ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮೀನುಗಾರ ಮುಖಂಡರ ತರಾಟೆ

Published 15 ಫೆಬ್ರುವರಿ 2024, 16:21 IST
Last Updated 15 ಫೆಬ್ರುವರಿ 2024, 16:21 IST
ಅಕ್ಷರ ಗಾತ್ರ

ಉಡುಪಿ: ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದ ಮೀನುಗಾರ ಮುಖಂಡರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಸಭೆ ಆರಂಭವಾಗುತ್ತಿದ್ದಂತೆ ಮಲ್ಪೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವಿಳಂಬ ವಿಷಯವನ್ನು ಪ್ರಸ್ತಾಪಿಸಿದ ಮೀನುಗಾರ ಮುಖಂಡ ಕಿಶೋರ್ ಸುವರ್ಣ, ‘ದಶಕಗಳು ಕಳೆದರೂ ಮಲ್ಪೆಯಿಂದ ಉಡುಪಿಯವರೆಗೆ ಕೇವಲ 3.5 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲು ಜನಪ್ರತಿನಿಧಿಗಳಿಗೆ ಸಾಧ್ಯವಾಗಿಲ್ಲ. ನಗರಸಭೆ ಸದಸ್ಯರು, ಶಾಸಕರು, ಸಂಸದರು ಬಿಜೆಪಿ ಪಕ್ಷಕ್ಕೆ ಸೇರಿದ್ದು, ಕೇಂದ್ರದಲ್ಲೂ ಬಿಜೆಪಿ ಸರ್ಕಾರವೇ ಇದ್ದರೂ ರಸ್ತೆ ನಿರ್ಮಾಣ ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೆದ್ದಾರಿ ನಿರ್ಮಾಣಕ್ಕೆ ಸಮರ್ಪಕವಾಗಿ ಸರ್ವೆ ಕಾರ್ಯ ನಡೆದಿಲ್ಲ, ಭೂಮಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಿಲ್ಲ. ಮಲ್ಪೆಯ ಹೃದಯ ಭಾಗದಲ್ಲಿರುವ 900 ಚದರಡಿ ಕಟ್ಟಡಕ್ಕೆ ಕೇವಲ ₹61,904 ಪರಿಹಾರ ನಿಗದಿಪಡಿಸಲಾಗಿದೆ. ಕಲ್ಮಾಡಿಯಲ್ಲಿ ಭೂಮಾಲೀಕರಿಗೆ ಪರಿಹಾರದ ನೋಟಿಸ್‌ ಅನ್ನೇ ನೀಡಿಲ್ಲ. ಅಧಿಕಾರಿಗಳು ಬೇಜವಾಬ್ದಾರಿಯುತವಾಗಿ ಭೂ ಪರಿಹಾರ ನಿಗದಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.‌

ಚುನಾವಣೆ ಹತ್ತಿರ ಬರುತ್ತಿದ್ದಂತೆ ನಾಲ್ಕೈದು ಮರಗಳನ್ನು ಕಡಿಯುವ ನಾಟಕವಾಡುವ ಅಧಿಕಾರಿಗಳು ಚುನಾವಣೆ ಮುಗಿಯುತ್ತಿದ್ದಂತೆ ಕಾಮಗಾರಿ ನಿಲ್ಲಿಸುತ್ತಾರೆ. ದಶಕಗಳಿಂದಲೂ ಮಲ್ಪೆ ಜನರನ್ನು ಹಾಗೂ ಮೀನುಗಾರರನ್ನು ಮೂರ್ಖರನ್ನಾಗಿ ಮಾಡಲಾಗುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ರಾಜಕಾರಣಿಗಳ ಆಟ ನಡೆಯುವುದಿಲ್ಲ. ಜನರು ರೊಚ್ಚಿಗೇಳಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಬೈಪಾಸ್‌ನಿಂದ ಮಲ್ಪೆಯ ಬಂದರಿನವರೆಗೂ 3.7 ಕಿ.ಮೀ ಹೆದ್ದಾರಿ ನಿರ್ಮಾಣ ಮಾಡಬೇಕು ಎಂಬ ಒಪ್ಪಂದವಾಗಿದ್ದರೂ ಇದೀಗ ಬಂದರಿನಿಂದ 200 ಮೀಟರ್‌ ದೂರದಿಂದ ಹೆದ್ದಾರಿ ನಿರ್ಮಾಣ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬಂದರಿನೊಳಗೆ ಬಾರಿ ಸರಕು ಸಾಗಣೆ ವಾಹನಗಳು ಸಂಚರಿಸಲಿದ್ದು, ಉತ್ತಮ ರಸ್ತೆ ನಿರ್ಮಾಣ ಮಾಡಿದ್ದರೆ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅಳಲು ತೋಡಿಕೊಂಡರು.

ಅಧಿಕಾರಿಗಳು, ಶಾಸಕರು, ಸಂಸದರು ಐಶಾರಾಮಿ ವಾಹನಗಳಲ್ಲಿ ಉಡುಪಿಯಿಂದ ಮಲ್ಪೆ ಬರುವುದರಿಂದ ಗುಂಡಿಗಳ ಸಮಸ್ಯೆ ಅರಿವಿಗೆ ಬರುವುದಿಲ್ಲ. ಮಲ್ಪೆಯಿಂದ ಪ್ರತಿದಿನ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಪೋಷಕರಿಗೆ, ಮೀನು ಖರೀದಿಸಿ ದ್ವಿಚಕ್ರ ವಾಹನದಲ್ಲಿ ತೆರಳುವ ವ್ಯಾಪಾರಿಗಳಿಗೆ, ರಸ್ತೆ ಬದಿ ನಡೆದುಕೊಂಡು ಹೋಗುವ ಪಾದಚಾರಿಗಳು ಜೀವ ಭಯದಲ್ಲಿ ಓಡಾಡಬೇಕಿದೆ. ಕಣ್ಣೆದುರಿಗೆ ಹಲವರು ಅಪಘಾತಗಳಿಗೆ ತುತ್ತಾಗಿ ಜೀವನ ಕಳೆದುಕೊಳ್ಳುತ್ತಿದ್ದಾರೆ ಎಂದು ಸಮಸ್ಯೆ ಬಿಚ್ಚಿಟ್ಟರು.

ಕೊನೆಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಯಾವುದೇ ಯೋಜನೆಗಳ ಜಾರಿಗೆ ಸ್ಥಳೀಯರ ಸಹಕಾರ ಅಗತ್ಯ. ಜನಪ್ರತಿನಿಧಿಗಳು ನಿಂತು ಕಾಮಗಾರಿ ಮಾಡಲಾಗುವುದಿಲ್ಲ. ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕೆಲಸ ಮಾಡಬೇಕು. ಉಡುಪಿ–ಮಲ್ಪೆ ಹೆದ್ದಾರಿ ನಿರ್ಮಾಣ ಕಾಮಗಾರಿ ನಿರ್ಮಾಣ ಶೀಘ್ರ ಮುಗಿಸಲು ಈಗಲೂ ಬದ್ಧವಾಗಿದ್ದೇನೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಶಾಸಕ ಯಶ್‌ಪಾಲ್ ಸುವರ್ಣ, ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಉಪ ವಿಭಾಗಾಧಿಕಾರಿ ರಶ್ಮಿ, ನಗರಸಭೆ ಪೌರಾಯುಕ್ತರಾದ ರಾಯಪ್ಪ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಇದ್ದರು.

‘ಭರವಸೆಗಳಿಗೆ ಮರಳಾಗುವುದಿಲ್ಲ’

10 ವರ್ಷಗಳ ಹಿಂದೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸಂದರ್ಭ ಮಲ್ಪೆ ಬಂದರಿನಿಂದ ಉಡುಪಿವರೆಗೂ ಸುಸಜ್ಜಿತ ಹೆದ್ದಾರಿ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದೀರಿ. 5 ವರ್ಷಗಳ ಹಿಂದೆಯೂ ಮಲ್ಪೆ–ಉಡುಪಿ ರಸ್ತೆ ಕಾಮಗಾರಿ ಮುಗಿಸಿಕೊಡುವುದಾಗಿ ಹೇಳಿದ್ದೀರಿ. ಈಗ 2024ರ ಲೋಕಸಭಾ ಚುನಾವಣೆ ಬಂದಿರುವ ಹೊತ್ತಿನಲ್ಲಿ ಮತ್ತೆ ಭರವಸೆ ನೀಡಲು ಬಂದಿದ್ದೀರಿ. ಈ ಬಾರಿ ಭರವಸೆಗೆ ಮತದಾರರು ಮರಳಾಗುವುದಿಲ್ಲ ಎಂದು ಮೀನುಗಾರ ಮುಖಂಡ ಕಿಶೋರ್ ಸುವರ್ಣ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಮಾತಿನ ಚಕಮಕಿ

ಶೋಭಾ ಕರಂದ್ಲಾಜೆಯವರು ಸಂಸದರಾಗಿ 10 ವರ್ಷಗಳಾದರೂ ಒಮ್ಮೆಯೂ ಭೂಮಿ ಕಳೆದುಕೊಂಡವರ ಸಭೆ ಕರೆದಿಲ್ಲ ಜನರ ಸಮಸ್ಯೆ ಆಲಿಸಿಲ್ಲ ಎಂಬ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ತಾಳ್ಮೆ ಕಳೆದುಕೊಂಡ ಸಂಸದರು ‘ಸಭೆಯಲ್ಲಿ ಜನಪ್ರತಿನಿಧಿಯ ಜತೆ ಈ ರೀತಿ ಮಾತನಾಡುವುದು ಸರಿಯಲ್ಲ. ಪ್ರತಿಯೊಬ್ಬರಿಗೂ ವೈಯಕ್ತಿಕ ಗೌರವ ಇದ್ದು ಧಕ್ಕೆಯಾಗುವಂತೆ ಮಾತನಾಡಬೇಡಿ ಎಂದು ಸೂಚಿಸಿದರು. ಈ ಸಂದರ್ಭ ಮೀನುಗಾರ ಮುಖಂಡರು ಹಾಗೂ ಕೇಂದ್ರ ಸಚಿವರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಮಲ್ಪೆ–ಉಡುಪಿ ನಡುವಿನ 3.5 ಕಿ.ಮೀ ದೇಶದ ನಕ್ಷೆಯೊಳಗೆ ಇಲ್ಲವೇ ಎಂದು ಮಲ್ಪೆಯ ಜನ ಪ್ರಶ್ನಿಸುತ್ತಿದ್ದಾರೆ. ಅಧಿಕಾರಿಗಳೊಂದಿಗೆ ಜನಪ್ರತಿನಿಧಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಮತದಾರರಿಗೆ ಉತ್ತರ ಕೊಡಲಾಗದ ಪರಿಸ್ಥಿತಿ ಸ್ಥಳೀಯ ಜನಪ್ರತಿನಿಧಿಗಳಿಗೆ ಎದುರಾಗಿದೆ.
ಯೋಗೇಶ್‌, ನಗರಸಭೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT