸಹಭಾಗಿತ್ವವನ್ನು ಬೆಳೆಸುವುದು ಕಾರ್ಯಕ್ರಮದ ಒಂದು ಭಾಗ ಎಂದು ವಿಲ್ಫ್ರೆಡ್‌ ಮಾಹಿತಿ ನೀಡಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT