ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರಾ. ಪಂ. ಸಮಗ್ರ ಅಭಿವೃದ್ಧಿ ಗುರಿ ಸಾಧಿಸಿರಿ’

ಶಿಕ್ಷಣ ಕಾರ್ಯಪಡೆಗಳ ಸದಸ್ಯರ ಒಂದು ದಿನದ ತರಬೇತಿ
Last Updated 4 ಜುಲೈ 2021, 7:47 IST
ಅಕ್ಷರ ಗಾತ್ರ

ಬೈಂದೂರು: ‘ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ನಾಗರಿಕ ಸೌಲಭ್ಯಗಳ ಸೃಷ್ಟಿಗಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ, ಸಮಗ್ರ ಅಭಿವೃದ್ಧಿ ಗುರಿ ಸಾಧಿಸಬೇಕು’ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಹೇಳಿದರು.

ಇಲಾಖೆ ಶನಿವಾರ ಯು ಟ್ಯೂಬ್ ಮೂಲಕ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಶಿಕ್ಷಣ ಕಾರ್ಯಪಡೆಗಳ ಸದಸ್ಯರ ಒಂದು ದಿನದ ರಾಜ್ಯ ವ್ಯಾಪಿ ತರಬೇತಿಯಲ್ಲಿ ಅವರು ಪ್ರಾಸ್ತಾವಿಕ ಮಾತನಾಡಿದರು.

ಗ್ರಾಮ ಪಂಚಾಯಿತಿಗಳು ಕಾರ್ಯ ಸೂಚಿಯಲ್ಲಿ ಮಹಿಳೆಯರ, ಮಕ್ಕಳ ಮತ್ತು ಹಿರಿಯ ನಾಗರಿಕರ ರಕ್ಷಣೆ ಹಾಗೂ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಗಾಂಧೀಜಿ ಅವರ ಗ್ರಾಮ ಸ್ವರಾಜ್ ಕನಸು ನನಸು ಮಾಡುವ ಹೊಣೆ ನಮ್ಮ ಮೇಲಿದೆ. ಇದೇ ವೇಳೆ ಕೋವಿಡ್ ಸೋಂಕಿನ ಕಾರಣ ಮಕ್ಕಳು, ಮಹಿಳೆಯರು, ಹಿರಿಯರು ವಿವಿಧ ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.

ಶಾಲೆ ತ್ಯಜಿಸಿದ ಮಕ್ಕಳನ್ನು ಶಾಲೆಗೆ ಕರೆತರುವ, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯುವ, ಹಿರಿಯ ನಾಗರಿಕರಿಗೆ ಸಾಂತ್ವನ ನೀಡುವ ಕೆಲಸದಲ್ಲಿ ಗ್ರಾಮ ಪಂಚಾಯಿತಿಗಳು ಸಕ್ರಿಯವಾಗಿ ತೊಡಗಿಕೊಳ್ಳಬೇಕು. ಪರಿಣತರು ಇವುಗಳಿಗೆ ಸಂಬಂಧಿಸಿದ ವಿಷಯಗಳನ್ನು ಇಂದಿನ ತರಬೇತಿಯಲ್ಲಿ ತಿಳಿಸಿ ಕೊಡುತ್ತಾರೆ. ಚಾಚೂತಪ್ಪದೆ ಆಚರಣೆಗೆ ತರುವಂತೆ ಸಲಹೆ ನೀಡಿದರು.

ಬಳಿಕ ನಡೆದ ತರಬೇತಿಯಲ್ಲಿ ಇಂಟರ್‌ ನ್ಯಾಷನಲ್ ಜಸ್ಟೀಸ್ ಮಿಷನ್ ಸದಸ್ಯ ವಿಲಿಯಂ ಕ್ರಿಸ್ಟೂಫರ್, ಬೆಂಗಳೂರಿನ ಚೈಲ್ಡ್ ರೈಟ್ಸ್ ಟ್ರಸ್ಟ್‌ ವಿಷಯ ತಜ್ಞ ವಾಸುದೇವ ಶರ್ಮ, ಪಂಚಾಯತ್ ರಾಜ್ ಆಯುಕ್ತೆ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಮನಃಶಾಸ್ತ್ರಜ್ಞೆ ಡಾ. ಇಂದಿರಾ ಜೈಪ್ರಕಾಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಉಪ ನಿರ್ದೇಶಕಿ ಡಾ. ರಜನಿ ಪಾರ್ಥಸಾರಥಿ, ಸಮಗ್ರ ಶಿಶುರಕ್ಷಣಾ ಯೋಜನೆ ನಿರ್ದೇಶಕಿ ಪಲ್ಲವಿ ಅಕುರಾತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರಕ್ಷಣಾಧಿಕಾರಿ ಲತಾ ಕೆ. ಎಚ್, ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭೂಬಾಲನ್ ಟಿ. ಸಂಬಂಧಿತ ವಿಷಯಗಳ ಮಾಹಿತಿ ನೀಡಿದರು.

ಮೈಸೂರಿನ ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ನಿರ್ದೇಶಕಿ ಕೆ. ಎಂ. ಗಾಯತ್ರಿ ಸ್ವಾಗತಿಸಿದರು.

ಸಂಶೋಧನಾಧಿಕಾರಿ ದೀಪಾ ಎನ್. ನಿರ್ವಹಿಸಿದರು. ಬೈಂದೂರು ವ್ಯಾಪ್ತಿ ಎಲ್ಲ ಗ್ರಾಮ ಪಂಚಾಯಿತಿ ಶಿಕ್ಷಣ ಕಾರ್ಯಪಡೆ ಸದಸ್ಯರು ಪಂಚಾಯಿತಿಗಳಲ್ಲಿ ತರಬೇತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT