ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕು ಮೀನುಗಾರಿಕೆ ನಿಲ್ಲಿಸಲು ವಿಫಲ

ಮಲ್ಪೆ ಬಂದರಿನಲ್ಲಿ ಮೀನುಗಾರರ ಪ್ರತಿಭಟನೆ: ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ
Last Updated 6 ಮಾರ್ಚ್ 2019, 5:32 IST
ಅಕ್ಷರ ಗಾತ್ರ

ಉಡುಪಿ: ಹೈಕೋರ್ಟ್ ಆದೇಶ ಉಲ್ಲಂಘಿಸಿ ಮಲ್ಪೆ ಬಂದರಿನಲ್ಲಿ ಪರ್ಸಿನ್‌ ಬೋಟ್‌ ಮೀನುಗಾರರು ಬೆಳಕು ಮೀನುಗಾರಿಕೆ (ಲೈಟ್‌ ಫಿಶಿಂಗ್) ನಡೆಸುತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳಲಲಾಗುತ್ತಿಲ್ಲ ಎಂದು ಆರೋಪಿಸಿ ಮಂಗಳವಾರ ಮಲ್ಪೆ ಬಂದರಿನ ಮುಂಭಾಗ ಆಳಸಮುದ್ರ ಟ್ರಾಲ್‌ಬೋಟ್‌ ಅಸೋಸಿಯೇಷನ್‌ ಹಾಗೂ ಸಾಂಪ್ರದಾಯಿಕ ಮೀನುಗಾರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ರಾಜ್ಯದ ಯಾವುದೇ ಬಂದರಿನಲ್ಲೂ ಬೆಳಕು ಮೀನುಗಾರಿಕೆಗೆ ಅವಕಾಶ ನೀಡಿಲ್ಲ. ಆದರೆ ಮಲ್ಪೆಯಲ್ಲಿ ಮಾತ್ರ ಅವ್ಯಾಹತವಾಗಿ ನಡೆಯುತ್ತಿದೆ. ಪರ್ಸಿನ್‌ ಬೋಟ್‌ ಮಾಲೀಕರು ನಿಯಮಗಳನ್ನು ಉಲ್ಲಂಘಿಸಿ ಹೆಚ್ಚು ಸಾಮರ್ಥ್ಯದ ಜನರೇಟರ್‌ಗಳನ್ನು ಅಳವಡಿಸಿಕೊಂಡು ಬೆಳಕು ಮೀನುಗಾರಿಕೆ ನಡೆಸುತ್ತಿದ್ದಾರೆ. ಇಷ್ಟಾದರೂ ಮೀನುಗಾರಿಕಾ ಇಲಾಖೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.‌

ಮೆಸ್ಕಾಂ ಇಲಾಖೆಯ ಅನುಮತಿ ಪಡೆಯದೆ ಜನರೇಟರ್ ಅಳವಡಿಸಲಾಗಿದೆ. ಈ ವಿಚಾರ ಗೊತ್ತಿದ್ದರೂ ಅಧಿಕಾರಿಗಳು ಬೋಟ್‌ಗಳನ್ನು ಸೀಜ್‌ ಮಾಡುತ್ತಿಲ್ಲ. ಸಮುದ್ರಕ್ಕೆ ಇಳಿಯುವ ಮುನ್ನವೇ ಬೋಟ್‌ಗಳನ್ನು ತಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಕ್ರಮ ಬೆಳಕು ಮೀನುಗಾರಿಕೆ ನಡೆಸುತ್ತಿರುವ ವಿಚಾರವನ್ನು ಕೂಡಲೇ ಜಿಲ್ಲಾಧಿಕಾರಿ ಹಾಗೂ ಮೀನುಗಾರಿಕಾ ಇಲಾಖೆಯ ಮುಖ್ಯ ಕಾರ್ಯದರ್ಶಿಯ ಗಮನಕ್ಕೆ ತರಬೇಕು. ಕೂಡಲೇ ದಕ್ಕೆಯಲ್ಲಿರುವ ಬೋಟ್‌ಗಳನ್ನು ಸೀಜ್‌ ಮಾಡಬೇಕು. ನಿಯಮ ಉಲ್ಲಂಘನೆ ಮಾಡಿರುವ ಬೋಟ್‌ಗಳ ಪರವಾನಗಿಗಳನ್ನು ರದ್ದು ಮಾಡಬೇಕು ಎಂದು ಮೀನುಗಾರರು ಒತ್ತಾಯಿಸಿದರು.

5 ಎಚ್‌ಪಿಗಿಂತ ಹೆಚ್ಚಿನ ಸಾಮರ್ಥ್ಯದ ಜನರೇಟರ್‌ ಬಳಸುವುದಿಲ್ಲ ಎಂದು ಮೀನುಗಾರರು ಪರವಾನಗಿ ಪಡೆಯುವ ಸಂದರ್ಭ ಅಫಿಡವಿಟ್‌ ಸಲ್ಲಿಸಿರುತ್ತಾರೆ. ಹೀಗಿರುವಾಗ ಹೆಚ್ಚು ಸಾಮರ್ಥ್ಯದ ಜನರೇಟರ್‌ ಬಳಸುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿರುವುದು ಅನುಮಾನಗಳನ್ನು ಮೂಡಿಸಿದೆ. ಅಧಿಕಾರಿಗಳು ಕ್ರಮ ತೆಗೆದುಕೊಳ್ಳದಿದ್ದರೆ, ಮೀನುಗಾರರೇ ಕಾನೂನು ಕೈಗೆತ್ತಿಕೊಳ್ಳಬೇಕಾಗುತ್ತದೆ. ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಮೀನುಗಾರರು ಎಚ್ಚರಿಕೆ ನೀಡಿದರು.

ಪೊಲೀಸರ ಸ್ಪಷ್ಟನೆ:
42 ಬೋಟ್‌ ಮಾಲೀಕರು ಅಕ್ರಮವಾಗಿ ಜನರೇಟರ್‌ ಅಳವಡಿಸಿಕೊಂಡು ಲೈಟ್‌ ಫಿಶಿಂಗ್ ಮಾಡುತ್ತಿದ್ದಾರೆ ಎಂದು ಮೀನುಗಾರರು ದೂರು ನೀಡಿದ್ದಾರೆ. ಕಾನೂನಿನಡಿ ಬೋಟ್‌ಗಳ ಜನರೇಟರ್ ಸೀಜ್‌ ಮಾಡಲು ಅವಕಾಶ ಇಲ್ಲ. ಆದರೆ, ಬೋಟ್‌ ಮಾಲೀಕರನ್ನು ಕರೆಸಿ ಜನರೇಟರ್‌ ಬಳಸದಂತೆ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಇಲಾಖೆ ಬೋಟ್‌ಗಳನ್ನು ವಶಕ್ಕೆ ತೆಗೆದಕೊಳ್ಳಲು ಮುಂದಾದರೆ ಸೂಕ್ತ ರಕ್ಷಣೆ ನೀಡುವುದಾಗಿ ಪೊಲೀಸರು ತಿಳಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಕಿಶೋರ್ ಡಿ.ಸುವರ್ಣ, ಭುವನೇಂದ್ರ ಕೋಟ್ಯಾನ್‌, ಕರುಣಾಕರ ಸಾಲ್ಯಾನ್, ಮಹೇಶ್ ಸುವರ್ಣ ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT