ಬುಧವಾರ, ಡಿಸೆಂಬರ್ 8, 2021
28 °C
ನೇರವಾಗಿ ಖಾಸಗಿ ಆಸ್ಪತ್ರೆಯ ಸ್ಪೆಷಲ್‌ ವಾರ್ಡ್‌ಗೆ ದಾಖಲಾದರೆ ಬಿಲ್ ಕಟ್ಟಬೇಕು; ಡಿಎಚ್ಒ

‘ಕೋವಿಡ್‌ಗೆ ಉಚಿತ ಚಿಕಿತ್ಸೆ: ಗೊಂದಲ ಬೇಡ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕೋವಿಡ್–19 ಸೋಂಕಿತರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಎಪಿಎಲ್, ಬಿಪಿಎಲ್ ಬೇಧವಿಲ್ಲದೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ ವಿಚಾರದಲ್ಲಿ ಹರಡಿರುವ ವದಂತಿಗಳನ್ನು ಸಾರ್ವಜನಿಕರು ನಂಬಬಾರದು ಎಂದು ಡಿಎಚ್‌ಒ ಡಾ. ಸುಧೀರ್ ಚಂದ್ರ ಸೂಡ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ ಮಾತನಾಡಿ, ‘ಕೋವಿಡ್ ಪರೀಕ್ಷೆ, ಚಿಕಿತ್ಸೆ, ಬಿಲ್ ಕುರಿತು ಜನರಲ್ಲಿ ಸಂಶಯ, ಗೊಂದಲಗಳಿದ್ದು, ಸರಿಯಾದ ಮಾಹಿತಿ ನೀಡುವಂತೆ ಒತ್ತಾಯಿಸಿದಾಗ ಡಿಎಚ್‌ಒ ಉತ್ತರಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆ ಉಚಿತವಾಗಿದೆ. ಸೋಂಕಿತ ವ್ಯಕ್ತಿ ಜಿಲ್ಲಾಡಳಿತದ ಶಿಫಾರಸ್ಸಿನೊಂದಿಗೆ ಖಾಸಗಿ ಆಸ್ಪತ್ರೆಗೆ ದಾಖಲಾದರೆ ಅಲ್ಲಿಯೂ ಸಂಪೂರ್ಣ ಉಚಿತ ಚಿಕಿತ್ಸೆ ದೊರೆಯುತ್ತದೆ. ರೋಗಿಯೇ ಖಾಸಗಿ ಆಸ್ಪತ್ರೆಗೆ ತೆರಳಿ ಸಾಮಾನ್ಯ ವಾರ್ಡ್ ಬದಲು ಹೆಚ್ಚಿನ ಸೌಲಭ್ಯಗಳಿರುವ ವಾರ್ಡ್‌ ಪಡೆದರೆ ಹೆಚ್ಚುವರಿ ಬಿಲ್ ಭರಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.

ಸೋಂಕನ್ನು ಶೀಘ್ರ ಗುರುತಿಸಿದರೆ ಇತರರಿಗೆ ಹರಡುವುದನ್ನು ತಡೆಯಬಹುದು. ಅದಕ್ಕಾಗಿ ಆ್ಯಂಟಿಜಿನ್‌ ಪರೀಕ್ಷೆ ಮಾಡಲಾಗುತ್ತಿದ್ದು, 1 ಗಂಟೆಯಲ್ಲಿ ಫಲಿತಾಂಶ ಸಿಗಲಿದೆ. ಫಲಿತಾಂಶದಲ್ಲಿ ನೆಗೆಟಿವ್ ಬಂದರೂ, ರೋಗ ಲಕ್ಷಣಗಳಿದ್ದರೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಲಾಗುವುದು. ಪಾಸಿಟಿವ್ ಬಂದ ವ್ಯಕ್ತಿಗೆ ಕೂಡಲೇ ಚಿಕಿತ್ಸೆ ಆರಂಭಿಸಲಾಗುವುದು ಎಂದರು.

ಮಂಗಳೂರಿನ ಐಟಿ ಕಚೇರಿಯನ್ನು ಗೋವಾ ರಾಜ್ಯಕ್ಕೆ ಸ್ಥಳಾಂತರಿಸುವುದರಿಂದ ಅವಿಭಜಿತ ಜಿಲ್ಲೆಯ 4 ಲಕ್ಷಕ್ಕೂ ಅಧಿಕ ತೆರಿಗೆದಾರರಿಗೆ ಅನಾನುಕೂಲವಾಗಲಿದ್ದು, ಆದೇಶವನ್ನು ಹಿಂಪಡೆಯುವ ಕುರಿತು ನಿರ್ಣಯ ಕೈಗೊಳ್ಳಬೇಕು ಎಂದು ಸದಸ್ಯ ಜನಾರ್ಧನ ತೋನ್ಸೆ ಆಗ್ರಹಿಸಿದರು.

ಅರಣ್ಯ ವ್ಯಾಪ್ತಿಯಲ್ಲಿ ಈಗಾಗಲೇ ರಸ್ತೆಗಳಿದ್ದರೂ ಅಭಿವೃದ್ಧಿಗೊಳಿಸಲು ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸುತ್ತಿದೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಸ್ಥಳ ಪರಿಶೀಲನೆ ನಡೆಸುವುದಾಗಿ ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ತಿಳಿಸಿದರು.

ಪಡುಬಿದ್ರಿಯಲ್ಲಿ ರಸ್ತೆ ಮತ್ತು ಸೇತುವೆ ಕಾಮಗಾರಿ ವಿಳಂಬದ ಬಗ್ಗೆ ಸದಸ್ಯ ಶಶಿಕಂತ ಪಡುಬಿದ್ರಿ ಆಕ್ಷೇಪ ವ್ಯಕ್ತಪಡಿಸಿದರು. ಸಮಸ್ಯೆ ಬಗ್ಗೆ ಉತ್ತರಿಸಬೇಕಿದ್ದ ಅಧಿಕಾರಿಗಳು ಪದೇಪದೇ ಗೈರಾಗುತ್ತಿದ್ದು ಶಿಸ್ತು ಕ್ರಮ ಕೈಗೊಳ್ಳುವಂತೆ ಸದಸ್ಯೆ ಶಿಲ್ಪಾ ಸುವರ್ಣ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಡಯಾಲಿಸಿಸ್‌ಗೆ ಹೆಚ್ಚಿನ ಬೇಡಿಕೆ ಇದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಿನ ಯಂತ್ರಗಳನ್ನು ಅಳವಡಿಸಬೇಕು ಎಂದು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ ಆಗ್ರಹಿಸಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಸ್ಥಳಾವಕಾಶದ ಸಮಸ್ಯೆಯಿದ್ದು, ಬೈಂದೂರು ಬ್ರಹ್ಮಾವರ ಆಸ್ಪತ್ರೆಯಲ್ಲಿ ಹೊಸ ಯಂತ್ರ ಅಳವಡಿಸುವಂತೆ ಪ್ರಸ್ತಾವ ಸಲ್ಲಿಸಲಾಗಿದ್ದು, ಹೆಬ್ರಿ, ಕಾಪು ಆಸ್ಪತ್ರೆಗಳಲ್ಲೂ ಡಯಾಲಿಸಿಸ್ ಯಂತ್ರ ಅಳವಡಿಕೆಗೆ ಪ್ರಸ್ತಾವ ಸಲ್ಲಿಸುವುದಾಗಿ ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್ ತಿಳಿಸಿದರು.

ಉಡುಪಿ ಸೀರೆಗಳ ಉತ್ಪಾದನೆ, ಬಳಕೆಗೆ ಪ್ರೋತ್ಸಾಹ ನೀಡಲು ಮೈಸೂರು ದಸರಾ ಸೇರಿದಂತೆ ವಿವಿಧೆಡೆಗಳಲ್ಲಿ ಇಲಾಖೆಗಳು ಆಯೋಜಿಸುವ ವಸ್ತು ಪ್ರದರ್ಶನದಲ್ಲಿ ಉಡುಪಿ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ ತೆರೆಯಲು ಅವಕಾಶ ಮಾಡಿಕೊಡಬೇಕು ಎಂದು ಸದಸ್ಯೆ ರೇಷ್ಮಾ ಉದಯ ಶೆಟ್ಟಿ ಹೇಳಿದರು.

ಈ ಕುರಿತು ಇಲಾಖೆಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷ ದಿನಕರ ಬಾಬು ಸೂಚಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಜಿ. ಪುತ್ರನ್, ಉಪ ಕಾರ್ಯದರ್ಶಿ ಕಿರಣ್ ಫೆಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು