ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೀಟರ್ ಹಾಲಿಗೆ ಕನಿಷ್ಠ ₹ 40 ದರ ಕೊಡಿ

ಸಂಕಷ್ಟದಲ್ಲಿರುವ ಹೈನುಗಾರರ ನೆರವಿಗೆ ಧಾವಿಸಲು ರಾಜ್ಯ ಸಹಕಾರ ಭಾರತಿ ಹಾಲು ಪ್ರಕೋಷ್ಠ ಒತ್ತಾಯ
Last Updated 11 ಅಕ್ಟೋಬರ್ 2022, 13:02 IST
ಅಕ್ಷರ ಗಾತ್ರ

ಉಡುಪಿ: ಹಾಲಿನ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಹಾಲಿನ ದರ ಹೆಚ್ಚಳ ಮಾಡಬೇಕು. ಹೈನುಗಾರರಿಗೆ ಲೀಟರ್‌ಗೆ ಕನಿಷ್ಠ ₹ 40 ದರ ಸಿಗಬೇಕು ಎಂದು ರಾಜ್ಯ ಸಹಕಾರ ಭಾರತಿ ಹಾಲು ಪ್ರಕೋಷ್ಠದ ಸಂಚಾಲಕ ಸಾಣೂರು ನರಸಿಂಹ ಕಾಮತ್ ಒತ್ತಾಯಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತಿವೃಷ್ಟಿ, ಅನಾವೃಷ್ಟಿ, ಬೈಹುಲ್ಲು, ಪಶು ಆಹಾರ ದರ ಏರಿಕೆ, ಪಶು ಚಿಕಿತ್ಸೆ ವೆಚ್ಚ, ಕೂಲಿ ಸೇರಿದಂತೆ ಗೋವುಗಳ ಸಾಕಾಣಿಕೆ ಮಾಡಲು ಹೈನುಗಾರರಿಗೆ ಆರ್ಥಿಕ ಹೊರೆ ಹೆಚ್ಚಾಗಿದೆ. ಹಾಲಿನ ದರಕ್ಕಿಂತ ಉತ್ಪಾದನಾ ವೆಚ್ಚವೇ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರತಿ ಲೀಟರ್‌ಗೆ ಕೊಡುತ್ತಿರುವ ಪ್ರೋತ್ಸಾಹ ಧನ ಪ್ರಮಾಣವನ್ನು ಕನಿಷ್ಠ ₹ 10ಕ್ಕೆ ಹೆಚ್ಚಿಸಬೇಕು.

ರಾಜ್ಯ ಸಹಕಾರ ಭಾರತಿ ಹಾಲು ಪ್ರಕೋಷ್ಠದ ಪ್ರಮುಖ ಬೋಳ ಸದಾಶಿವ ಶೆಟ್ಟಿ ಮಾತನಾಡಿ, ದೀಪಾವಳಿಯ ಗೋಪೂಜೆಯ ಒಳಗೆ ಸರ್ಕಾರ ಪ್ರೋತ್ಸಾಹ ಧನವನ್ನು ಹೆಚ್ಚಿಸದಿದ್ದರೆ ರಾಜ್ಯ ಸಹಕಾರ ಭಾರತಿ ಹಾಲು ಪ್ರಕೋಷ್ಠದಿಂದ ರಾಜ್ಯದೆಲ್ಲೆಡೆ ಹೈನುಗಾರರು ಪ್ರತಿಭಟನೆಗೆ ಇಳಿಯಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಗೋವುಗಳ ಸಾಕಾಣಿಕೆಗೆ ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿರುವುದರಿಂದ ಹೈನುಗಾರರು ಗೋ ಸಾಕಾಣಿಕೆಯಿಂದ ವಿಮುಖರಾಗುತ್ತಿದ್ದಾರೆ. ಕಳೆದ ಮೂರು ತಿಂಗಳಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದಲ್ಲಿ ಸುಮಾರು 1 ಲಕ್ಷ ಲೀಟರ್‌ನಷ್ಟು ಹಾಲು ಸಂಗ್ರಹ ಕಡಿಮೆಯಾಗಿದೆ. ರಾಜ್ಯದ 16 ಒಕ್ಕೂಟಗಳಲ್ಲಿ ಪ್ರತಿದಿನ 4 ರಿಂದ 5 ಲಕ್ಷ ಲೀಟರ್‌ನಷ್ಟು ಹಾಲು ಸಂಗ್ರಹ ಕುಸಿತವಾಗಿದೆ. ಈ ಅಂಕಿ ಅಂಶಗಳು ಹೈನುಗಾರರು ಎದುರಿಸುತ್ತಿರುವ ಸವಾಲು ಹಾಗೂ ಆತಂಕಗಳ ಸೂಚಕವಾಗಿವೆ ಎಂದರು.

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಅಕ್ಟೋಬರ್‌ನಿಂದ ಹಾಲಿನ ಖರೀದಿ ದರಕ್ಕೆ ಹೆಚ್ಚುವರಿಯಾಗಿ ₹2.05 ಪ್ರೋತ್ಸಾಹ ಧನ ನೀಡಲು ನಿರ್ಧರಿಸಿರುವುದು ಸ್ವಾಗತಾರ್ಹ. ಸರ್ಕಾರ ಕೂಡ ಲೀಟರ್‌ಗೆ ₹ 10 ಪ್ರೋತ್ಸಾಹ ಧನ ಹೆಚ್ಚಿಸುವ ಮೂಲಕ ಹೈನುಗಾರರ ಹಾಗೂ ಗೋವುಗಳ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.

ಹೈನುಗಾರರ ಸಹಕಾರಿ ಸಂಘ ರಚನೆಯಾಗಲಿ:

ಪ್ರಸ್ತುತ ಚಾಲ್ತಿಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಹೈನುಗಾರರ ಸಹಕಾರಿ ಸಂಘಗಳಾಗಿ ಪರಿವರ್ತಿಸಿ ಸರ್ಕಾರದ ಬಹುಪಯೋಗಿ ಸೇವೆಗಳಾದ ಕಾಮನ್ ಸರ್ವೀಸ್ ಸೆಂಟರ್, ಪಡಿತರ ವಿತರಣಾ ಕೇಂದ್ರ, ಜನೌಷಧ ಕೇಂದ್ರಗಳನ್ನು ಹೈನುಗಾರರ ಸಹಕಾರಿ ಸಂಘಗಳ ಮೂಲಕ ಸಾರ್ವಜನಿಕರಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು.

ಇದರಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಉದ್ಯೋಗ, ಉತ್ತಮ ವೇತನ, ಸೇವಾ ಭದ್ರತೆ ದೊರೆಯುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಮೋಹನ್ ಕುಮಾರ್ ಕುಂಬ್ಳೆಕರ್, ಕಮಲಾಕ್ಷ ಹೆಬ್ಬಾರ್, ಪ್ರಶಾಂತ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT