ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಂಡೋಸಲ್ಫಾನ್ ಬಾಧಿತ ಪ್ರದೇಶಗಳಲ್ಲಿ ಸರ್ವೆ ನಡೆಸಿ ಸಂತ್ರಸ್ತರನ್ನು ಗುರುತಿಸಿ‘

ಎಂಡೋ ಸಲ್ಪಾನ್‌ ಸಂತ್ರಸ್ತರ ಕುಂದುಕೊರತೆ ಸಭೆಯಲ್ಲಿ ಜಿಲ್ಲಾಧಿಕಾರಿ ಕೂರ್ಮರಾವ್ ಸೂಚನೆ
Last Updated 19 ಜನವರಿ 2022, 16:37 IST
ಅಕ್ಷರ ಗಾತ್ರ

ಉಡುಪಿ: ಎಂಡೋಸಲ್ಫಾನ್ ಪೀಡಿತರಿಗೆ ಅಗತ್ಯ ವೈದ್ಯಕೀಯ ನೆರವಿನ ಜತೆಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಬೇಕು. ಸಂತ್ರಸ್ತರ ಕುಂದುಕೊರತೆಗೆ ತುರ್ತು ಸ್ಪಂದಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಎಂಡೋಸಲ್ಫಾನ್ ಪೀಡಿತರಿಗೆ ಸೌಲಭ್ಯ ಒದಗಿಸುವ ಹಾಗೂ ಕುಂದುಕೊರತೆಗಳ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಎಂಡೋಸಲ್ಫಾನ್‌ ದುಷ್ಪರಿಣಾಮದಿಂದ ಕೆಲವರು ಶಾಶ್ವತ ಅಂಗವಿಕಲರಾಗಿದ್ದು, ಕೆಲವರು ಮಾರಕ ಕ್ಯಾನ್ಸರ್, ಅಸ್ತಮಾ, ಚರ್ಮರೋಗ, ಅಪಸ್ಮಾರ ರೋಗಗಳಿಗೆ ತುತ್ತಾಗಿದ್ದಾರೆ. ಸಂತ್ರಸ್ತರಿಗೆ ಉಚಿತ ಆರೋಗ್ಯ ಸೌಲಭ್ಯ ಒದಗಿಸಿ, ಸರ್ಕಾರದ ಇತರೆ ಸೌಲಭ್ಯಗಳನ್ನು ನೀಡಬೇಕು ಎಂದು ಸೂಚನೆ ನೀಡಿದರು.

ಎಂಡೋಸಲ್ಫಾನ್ ಬಾಧಿತ ಪ್ರದೇಶಗಳಲ್ಲಿ ಸರ್ವೆ ಕಾರ್ಯ ನಡೆಸಿ ಸಂತ್ರಸ್ತರನ್ನು ಗುರುಗಿಸಿ ಅಂಗವಿಕಲರಿಗೆ ನೀಡುವ ಸೌಲಭ್ಯಗಳನ್ನು ಒದಗಿಸುವ ಕುರಿತು ರಾಜ್ಯಮಟ್ಟದ ಮಂಡಳಿಗೆ ಶಿಫಾರಸು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸರ್ಕಾರದ ಸೌಲಭ್ಯ, ಆದೇಶ ಹಾಗೂ ಇತರೆ ಕಾರ್ಯಕ್ರಮಗಳ ಕುರಿತು ಸಂತ್ರಸ್ತರಿಗೆ ಮಾಹಿತಿ ದೊರೆಯುವ ನಿಟ್ಟಿನಲ್ಲಿ ವೆಬ್‌ಸೈಟ್ ಆರಂಭಿಸಬೇಕು. ಕುಂದು ಕೊರೆತೆ ಅರ್ಜಿಗಳನ್ನು ವೆಬ್‌ಸೈಟ್‌ನಲ್ಲಿ ಸಲ್ಲಿಸಲು ಅನುವು ಮಾಡಿಕೊಡುವುದರ ಜೊತೆಗೆ, ನಿಯಮಾನುಸಾರ ಸ್ಪಂದಿಸುವ ಕಾರ್ಯವನ್ನ ಮಾಡಬೇಕು ಎಂದು ನಿರ್ದೇಶನ ನೀಡಿದರು.

ಎಂಡೋ ಪೀಡಿತ ಅಂಗವಿಕಲರಿಗೆ ಫಿಸಿಯೊ ಥೆರಪಿ ಚಿಕಿತ್ಸೆ ನೀಡಲು ಬಾಧಿತರು ಇರುವ ಕಡೆ ಶಾಶ್ವತ ಪುರ್ನವಸತಿ ಕೇಂದ್ರ ತೆರೆಯಿರಿ. ಸಂತ್ರಸ್ತರಿಗೆ ಗುರುತಿನ ಚೀಟಿ ಹಾಗೂ ಪಾಸ್ ಕಡ್ಡಾಯವಾಗಿ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಮೂರು ತಿಂಗಳಿಗೊಮ್ಮೆ ತಾಲ್ಲೂಕು ಮಟ್ಟದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗೆ ಸೌಲಭ್ಯ ನೀಡುವ ಹಾಗೂ ಕುಂದು ಕೊರತೆ ಬಗ್ಗೆ ಚರ್ಚಿಸಲು ಸಭೆ ಕರೆಯಬೇಕು. ಸ್ಥಳೀಯವಾಗಿಯೇ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ನೀಡಬೇಕು ಎಂದರು.

ಜಿಲ್ಲೆಯಲ್ಲಿ 669 ಪುರುಷರು, 620 ಮಹಿಳೆಯರು, 353 ಮಕ್ಕಳು ಸೇರಿದಂತೆ 1,642 ಎಂಡೋಸಲ್ಫಾನ್ ಪೀಡಿತರಿದ್ದು, 120 ಮಂದಿ ಮರಣ ಹೊಂದಿದ್ದಾರೆ, 1,522 ಸಂತ್ರಸ್ತರಿದ್ದಾರೆ. ಇವರಲ್ಲಿ 203 ಜನರಿಗೆ ಶೇ 25 ರಷ್ಟು, 351 ಜನರಿಗೆ ಶೇ 25 ರಿಂದ ಶೇ 59ರಷ್ಟು ಹಾಗೂ 968 ಜನರಿಗೆ ಶೇ 60 ಕ್ಕಿಂತ ಹೆಚ್ಚು ಅಂಗವಿಕಲತೆಯಾಗಿದೆ ಎಂದು ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ.ನವೀನ್ ಭಟ್ ಮಾತನಾಡಿ, ಶಾಶ್ವತ ಪುರ್ನವಸತಿ ಕೇಂದ್ರವನ್ನು ತೆರೆಯುವವರೆಗೂ ಸಂತ್ರಸ್ತರಿಗೆ ಫಿಸಿಯೊ ಥೆರಪಿಯನ್ನು ಅಂಗವಿಕಲರ ಇಲಾಖೆ ಹಾಗೂ ಎನ್‌ಜಿಒಗಳ ಸಹಯೋಗದಲ್ಲಿ ನೀಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಚಿಕಿತ್ಸೆಗಾಗಿ ಬರುವವರಿಗೆ ಆದ್ಯತೆ ಮೇಲೆ ಔಷಧಿಯನ್ನು ಉಚಿತವಾಗಿ ವಿತರಿಸಬೇಕು ಎಂದರು.

ಸಭೆಯಲ್ಲಿ ಸ್ವಯಂ ಸೇವಾ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿ ಸಂತ್ರಸ್ತ ಸಮಸ್ಯೆಗಳನ್ನು ಸಮಿತಿಯ ಮುಂದೆ ಹೇಳಿಕೊಂಡರು. ಬಾಧಿತ ಪ್ರದೇಶದಲ್ಲಿ ಜನಿಸಿದ ಹೆಣ್ಣುಮಕ್ಕಳಿಗೆ ಮದುವೆಯಾಗಿ ಅವರಿಗೆ ಜನಿಸಿದ ಮಕ್ಕಳ ಮೇಲೂ ಎಂಡೋಸಲ್ಫಾನ್ ದುಷ್ಪರಿಣಾಮ ಬೀರಿದೆ ಎಂಬ ಅಂಶವನ್ನು ಸಮಿತಿಯ ಗಮನಕ್ಕೆ ತಂದಿದ್ದು, ಅವರಿಗೂ ಸವಲತ್ತುಗಳನ್ನು ಒದಗಿಸಬೇಕು ಎಂದರು.

ಕುಂದಾಪುರ ಉಪವಿಭಾಗಾಧಿಕಾರಿ ರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಡಾ.ಪ್ರಶಾಂತ್ ಭಟ್, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ತಹಶೀಲ್ದಾರರು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT