ಉಡುಪಿ: ಪೂಜೆ, ಪುನಸ್ಕಾರ, ಹೋಮ, ಹವನಗಳು ಮನುಷ್ಯನನ್ನು ಅಲೌಕಿಕ ಬದುಕಿನತ್ತ ಮುಖ ಮಾಡಿಸುತ್ತವೆ ಎಂದು ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಮಣಿಪಾಲದ ಶಿವಪಾಡಿ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗದ ಅಂಗವಾಗಿ ಶನಿವಾರ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಅಧರ್ಮದಿಂದ ಧರ್ಮದೆಡೆಗೆ, ಅಸತ್ಯದಿಂದ ಸತ್ಯದೆಡೆಗೆ ಮನುಕುಲ ಸಾಗಬೇಕಾದರೆ ಅನಂತ ಕಾಲದ ಆಧ್ಯಾತ್ಮಿಕ ಪಯಣದತ್ತ ಸಾಗಬೇಕಾಗಿದೆ.
ಹಲವು ಸಂಸ್ಕೃತಿಗಳ ತವರಾಗಿರುವ ಭಾರತದಲ್ಲಿ ಹಿಂದೂಗಳು ನೀರು, ಬೆಂಕಿ, ಗಾಳಿಯಲ್ಲೂ ದೇವರ ಸಾನಿಧ್ಯವನ್ನು ಕಂಡಕೊಂಡು ಪೂಜಿಸುತ್ತಿದೆ. ಧಾರ್ಮಿಕತೆ ಹಾಗೂ ಆಧ್ಯಾತ್ಮ ಜೀವನದ ಪ್ರಮುಖ ಭಾಗಗಳು ಎಂದರು.
ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್ ಮಾತನಾಡಿ, ಧರ್ಮಕಾರ್ಯಗಳ ಮೂಲಕ ಧರ್ಮದ ಜಾಗೃತಿ, ರಾಷ್ಟ್ರಾಭಿಮಾನ ಮೂಡಿಸುವ, ಹಿಂದೂಗಳನ್ನು ಒಗ್ಗೂಡಿಸುವ ಕಾರ್ಯ ಆಗಬೇಕಿದೆ. ಪ್ರಕೃತಿಯನ್ನು ಆರಾಧಿಸುವ ಹಾಗೂ ಸಹಬಾಳ್ವೆ ನಡೆಸುವ ಗುಣ ಬೆಳೆಸಿಕೊಳ್ಳಬೇಕಿದೆ ಎಂದರು.
ದೇಶದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದರೆ ಪೋಷಕರು ಮಕ್ಕಳಿಗೆ ಸಂಸ್ಕಾರ ಯುತ ಶಿಕ್ಷಣ ನೀಡುವುದರ ಜತೆಗೆ ದೇಶಭಕ್ತಿಯನ್ನು ಜಾಗೃತಿಗೊಳಿಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ದಿವಾಕರ ಭಟ್ ಮಾತನಾಡಿ, ಯಜ್ಞ ಯಾಗಾದಿಗಳು ನಡೆಯುವ ಸ್ಥಳದಲ್ಲಿದ ದೇವರ ಸಾನಿಧ್ಯ ಇರುತ್ತದೆ ಎಂಬುದು ಪೂರ್ವಜರ ನಂಬಿಕೆ. ಮಹಾಯಾಗದಲ್ಲಿ ಭಾಗವಹಿಸಿದ ಭಕ್ತರ ಸಮಸ್ಯೆಗಳು ಪರಿಹಾರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ ಅಪರೂಪದ ಹಾಗೂ ಕಠಿಣವಾಗಿರುವ ಅತಿರುದ್ರ ಮಹಾಯಾಗವನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಮಣಿಪಾಲದ ಶಿವಪಾಡಿಯ ಉಮಾ ಮಹೇಶ್ವರ ದೇವಸ್ಥಾನ ಸಹಸ್ರ ಸಂಖ್ಯೆಯಲ್ಲಿ ಭಕ್ತರನ್ನು ಸಳೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಕ್ಷೇತ್ರ ಪ್ರಸಿದ್ಧಿ ಪಡೆಯುತ್ತಿದೆ ಎಂದರು.
ಗೋಸ್ವಾಲ್ ಸಂಸ್ಥೆಯ ಯೋಗ ಹಾಗೂ ಆಯುರ್ವೇದ ತಜ್ಞ ತನ್ಮಯ್ ಗೋಸ್ವಾಮಿ ಮಾತನಾಡಿ, ಮನುಷ್ಯನಿಗೆ ಧಾರ್ಮಿಕ ದೃಷ್ಟಿಕೋನದ ಜತೆಗೆ ವೈದ್ಯಕೀಯ ಹಾಗೂ ಸಾಮಾಜಿಕ ದೃಷ್ಟಿಕೋನವೂ ಅಗತ್ಯ. ಯೋಗ, ಆಯುರ್ವೇದದ ಜ್ಞಾನ ಹಾಗೂ ಬಳಕೆ ಹೆಚ್ಚು ಮುನ್ನಲೆಗೆ ಬರಬೇಕು ಎಂದರು.
ಉಡುಪಿ ಶಾಸಕ ರಘುಪತಿ ಭಟ್, ಉದ್ಯಮಿ ರಘುಪ್ರಸಾದ್ ಪ್ರಭು, ಪ್ರಭಾಕರ ನಾಯಕ್, ಮಹಾಯಾಗ ಸಮಿತಿಯ ಸಂಚಾಲಕ ನಾರಾಯಣ ಶೆಣೈ, ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಶ್ ಠಾಕೂರ್ ವೇದಿಕೆಯಲ್ಲಿ ಇದ್ದರು.
ಗಗನ್ ಗಾಂವ್ಕರ್, ಸುನಿತಾ ಭಟ್ ತಂಡದಿಂದ ಭಕ್ತಿ ಗಾಯನ ಕಾರ್ಯಕ್ರಮ ನಡೆಯಿತು. ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.