ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಂಸಿಯಲ್ಲಿ ಕರಾವಳಿಯ ಮೊದಲ ಸ್ಕಿನ್ ಬ್ಯಾಂಕ್

ಡಾ.ರಂಜನ್ ಪೈ ಅವರಿಂದ ಮಣಿಪಾಲದ ಕಸ್ತೂರಬಾ ಆಸ್ಪತ್ರೆಯಲ್ಲಿ ರೋಟರಿ ಮಾಹೆ ಸ್ಕಿನ್ ಬ್ಯಾಂಕ್ ಉದ್ಘಾಟನೆ
Last Updated 21 ಆಗಸ್ಟ್ 2021, 15:45 IST
ಅಕ್ಷರ ಗಾತ್ರ

ಉಡುಪಿ: ಮಣಿಪಾಲದ ಕಸ್ತೂರಬಾ ಆಸ್ಪತ್ರೆಯಲ್ಲಿ ಕರಾವಳಿಯ ಮೊಟ್ಟಮೊದಲ ಸ್ಕಿನ್ ಬ್ಯಾಂಕ್ ಅನ್ನು ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ ಅಧ್ಯಕ್ಷರಾದ ಡಾ.ರಂಜನ್ ಆರ್ ಪೈ ಶನಿವಾರ ಉದ್ಘಾಟಿಸಿದರು.

ರೋಟರಿ ಕ್ಲಬ್ ಮಣಿಪಾಲ ಟೌನ್ ಮತ್ತು ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯ ಪಾಲುದಾರಿಕೆಯಲ್ಲಿ ರೋಟರಿ ಮಾಹೆ ಸ್ಕಿನ್ ಬ್ಯಾಂಕ್ ಸ್ಥಾಪಿಸಲಾಗಿದೆ. ರೋಟರಿ ಕ್ಲಬ್ ಮಣಿಪಾಲ್ ಟೌನ್ ಉಪಕರಣಗಳ ಖರೀದಿಗೆ ₹ 83 ಲಕ್ಷ ನೀಡಿದ್ದು, ಮಾಹೆ ಮೂಲಸೌಕರ್ಯಕ್ಕೆ ₹ 50 ಲಕ್ಷ ನೀಡಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ರಂಜನ್ ಪೈ, ಸ್ಕಿನ್ ಬ್ಯಾಂಕ್‌ನಿಂದ ಸುಟ್ಟ ಗಾಯಗಳಿಂದ ನರಳುವವರ ಚಿಕಿತ್ಸೆಗೆ ಅನುಕೂಲವಾಗಲಿದೆ. ಸ್ಕಿನ್ ಬ್ಯಾಂಕ್‌ನಲ್ಲಿ ಸ್ಕಿನ್ ಗ್ರಾಫ್ಟಿಂಗ್ ಮೂಲಕ ರೋಗಿಗಳಿಗೆ ಉತ್ತಮ ಆರೈಕೆ ಸಿಗಲಿದೆ. ರೋಗಿಗಳ ಆತ್ಮವಿಶ್ವಾಸ ಹೆಚ್ಚಾಗಲಿದೆ ಎಂದರು

ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಪ್ರಾಧ್ಯಾಪಕ ಡಾ.ಎನ್.ಸಿ. ಶ್ರೀಕುಮಾರ್ ಸ್ಕಿನ್ ಬ್ಯಾಂಕ್‌ನ ಅಗತ್ಯತೆ ಮತ್ತು ಉಪಯುಕ್ತತೆ ವಿವರಿಸಿ, ‘ದೊಡ್ಡ ಸುಟ್ಟ ಗಾಯಗಳಾದ ಸಂದರ್ಭದಲ್ಲಿ ಅಂದರೆ, ಶೇ 30ರಿಂದ40 ಕ್ಕಿಂತ ಹೆಚ್ಚು ಸುಟ್ಟ ಗಾಯವಾದರೆ ರೋಗಿಗಳ ಚರ್ಮ ಬಳಸಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಸ್ಕಿನ್ ಬ್ಯಾಂಕ್‌ ನೆರವಾಗಲಿದೆ ಎಂದರು.

ಸುಟ್ಟ ಗಾಯದ ರೋಗಿಗಳು ಚರ್ಮವನ್ನು ಪಡೆಯಲು 2-3 ದಿನಗಳವರೆಗೆ ಕಾಯಬೇಕಾಗಿಲ್ಲ. ಕೆಎಂಸಿ ಚರ್ಮ ಬ್ಯಾಂಕ್‌ನಲ್ಲಿ ಶೀಘ್ರ ಚಿಕಿತ್ಸೆ ಪಡೆಯಬಹುದು ಎಂದರು.

ರೋಟರಿ ಜಿಲ್ಲಾ 3182 ಗವರ್ನರ್ ಪಿಎಚ್‌ಎಫ್ ಎಂ.ಜಿ. ರಾಮಚಂದ್ರ ಮೂರ್ತಿ ಮಾತನಾಡಿ, ರೋಟರಿ ಮತ್ತು ಮಾಹೆ ಜಂಟಿ ಯೋಜನೆಯಾಗಿ ಸಮುದಾಯಕ್ಕೆ ಸ್ಕಿನ್ ಬ್ಯಾಂಕ್ ನೀಡುತ್ತಿದೆ ಎಂದರು.

ಎಂ.ಜಿ. ರಾಮಚಂದ್ರ ಮೂರ್ತಿ, ಸದಾನಂದ ಚಾತ್ರ, ರಾಜಾರಾಮ್ ಭಟ್ ಮತ್ತು ಗಣೇಶ್ ನಾಯಕ್ ಸ್ಕಿನ್ ಬ್ಯಾಂಕ್ ಉಪಕರಣಗಳನ್ನು ಮಾಹೆಗೆ ಹಸ್ತಾಂತರಿಸಿದರು. ಮಾಹೆ ಪರವಾಗಿ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಉಪ ಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ. ವೆಂಕಟೇಶ್ ಮತ್ತು ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ. ಮುತ್ತಣ್ಣ ಸ್ವೀಕರಿಸಿದರು .

ಡಾ.ಎಂ.ಡಿ ವೆಂಕಟೇಶ್ ಮಾತನಾಡಿ, ಪ್ರಮುಖ ಸುಟ್ಟಗಾಯ ರೋಗಿಗಳಿಗೆ ಚರ್ಮವನ್ನು ಲಭ್ಯವಾಗಿಸುವ ಜವಾಬ್ದಾರಿ ಆಸ್ಪತ್ರೆಯ ಮೇಲಿದ್ದು, ಚರ್ಮ ದಾನ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂಧರು.

ಡಾ.ಎಚ್.ಎಸ್ ಬಲ್ಲಾಳ್ ಮಾತನಾಡಿ, ಪ್ಲಾಸ್ಟಿಕ್ ಸರ್ಜರಿ ವಿಭಾಗದಲ್ಲಿ 18 ಹಾಸಿಗೆಗಳ ಪೂರ್ಣ ಪ್ರಮಾಣದ ಬರ್ನ್ಸ್ ಘಟಕ ಇದೆ. ಇದಕ್ಕೆ ಪೂರಕವಾಗಿ ಅಗತ್ಯವಿದ್ದ ಸ್ಕಿನ್ ಬ್ಯಾಂಕ್ ನಿರ್ಮಾಣದಿಂದ ಸುಟ್ಟಗಾಯ ರೋಗಿಗಳಿಗೆ, ಚರ್ಮದ ಕಸಿ ಅಗತ್ಯವಿರುವವರಿಗೆ ಅನುಕೂಲವಾಗಲಿದೆ. ಅಂಗ ಮತ್ತು ಅಂಗಾಂಗ ದಾನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

ನವಿ ಮುಂಬೈನ ನ್ಯಾಷನಲ್ ಬರ್ನ್ಸ್ ಸೆಂಟರ್‌ ಮತ್ತು ಸ್ಕಿನ್ ಬ್ಯಾಂಕ್‌ನ ನಿರ್ದೇಶಕ ಡಾ.ಸುನಿಲ್ ಕೇಶ್ವಾನಿ ಇದ್ದರು. ರೋಟರಿ ಕ್ಲಬ್ ಮಣಿಪಾಲ ಟೌನ್ ಅಧ್ಯಕ್ಷ ಗಣೇಶ್ ನಾಯಕ್ ಸ್ವಾಗತಿಸಿದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ವಂದಿಸಿದರು. ಮಾಹೆ ಕಾರ್ಪೊರೆಟ್‌ ಸಂಬಂಧಗಳ ನಿರ್ದೇಶಕ ಡಾ.ರವಿರಾಜ ಕಾರ್ಯಕ್ರಮ ಪ್ರಸ್ತುತಪಡಿಸಿದರು. ರೋಟರಿ -ಮಾಹೆ ಸ್ಕಿನ್ ಬ್ಯಾಂಕ್ ಸಹಾಯವಾಣಿ 09686676564 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT