ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಕುಲ: ಆನ್‌ಲೈನ್‌ ಶಿಕ್ಷಣ, ವಿದ್ಯಾರ್ಥಿ ಸಂವಹನ

ಕುಂದಾಪುರ: ಶಿಕ್ಷಣ ಕ್ಷೇತ್ರದಲ್ಲೊಂದು ವಿನೂತನ ಪ್ರಯೋಗ
Last Updated 15 ಮೇ 2020, 14:50 IST
ಅಕ್ಷರ ಗಾತ್ರ

ಕುಂದಾಪುರ: ಕೊರೊನಾ ಲಾಕ್‌ಡೌನ್‌ನಿಂದ ಕಳೆದೆರಡು ತಿಂಗಳಿಂದ ಮನೆಯಲ್ಲಿ ರಜಾದ ಮಜಾದಲ್ಲಿರುವ ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳಿಂದ ವಿಮುಖವಾಗಬಾರದು ಎನ್ನುವ ಕಾರಣಕ್ಕಾಗಿ ಇಲ್ಲಿನ ವಕ್ವಾಡಿಯ ಗುರುಕುಲ ಪಬ್ಲಿಕ್‌ ಸ್ಕೂಲ್‌ನ ಆಡಳಿತ ಮಂಡಳಿ ಆಧುನಿಕ ತಂತ್ರಜ್ಞಾನದ ನೆರವಿನೊಂದಿಗೆ ಆನ್‌ಲೈನ್‌ ಶಿಕ್ಷಣದ ಮೂಲಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಂವಹನಕ್ಕೆ ವೇದಿಕೆ ಒದಗಿಸಿದೆ.

ಪೋಷಕರು ಹಾಗೂ ಶಿಕ್ಷಕರ ನಡುವೆ ವಿದ್ಯಾರ್ಥಿಗಳ ದೈನಂದಿನ ಚಟುವಟಿಕೆ ಮಾಹಿತಿ ಹಂಚಿಕೆಯಾಗಬೇಕು ಎನ್ನುವ ಕಾರಣಕ್ಕಾಗಿ ‘ಡೈಲಿ ಡೈರಿ’ ಎನ್ನುವ ಪ್ರಯೋಗಕ್ಕೆ ಮುಂದಾಗಿ ಯಶಸ್ಸು ಸಾಧಿಸಿದ್ದ ಈ ಸಂಸ್ಥೆ, ಈವರೆಗೂ ಶಿಕ್ಷಣ, ಅಭ್ಯಾಸಕ್ಕಾಗಿ ಹೊಸ ಪ್ರಯೋಗಗಳನ್ನು ಮಾಡಿ ಸೈ ಎನಿಸಿಕೊಂಡಿದೆ. ಇದೀಗ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಆನ್‌ಲೈನ್‌ ಶಿಕ್ಷಣ ಸಂವಹನ ಆರಂಬಿಸುವ ಮೂಲಕ ಇನ್ನೊಂದು ಪ್ರಯೋಗಕ್ಕೆ ಅಣಿಯಾಗಿದೆ. ಬೆಂಗಳೂರಿನ ನೆಕ್ಸ್ಟ್ ಎಲಿಮೆಂಟ್ ಪ್ರೈವೇಟ್ ಲಿಮಿಟೆಡ್ ಸಾಫ್ಟ್‌ವೇರ್‌ ಕಂಪನಿಯ ಸಹಕಾರದಲ್ಲಿ ‘ಗುರುಕುಲ ಸ್ಕೂಲ್ ಎಲಿಮೆಂಟ್’ ಹೆಸರಿನ ಸಾಫ್ಟ್‌ವೇರ್‌ ತಯಾರಿಸಿ, ಅದರ ಆ್ಯಪ್‌ ಮೂಲಕ ಸಂಸ್ಥೆಯ ವಿದ್ಯಾರ್ಥಿಗಳಿಗೆ ತರಗತಿ ಆರಂಭಿಸಿದೆ.

ಮೇ2 ರಿಂದ ಪದವಿ ಪೂರ್ವ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ತರಗತಿಗಳು ಪ್ರಾರಂಭವಾಗಿದೆ. ಮುಂದೆ 1ರಿಂದ 7ನೇ ತರಗತಿಯವರಿಗೂ ತರಗತಿ ಆರಂಭಿಸುವ ಗುರಿ ಇದೆ. ಬೆಳಿಗ್ಗೆ 8.30 ರಿಂದ ಆರಂಭಗೊಳ್ಳುವ ತರಗತಿ ಸಂಜೆ 4 ಗಂಟೆಗೆ ಮುಕ್ತಾಯವಾಗಲಿದೆ. ಪ್ರತೀ ವಿಷಯಕ್ಕೂ 1ಗಂಟೆ ಅವಧಿ ನಿಗದಿ ಪಡಿಸಲಾಗಿದೆ. ಪಾಠ ಮಾಡುವ ವೇಳೆ ವಿದ್ಯಾರ್ಥಿಗಳಿಗೆ ಸಂದೇಹಗಳಿದ್ದಲ್ಲಿ ತಾವು ವೀಕ್ಷಣೆ ಮಾಡುವ ಉಪಕರಣದ ಕ್ಯಾಮೆರಾ ಮೂಲಕ ಸಂಜ್ಞೆಯನ್ನು ಮಾಡುವುದರ ಮೂಲಕ ಶಿಕ್ಷಕರನ್ನು ಆಕರ್ಷಿಸಿ ಸಂದೇಹಗಳನ್ನು ಬಗೆಹರಿಸುವುದು, ಮಾಹಿತಿ ಸಂವಹನಕ್ಕೆ ಆದ್ಯತೆ ನೀಡಲಾಗಿದೆ.

ವರ್ಚುವಲ್‌ ಕ್ಲಾಸ್‌ ರೂಂ ರೀತಿಯಲ್ಲಿ ವಿದ್ಯಾರ್ಥಿಗಳ ಪೋಷಕರ ಮೊಬೈಲ್‌, ಲಾಪ್‌ಟಾಪ್‌, ಟ್ಯಾಬ್‌, ಡೆಸ್ಕ್‌ಟಾಪ್‌ ಗಳಿಗೆ ಅವರವರ ಆಸಕ್ತಿಗೆ ಅನುಗುಣವಾಗಿ ಆ್ಯಪ್‌ ಇನ್‌ಸ್ಟಾಲ್‌ ಮಾಡಲಾಗಿದೆ. ಗರಿಷ್ಠ 40 ವಿದ್ಯಾರ್ಥಿಗಳು ಏಕಕಾಲದಲ್ಲಿ ಲಾಗ್‌ ಇನ್‌ ಆಗಲು ಅವಕಾಶ ಕಲ್ಪಿಸಲಾಗಿದೆ. ರಝೆಯ ಕಾರಣದಿಂದ ಬೆಂಗಳೂರು, ಬೆಳಗಾವಿ, ವಿಜಯಪುರ, ಶಿಕಾರಿಪುರ, ಬೈಲ್‌ಹೊಂಗಲ, ಶಿವಮೊಗ್ಗ, ಚೆನ್ನಗಿರಿ ಹಾಗೂ ವಿದೇಶದಲ್ಲಿ ಇರುವ ವಿದ್ಯಾರ್ಥಿಗಳು ತಪ್ಪದೇ ಪಾಠಗಳನ್ನು ಕೇಳುತ್ತಿದ್ದಾರೆ. ಶಿಕ್ಷಕರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದು, ಪ್ರಾಂಶುಪಾಲರು ವ್ಯವಸ್ಥೆಯ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ.

ಇ–ತರಗತಿಯ ಪೂರ್ಣ ವೆಚ್ಚವನ್ನು

ಆಡಳಿತ ಮಂಡಳಿ ಭರಿಸಿದೆ

ಕೋವಿಡ್‌ ಕಾರಣದಿಂದಾಗಿ ವಿದ್ಯಾರ್ಥಿಗಳು ಪಠ್ಯ ಕ್ರಮದಿಂದ ವಂಚಿತರಾಗಬಾರದು ಎನ್ನುವ ಕಾಳಜಿಯಿಂದ ಈ ತರಗತಿಗಳನ್ನು ಆರಂಭಿಸಲಾಗಿದೆ. ಇದಕ್ಕಾಗಿ ದುಬಾರಿ ವೆಚ್ಚದ ತಂತ್ರಜ್ಞಾನವನ್ನು ಬಳಸಿಕೊಂಡಿದ್ದರೂ, ವಿದ್ಯಾರ್ಥಿಗಳ ಪೋಷಕರಿಗೆ ಹೊರೆಯಾಗದಂತೆ ಇದರ ಸಂಪೂರ್ಣ ವೆಚ್ಚವನ್ನು ಆಡಳಿತ ಮಂಡಳಿ ಭರಿಸಿದೆ ಎಂದು ಬಾಂಡ್ಯಾ ಎಜುಕೇಶನ್‌ ಟ್ರಸ್ಟ್‌ನಜಂಟಿ ಆಡಳಿತ ಟ್ರಸ್ಟಿ ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT