ಸೋಮವಾರ, ಏಪ್ರಿಲ್ 12, 2021
30 °C
ಡಾ.ಗುರುರಾಜ ಭಟ್‌ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿವ ಶ್ರೀನಿವಾಸ ಪೂಜಾರಿ

‘ದೇಶ ಮೊದಲು’ ಎಂಬ ರಾಷ್ಟ್ರಪ್ರೇಮ ಜಾಗೃತವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ರಾಮಮಂದಿರ ನಿರ್ಮಾಣಕ್ಕೆ ಕೈಹಾಕಿದರೆ ದೇಶದಲ್ಲಿ ರಕ್ತದೋಕುಳಿ ಹರಿಯಲಿದೆ ಎಂದು ಎಚ್ಚರಿಕೆ ನೀಡಿದವರೆಲ್ಲ, ರಾಮಮಂದಿರ ತೀರ್ಪು ಹೊರಬರುತ್ತಿದ್ದಂತೆ ರಾಗ ಬದಲಿಸಬೇಕಾಯಿತು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದರು.

ನಗರದ ವಿದ್ಯೋದಯ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ಪುರಾತತ್ವ ತಜ್ಞ ಕೆ.ಕೆ.ಮೊಹಮ್ಮದ್ ಅವರಿಗೆ ಪಾದೂರು ಡಾ.ಗುರುರಾಜ ಭಟ್‌ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಸಚಿವರು, ರಾಮಮಂದಿರ ನಿರ್ಮಾಣಕ್ಕೆ ಪೂರಕವಾಗಿ ಪುರಾತತ್ವ ಇಲಾಖೆ ಒದಗಿಸಿದ ದಾಖಲೆಗಳ ಆಧಾರದ ಮೇಲೆ ಸುಪ್ರೀಂಕೋರ್ಟ್ ರಾಮಮಂದಿರ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿತು. ಇದರ ಹಿಂದೆ ಪುರಾತತ್ವ ಶಾಸ್ತ್ರಜ್ಞ ಕೆ.ಕೆ.ಮೊಹಮ್ಮದ್ ಅವರ ಶ್ರಮ ದೊಡ್ಡದು ಎಂದು ಶ್ಲಾಘಿಸಿದರು.

ಧರ್ಮ, ಜಾತಿ, ವರ್ಗ, ಭಾಷೆ, ಇತಿಹಾಸದ ದಾಖಲೆಗಳನ್ನು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಡುವಲ್ಲಿ ಮೊಹಮ್ಮದ್ ಯಶಸ್ವಿಯಾಗಿದ್ದಾರೆ. ‘ದೇಶ ಮೊದಲು’ ಎಂಬ ಅವರ ನಿಲುವು ಆದರ್ಶನೀಯ ಹಾಗೂ ಅನುಕರಣೀಯ. ರಾಮ ಜನ್ಮಭೂಮಿಯಂತಹ ಸಮಸ್ಯೆಗಳು ಪರಿಹಾರವಾಗಲು ಕೆ.ಕೆ.ಮೊಹಮ್ಮದ್ ಅವರಂತಹ ರಾಷ್ಟ್ರಪ್ರೇಮಿಗಳು ಕಾರಣ ಎಂದರು.

ಪಾದೂರು ಗುರುರಾಜ ಭಟ್ಟರು ಬಿಟ್ಟುಹೋದ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಅವರ ಕೃತಿಗಳನ್ನು ಹಿಂದುಳಿದ ವರ್ಗಗಳ ಇಲಾಖೆಯಿಂದ ಪ್ರಕಟ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು. ಮಂಗಳೂರು ವಿಶ್ವವಿದ್ಯಾಲದಲ್ಲಿ ಗುರುರಾಜ ಭಟ್ಟರ ಹೆಸರಿನಲ್ಲಿ ಪೀಠ ರಚನೆ ಸಂಬಂಧ ವರದಿ ಸಲ್ಲಿಸುವಂತೆ ಸೂಚಿಸುತ್ತೇನೆ ಎಂದು ಸಚಿವರು ಭರವಸೆ ನೀಡಿದರು.

ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾತನಾಡಿ, ಭೂಗರ್ಭದಲ್ಲಿ ಹುದುಗಿಹೋಗಿದ್ದ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದಿಟ್ಟು ರಾಮಮಂದಿರದ ಪರವಾಗಿ ತೀರ್ಪು ಬರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಕೆ.ಕೆ.ಮೊಹಮ್ಮದ್ ಅವರು ಅಭಿನಂದನಾರ್ಹರು. ‘ನಾನು ಭಾರತೀಯ’ ಎಂದು ಎದೆಯುಬ್ಬಿಸಿ ಹೇಳಿಕೊಳ್ಳುವ ಮೊಹಮ್ಮದ್ ಅವರಂಥವರ ಸಂಖ್ಯೆ ಹೆಚ್ಚಾಗಲಿ ಎಂದರು.

ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಶಾಸಕ ರಘುಪತಿ ಭಟ್‌, ಮಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಕೆ.ಭೈರಪ್ಪ, ಡಾ.ಪಾದೂರು ಗುರುರಾಜ ಭಟ್ ಟ್ರಸ್ಟ್‌ನ ಅಧ್ಯಕ್ಷ ಪಿ.ಶ್ರೀಪತಿ ತಂತ್ರಿ ಮಾತನಾಡಿದರು. ವಾಸುದೇವ ಭಟ್‌ ಕಾರ್ಯಕ್ರಮ ನಿರೂಪಿಸಿದರು.

‘ಮಥುರಾ, ಕಾಶಿ ದೇಗುಲಗಳ ಉತ್ಖನನ ನಡೆಯಲಿ’

ಮಥುರಾದಲ್ಲಿ ಕೃಷ್ಣನ ದೇವಸ್ಥಾನ, ಕಾಶಿಯಲ್ಲಿ ವಿಶ್ವನಾಥನ ದೇವಸ್ಥಾನಗಳಿದ್ದು ಅವುಗಳ ಉತ್ಖನನ ಕೂಡ ನಡೆಯಲಿ. ಪೂರಕ ಸಾಕ್ಷ್ಯಗಳನ್ನು ಕಲೆಹಾಕಲಿ. ಹಿಂದೂಗಳಿಗೆ ಕೃಷ್ಣ ಹಾಗೂ ವಿಶ್ವನಾಥನ ದೇವಸ್ಥಾನಗಳನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ಸಿಗುವಂತಾಗಲಿ. ಇದಕ್ಕೆ ಕೆ.ಕೆ.ಮೊಹಮ್ಮದ್ ಅವರ ಸಹಕಾರವೂ ಅಗತ್ಯ ಎಂದು ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.