ಬುಧವಾರ, ನವೆಂಬರ್ 25, 2020
19 °C
ಕಾನೂನು ಅರಿವು ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್ ಭಟ್

ಲಿಂಗತ್ವ ಅಲ್ಪಸಂಖ್ಯಾತರು ಸಮಾನರು, ಬೇಧ ಸಲ್ಲದು: ಡಾ.ನವೀನ್ ಭಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಸಮಾಜದಲ್ಲಿ ಅಸಮಾನತೆಯಿಂದ ನೋಡುತ್ತಿರುವ ಪರಿಣಾಮ ಲಿಂಗತ್ವ ಅಲ್ಪಸಂಖ್ಯಾತರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ, ಅರಿವು ಮೂಡಿಸುವ ಕಾರ್ಯವಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ನವೀನ್ ಭಟ್ ಹೇಳಿದರು.

ಶನಿವಾರ ಉಡುಪಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರಥ್ಯ ಪಯಣ ಸಂಸ್ಥೆ, ಆಶ್ರಯ ಸಮುದಾಯ ಸಂಘಟನೆ ಸಹಯೋಗದಲ್ಲಿ ನಡೆದ ಲಿಂಗತ್ವ ಅಲ್ಪಸಂಖ್ಯಾತರ ಜಿಲ್ಲಾ ಮಟ್ಟದ ವಕಾಲತ್ತು ಮತ್ತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾನೂನಿನ ಅಡಿಯಲ್ಲಿ ಎಲ್ಲರೂ ಸಮಾನರು. ಸಮಾಜದಲ್ಲಿರುವ ಎಲ್ಲರಿಗೂ ಸಮಾನ ಸ್ಥಾನಮಾನವಿದ್ದು, ಲಿಂಗತ್ವಬೇಧ ಸಲ್ಲದು. ಜಿಲ್ಲೆಯಲ್ಲಿ ಐವರು ಲಿಂಗತ್ವ ಅಲ್ಪಸಂಖ್ಯಾತರಿಗೆ ಮಾತ್ರ ವಸತಿ ನಿವೇಶನ ಸಿಕ್ಕಿದ್ದು, ಮುಂದೆ ಸರ್ಕಾರದಿಂದ ನೀಡುವ ನಿವೇಶನವನ್ನು ಆದ್ಯತೆ ಮೇರೆಗೆ  ಸಮುದಾಯಕ್ಕೆ ನೀಡಲಾಗುವುದು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ನಿರೀಕ್ಷಕಿ ಚಂದ್ರಿಕಾ ‘ಮೈತ್ರಿ’ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಲಿಂಗತ್ವ ಅಲ್ಪಸಂಖ್ಯಾತರನ್ನು ಮುಖ್ಯ ವಾಹಿನಿಗೆ ತರಲು ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಸ್ವಉದ್ಯೋಗ ತರಬೇತಿ, ಶಿಕ್ಷಣ ಹಾಗೂ ಸ್ವಾವಲಂಬಿಯಾಗಿ ಬದುಕಲು ಬೆಂಬಲ ಹಾಗೂ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಬಡ್ಡಿರಹಿತ ಸಾಲದ ಸೌಲಭ್ಯ ಕೂಡ ನೀಡಲಾಗುತ್ತದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜಿಲ್ಲಾ ಬಾಲನ್ಯಾಯ ಮಂಡಳಿಯ ಸದಸ್ಯೆ ಅಮೃತ ಕಲಾ ಮಾತನಾಡಿ, ಜಿಲ್ಲೆಯಲ್ಲಿ 85 ಲಿಂಗತ್ವ ಅಲ್ಪಸಂಖ್ಯಾತರಿದ್ದು, ನೋಂದಣಿ ಮಾಡಿಸಿಕೊಂಡವರ ಸಂಖ್ಯೆ ಬಹಳ ಕಡಿಮೆ ಇದೆ. ಎಲ್ಲರೂ ನೋಂದಣಿ ಮಾಡಿಸಿಕೊಳ್ಳಬೇಕು. ಲಿಂಗತ್ವ ಅಲ್ಪ ಸಂಖ್ಯಾತರು ಸಂವಿಧಾನಾತ್ಮಕವಾಗಿ ಎಲ್ಲ ಹಕ್ಕುಗಳನ್ನು ಹೊಂದಿದ್ದು, ಸರ್ಕಾರದ ಸವಲತ್ತುಗಳನ್ನು ಪಡೆಯಲು ನೋಂದಣಿ ಮಾಡಿಸಿಕೊಂಡು ಗುರುತಿನ ಚೀಟಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಲಿಂಗತ್ವ ಅಲ್ಪಸಂಖ್ಯಾತರಿಗೆ ಸಮಸ್ಯೆಗಳು ಎದುರಾದರೆ, ಸಮುದಾಯದಲ್ಲಿ ಅವಹೇಳನ ಮಾಡಿದರೆ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಕಾನೂನಿನ ಅಡಿಯಲ್ಲಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಮಾಜ ಸೇವಕ ವಿಶುಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮನಃಶಾಸ್ತ್ರಜ್ಞೆ ಜಯಶ್ರೀ ಭಟ್, ಮಂಗಳೂರು ನವ ಸಹಜ ಸಮುದಾಯ ಸಂಘಟನೆಯ ಅಧ್ಯಕ್ಷ ನಿಖಿಲ್, ಸಮಾಜ ಹೋರಾಟಗಾರ್ತಿ ಸರೋಜಾ, ಸಮುದಾಯ ಹೋರಾಟಗಾರ್ತಿ ಸವಿತಾ ಉಪಸ್ಥಿತರಿದ್ದರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.