ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಬೊಕ್ಕಸ ತುಂಬಿಸುವವರ ಸಮಸ್ಯೆಗೆ ಸ್ಪಂದಿಸಿ: ಗೋವಿಂದರಾಜ ಹೆಗ್ಡೆ

ಫೆಡರೇಷನ್‌ ಆಫ್‌ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್ ಹೆಗ್ಡೆ ಒತ್ತಾಯ
Last Updated 2 ಫೆಬ್ರುವರಿ 2021, 13:06 IST
ಅಕ್ಷರ ಗಾತ್ರ

ಉಡುಪಿ: ಮದ್ಯ ಮಾರಾಟಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಯಬೇಕು. ರಾಜ್ಯದಲ್ಲಿ ಅಬಕಾರಿ ಉದ್ಯಮವನ್ನು ಉಳಿಸಬೇಕು ಎಂದು ಫೆಡರೇಷನ್‌ ಆಫ್‌ ವೈನ್ ಮರ್ಚಂಟ್ಸ್‌ ಅಸೋಸಿಯೇಷನ್‌ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ ಹೆಗ್ಡೆ ಒತ್ತಾಯಿಸಿದರು.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಮೀಪ ಮಂಗಳವಾರ ವಿವಿಧ ಬೇಡಿಕೆಗಳ ಈಡೇರಿಕೆಗೆ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ರಾಜ್ಯ ಬಜೆಟ್‌ ಮಂಡನೆಗೂ ಮುನ್ನ ಮದ್ಯ ಮಾರಾಟಗಾರರ ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸಬೇಕು. ಇಲ್ಲವಾದರೆ, ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮದ್ಯ ಮಾರಾಟದಿಂದ ಸಾವಿರಾರು ಕೋಟಿ ತೆರಿಗೆ ಸಂಗ್ರಹಿಸುವ ಸರ್ಕಾರ 11,000 ಸನ್ನದುದಾರರ ಸಮಸ್ಯೆ ಆಲಿಸುತ್ತಿಲ್ಲ. ₹ 5 ಲಕ್ಷ ಕೋಟಿ ಬಂಡವಾಳ ಹೂಡಿರುವ ಮದ್ಯದಂಗಡಿ ಮಾಲೀಕರ ಗೋಳು ಕೇಳುತ್ತಿಲ್ಲ. ಮದ್ಯ ಮಾರಾಟದ ಮೇಲೆ ಶೇ 10ರಷ್ಟು ಲಾಭಾಂಶ ನೀಡಲಾಗುತ್ತಿದ್ದು, ಉದ್ಯಮ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಿಲಿಟರಿ ಮದ್ಯದ ಹೆಸರಿನಲ್ಲಿ ನಕಲಿ ಮದ್ಯವನ್ನು ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ಕಡಿಮೆ ಬೆಲೆಗೆ ಮಿಲಿಟರಿ ಮದ್ಯ ಸಿಗುವ ಆಸೆಗೆ ಗ್ರಾಹಕರು ನಕಲಿ ಮದ್ಯ ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಹಳ್ಳಿಗಳಲ್ಲಿರುವ ಮಾಂಸಾಹಾರದ ಹೋಟೆಲ್‌ಗಳಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಪರಿಣಾಮ ಸರ್ಕಾರದಿಂದ ಮದ್ಯ ಮಾರಾಟಕ್ಕೆ ಅಧಿಕೃತ ಪರವಾನಗಿ ಪಡೆದ ಸನ್ನದುದಾರರು ಬೀದಿಗೆ ಬರುವಂತಾಗಿದೆ ಎಂದು ದೂರಿದರು.‌

ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಪ್ರಸ್ತಾವ ಕೈಬಿಡಬೇಕು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಸಿಎಲ್‌ 6ಎ, 7 ಸನ್ನದು ಪ್ರಾರಂಭಿಸಲು ನೀಡಿರುವ ಆದೇಶ ರದ್ದು ಮಾಡಬೇಕು, ಕೋವಿಡ್‌ನಿಂದ ಅಬಕಾರಿ ಉದ್ಯಮ ಸಂಕಷ್ಟದಲ್ಲಿದ್ದು, ಹೆಚ್ಚಳ ಮಾಡಲಾಗಿರುವ ಅಬಕಾರಿ ಶುಲ್ಕ ಕೈಬಿಡಬೇಕು, ಶೇ 20ರಷ್ಟು ಲಾಭಾಂಶ ನೀಡಬೇಕು, ಸಿಎಲ್‌–2 ಮಳಿಗೆಯಲ್ಲಿ ನಿಂತು ಮದ್ಯ ಸೇವನೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿ.ಜಗದೀಶ್ ಅವರ ಮೂಲಕ ಸರ್ಕಾರಕ್ಕೆ ಬೇಡಿಕೆಗಳ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಫೆಡರೇಷನ್‌ನ ರಾಜ್ಯ ಸಮಿತಿಯ ಮನೋಹರ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಜನಾರ್ದನ ಪೂಜಾರಿ, ಉಡುಪಿ ತಾಲ್ಲೂಕು ಅಧ್ಯಕ್ಷ ಮಿಥುನ್ ಹೆಗ್ಡೆ, ಕಾರ್ಕಳ ಅಧ್ಯಕ್ಷ ಶೋಧನ್ ಕುಮಾರ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT