ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಂತ್ರೀಕೃತ ಮೀನುಗಾರಿಕೆಗೆ ಅವಕಾಶ ಕೊಡಿ: ಉಡುಪಿ ಮೀನುಗಾರರ ಕೋರಿಕೆ

ಜಿಲ್ಲಾಧಿಕಾರಿಗೆ ಮೀನುಗಾರಿಕಾ ಮುಖಂಡರಿಂದ ಮನವಿ
Last Updated 1 ಮೇ 2020, 15:37 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆ ಹಸಿರು ವಲಯದತ್ತ ದಾಪುಗಾಲಿಡುತ್ತಿದ್ದು ಮೇ 3ರ ನಂತರ ಯಾಂತ್ರೀಕೃತ ಮೀನುಗಾರಿಕೆಗೆ ಅವಕಾಶ ನೀಡಬೇಕು ಎಂದು ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಮೀನುಗಾರ ಮುಖಂಡರು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ ಮನವಿ ಸಲ್ಲಿಸಿದರು.

ಕೊರೊನಾ ಸೋಂಕು ವ್ಯಾಪಕವಾದ ಬಳಿಕ ಇಡೀ ದೇಶವೇ ಲಾಕ್‌ಡೌನ್‌ನಲ್ಲಿದ್ದು, ಕರಾವಳಿಯ ಆರ್ಥಿಕ ಬೆನ್ನೆಲುಬಾಗಿರುವ ಮೀನುಗಾರಿಕೆ ಸ್ಥಗಿತವಾಗಿ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಚೆಗೆ ನಾಡದೋಣಿ ಮೀನುಗಾರಿಕೆಗೆ ಅವಕಾಶ ಸಿಕ್ಕರೂ ಉದ್ಯಮ ಚೇತರಿಕೆ ಕಂಡಿಲ್ಲ. ಹಾಗಾಗಿ, ಯಾಂತ್ರೀಕೃತ ಬೋಟ್‌ಗಳ ಮೀನುಗಾರಿಕೆಗೆ ಅವಕಾಶ ನೀಡಬೇಕು ಎಂದು ಮುಖಂಡರು ಒತ್ತಾಯಿಸಿದರು.

ಪ್ರತಿದಿನ 40 ಯಾಂತ್ರೀಕೃತ ಮೀನುಗಾರಿಕಾ ಬೋಟುಗಳು ಸಮುದ್ರಕ್ಕೆ ಇಳಿಯುವುದು ಹಾಗೂ 40 ಬೋಟುಗಳು ಮೀನುಗಾರಿಕೆ ಮುಗಿಸಿ ಬಂದರಿಗೆ ಬರುವುದು. ಬಳಿಕ ಹಿಡಿದ ಮೀನನ್ನು ಹರಾಜು ಮಾಡದೆ ಮೀನುಗಾರಿಕಾ ಸಂಘದ ಮೂಲಕ ಗ್ರಾಹಕರಿಗೆ ಅಂತರವನ್ನು ಕಾಯ್ದುಕೊಂಡು ಮಾರಾಟ ಮಾಡಲು ಬಗ್ಗೆಯೂ ಚರ್ಚೆಯಾಯಿತು. ಸರ್ಕಾರದ ಮಾರ್ಗಸೂಚಿಯಂತೆ ಮೀನುಗಾರರು ನಡೆದುಕೊಳ್ಳಲಿದ್ದಾರೆ ಎಂದು ಸಭೆಯಲ್ಲಿ ಮುಖಂಡರು ಜಿಲ್ಲಾಧಿಕಾರಿಗೆ ಭರವಸೆ ನೀಡಿದರು.

ಸದ್ಯ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮೇ 3ರ ಬಳಿಕ ಲಾಕ್‌ಡೌನ್‌ ನಿಯಮದಲ್ಲಿ ಬದಲಾವಣೆಗಳಾದರೆ ಅವಕಾಶ ನೀಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ ತಿಳಿಸಿದರು.

ಸಭೆಯಲ್ಲಿ ಎಸ್‌ಪಿ ವಿಷ್ಣುವರ್ಧನ್‌, ದಕ್ಷಿಣ ಕನ್ನಡ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ,ಮೀನುಗಾರಿಕಾ ಇಲಾಖೆ ಉಪನಿರ್ದೇಶಕರಾದ ಕೆ. ಗಣೇಶ್ ಹಾಗೂ ಹೆಚ್ಚುವರಿ ಮೀನುಗಾರಿಕಾ ನಿರ್ದೇಶಕ ಕಿರಣ್‌, ಶಿವಕುಮಾರ್, ವಿವಿಧ ಮೀನುಗಾರಿಕಾ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು.

‘ಬಂದರಿನಲ್ಲಿ ಸಾರ್ವಜನಿಕ ಏಲಂ ಇಲ್ಲ’

ಮಲ್ಪೆಯಲ್ಲಿ 1,700ಕ್ಕೂ ಹೆಚ್ಚು ಯಾಂತ್ರೀಕೃತ ಮೀನುಗಾರಿಕಾ ಬೋಟ್‌ಗಳಿದ್ದು, ಮೀನುಗಾರಿಕೆಗೆ ಅವಕಾಶ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇವೆ. ಶುಕ್ರವಾರ ಮೀನುಗಾರಿಕಾ ಮುಖಂಡರು ಸಭೆ ನಡೆಸಿದ್ದು, ಅನ್ಯರಾಜ್ಯದ ಮೀನುಗಾರಿಕಾ ವಾಹನಗಳು ಬಂದರಿನ ಒಳಗೆ ಬರುವುದು ಬೇಡ, ಬಂದರಿನಲ್ಲಿ ಸಾರ್ವಜನಿಕ ಏಲಂ ಹಾಗೂ ಚಿಲ್ಲರೆ ಮೀನು ಮಾರಾಟ ಕೂಡ ಬೇಡ ಎಂಬ ತೀರ್ಮಾನಕ್ಕೆ ಬರಲಾಗಿದೆ. ಮೀನುಗಾರಿಕೆ ಮುಗಿಸಿ ಮರಳುವ ಬೋಟ್‌ಗಳು ಪ್ರತ್ಯೇಕ ಜಾಗದಲ್ಲಿ ನಿಲ್ಲಿಸಿ, ಅಲ್ಲಿಂದಲೇ ಮೀನನ್ನು ಮಾರಾಟ ಮಾಡುವ ವ್ಯವಸ್ಥೆ ಬಗ್ಗೆ ಚರ್ಚೆಯಾಗಿದೆ. ಜತೆಗೆ ಬೋಟ್‌ನ ಮಾಲೀಕರು ಖರೀದಿ ವೇಳೆ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದು ಮಲ್ಪೆ ಮೀನುಗಾರಿಕಾ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT