ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣನೂರಿನಲ್ಲಿ ವಿಟ್ಲಪಿಂಡಿ ಉತ್ಸವ ವೈಭವ

ಸುವರ್ಣ ರಥದಲ್ಲಿ ಮೃಣ್ಮಯ ಮೂರ್ತಿಯ ಮೆರವಣಿಗೆ; ಮಧ್ವ ಸಾರೋವರದಲ್ಲಿ ವಿಸರ್ಜನೆ
Last Updated 24 ಆಗಸ್ಟ್ 2019, 14:20 IST
ಅಕ್ಷರ ಗಾತ್ರ

ಉಡುಪಿ: ಕಣ್ಣು ಹಾಯಿಸಿದಷ್ಟೂ ಭಕ್ತಸಾಗರ. ಮುಗಿಲು ಮುಟ್ಟಿದ ಭಕ್ತರ ಹರ್ಷೋದ್ಘಾರ. ರಥಬೀದಿಯ ತುಂಬೆಲ್ಲ ಸಾಂಸ್ಕೃತಿಕ ಕಲರವ...ಶ್ರೀಕೃಷ್ಣಮಠದಲ್ಲಿ ಶನಿವಾರ ವಿಟ್ಲಪಿಂಡಿ ಉತ್ಸವದಲ್ಲಿ ಕಂಡುಬಂದ ದೃಶ್ಯಗಳಿವು.

ಹೊತ್ತು ಏರುತ್ತಿದ್ದಂತೆ ರಥಬೀದಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಭಕ್ತ ಸಾಗರ ಹರಿದು ಬರಲು ಆರಂಭಿಸಿತು. ಮಧ್ಯಾಹ್ನದ ವೇಳೆಗೆ ರಥಬೀದಿ ತುಂಬಿಹೋಯಿತು. ಅಲ್ಲಿ ಜಾಗ ಇಲ್ಲದೆ ಅಷ್ಟಮಠಗಳ ಮಾಳಿಗೆಗಳು ಸಹ ಭಕ್ತರಿಂದ ಭರ್ತಿಯಾದವು. ಹೊರ ಜಿಲ್ಲೆ, ರಾಜ್ಯ, ವಿದೇಶಿ ಭಕ್ತರು ವೈಭವದ ವಿಟ್ಲಪಿಂಡಿ ಉತ್ಸವಕ್ಕೆ ಸಾಕ್ಷಿಯಾದರು.

ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ರಥಬೀದಿಗೆ ಆಗಮಿಸಿದ ಪರ್ಯಾಯ ಪಲಿಮಾರು ವಿದ್ಯಾಧೀಶ ಶ್ರೀಗಳು, ಅದಮಾರು ಮಠದ ಕಿರಿಯ ಯತಿ ಈಶಪ್ರಿಯ ಶ್ರೀಗಳು ಸುವರ್ಣ ರಥದ ಮೇಲೆ ಕೃಷ್ಣನ ಮೃಣ್ಮಯ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಬಳಿಕ ಪೂಜೆ ನೆರವೇರಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು.

ರಥ ಮುಂದಕ್ಕೆ ಸಾಗುತ್ತಿದ್ದಂತೆ ಭಕ್ತರಜಯಘೋಷ ಮುಗಿಲು ಮುಟ್ಟಿತು. ಗೋವಿಂದನ ನಾಮಸ್ಮರಣೆ ಮಾಡುತ್ತಾ ರಥವನ್ನು ಎಳೆಯುತ್ತಾ ಮುಂದೆ ಸಾಗಿದರು.

ನವರತ್ನ ರಥದಲ್ಲಿ ಅನಂತೇಶ್ವರ ಹಾಗೂ ಚಂದ್ರಮೌಳೇಶ್ವರನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಎರಡೂ ರಥಗಳನ್ನು ರಥಬೀದಿಯಲ್ಲಿ ಒಂದು ಸುತ್ತು ಮೆರವಣಿಗೆ ಮಾಡಲಾಯಿತು. ಈ ದೃಶ್ಯವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.

ಗೊಲ್ಲರ ಕಲರವ

ರಥ ಸಾಗಿ ಬರುವ ಹಾದಿಯಲ್ಲಿ 14 ಮೊಸರಿನ ಕುಡಿಕೆಗಳನ್ನು ಕಟ್ಟಲಾಗಿತ್ತು. ಗೊಲ್ಲರ ತಂಡ ಉದ್ದನೆಯ ಕೋಲುಗಳನ್ನು ಹಿಡಿದು ಗುರಿ ಮಾಡಿ ಮಡಿಕೆಯನ್ನು ಒಡೆಯುತ್ತಿದ್ದಂತೆ ಭಕ್ತರು ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಿದ್ದರು.

ಮಠದ ಆನೆ ಮೆರವಣಿಗೆಯ ಸಾರಥ್ಯ ವಹಿಸಿ ಮುಂದೆ ಸಾಗಿದರೆ, ಮರಗಾಲು ವೇಷಧಾರಿ, ಮಹಿಳಾ ಕೋಲಾಟ ತಂಡ, ಭಜನಾ ತಂಡ, ಚಂಡೆ ವಾದ್ಯ, ಹುಲಿ ಕುಣಿತ ತಂಡ ಹೀಗೆ ಜಾನಪದ ಕಲಾ ತಂಡಗಳು ಪ್ರದರ್ಶನ ನೀಡುತ್ತಾ ಸಾಗಿದವು.

ರಥಬೀದಿಯ ಸುತ್ತ ಒಂದು ಸುತ್ತು ರಥ ಸಾಗಿಬಂದ ನಂತರ ಕೃಷ್ಣನ ಮೃಣ್ಮಯ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT