ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2,000 ಎಕರೆಯಲ್ಲಿ ಭತ್ತ ಬೇಸಾಯಕ್ಕೆ ಸಿದ್ಧತೆ

ಹಡಿಲು ಭೂಮಿ ಕೃಷಿ ಆಂದೋಲನ: ತೋಡುಗಳ ಸ್ವಚ್ಛತಾ ಕಾರ್ಯಕ್ಕೆ ಚಾಲನೆ
Last Updated 19 ಏಪ್ರಿಲ್ 2021, 15:49 IST
ಅಕ್ಷರ ಗಾತ್ರ

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಡಿಲುಬಿದ್ದ ಕೃಷಿ ಭೂಮಿ ಉಳುಮೆ ಆಂದೋಲನ ಆರಂಭವಾಗಿದ್ದು, 2,000ಕ್ಕೂ ಹೆಚ್ಚು ಎಕರೆಯಲ್ಲಿ ಭತ್ತದ ಬೇಸಾಯಕ್ಕೆ ಸಿದ್ಧತೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕೃಷಿಗೆ ನೀರುಣಿಸುವ ತೋಡುಗಳ ಹೂಳು ತೆಗೆಯುವ ಕಾರ್ಯಕ್ಕೆ ಸೋಮವಾರ ಚಾಲನೆ ದೊರೆಯಿತು.

30 ಹಿಟಾಚಿ ಬಳಕೆ:

ಪರ್ಕಳ ವಾರ್ಡ್‌ನಲ್ಲಿ ತೋಡುಗಳ ಹೂಳು ತೆಗೆಯುವ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ರಘುಪತಿ ಭಟ್, ‘ಪರ್ಕಳದಲ್ಲಿ 100 ಎಕರೆ ಕೃಷಿಭೂಮಿ ಹಡಿಲು ಬಿದ್ದಿದ್ದು, ತೋಡು ಹೂಳೆತ್ತುವ ಕಾರ್ಯ ಆರಂಭಿಸಲಾಗಿದೆ. ಮುಂದೆ 30 ಹಿಟಾಚಿಗಳನ್ನು ಬಳಸಿ ಕೃಷಿ ಭೂಮಿಗೆ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗುವುದು’ ಎಂದರು.

ಭತ್ತ ಕೃಷಿಕೆ ಅಗತ್ಯವಿರುವ ಬಿತ್ತನೆ ಬೀಜದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ನೇಜಿ ಹಾಕಿದ ನಂತರ ಭೂಮಿ ಹದಗೊಳಿಸಿ, ಯಂತ್ರಗಳ ಮೂಲಕ ನಾಟಿ ಮಾಡಲಾಗುವುದು. ರಾಸಾಯನಿಕ ಬಳಸದೆ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಲು ನಿರ್ಧರಿಸಲಾಗಿದೆ ಎಂದು ಶಾಸಕರು ತಿಳಿಸಿದರು.

ಹಡಿಲುಬಿದ್ದ ಕೃಷಿ ಭೂಮಿ ಆಂದೋಲನಕ್ಕೆ ನಿರೀಕ್ಷೆಗೂ ಮೀರಿ ಸ್ಪಂದನ ವ್ಯಕ್ತವಾಗಿದೆ. ಕೃಷಿ ಮಾಡಲು ಗ್ರಾಮಸ್ಥರು ಮುಂದೆ ಬಂದಿದ್ದಾರೆ. ಅಭಿಯಾನದ ಯಶಸ್ಸಿಗೆ ಪ್ರಕೃತಿ ಹಾಗೂ ರೈತರ ಸಹಕಾರವೂ ಮುಖ್ಯ ಎಂದರು.

ಜಿಲ್ಲಾಧಿಕಾರಿ ಜಿ.ಜಗದೀಶ್ ತೋಡುಗಳ ಹೂಳು ತೆಗೆಯುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಹಡಿಲು ಭೂಮಿ ಕೃಷಿ ಭೂಮಿಯಾಗಿ ಪರಿವರ್ತನೆಯಾಗುವುದು ಅದ್ಭುತ ಪರಿಕಲ್ಪನೆ. ಉಡುಪಿ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಈ ಪರಿಕಲ್ಪನೆ ವಿಸ್ತರಣೆಯಾಗಬೇಕು. ಹಡಿಲು ಬಿದ್ದ ಭೂಮಿಯಲ್ಲಿ ಕೃಷಿ ಮಾಡಿದರೆ, ಭೂಮಿಗೆ ನೀರು ಇಂಗಿದರೆ ಕೇಂದ್ರ ಸರ್ಕಾರದ ಜಲಶಕ್ತಿ ಅಭಿಯಾನದ ಉದ್ದೇಶವೂ ಸಾಕಾರಗೊಳ್ಳಲಿದೆ ಎಂದರು.

‘ಹಡಿಲು ಬಿಟ್ಟ ಭೂಮಿ ಮಾಲೀಕರಿಗೆ ನೋಟಿಸ್‌’

ಹಡಿಲು ಭೂಮಿಯಲ್ಲಿ ಕೃಷಿ ಮಾಡದಿದ್ದರೆ ಭೂಮಿಯನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಾಗುವುದು. ಕಳೆದ ವರ್ಷ ಕೋವಿಡ್‌ ಕಾರಣಕ್ಕೆ ನೋಟಿಸ್ ನೀಡಿರಲಿಲ್ಲ. ಈ ವರ್ಷ ಹಡಿಲುಬಿದ್ದ ಭೂಮಿಯ ಮಾಲೀಕರಿಗೆ ಜಿಲ್ಲಾಡಳಿತ ನೋಟಿಸ್‌ ನೀಡಲು ತಹಶೀಲ್ದಾರ್‌ಗಳಿಗೆ ಸೂಚನೆ ನೀಡಲಾಗಿದೆ. ನೋಟಿಸ್‌ ಕೊಟ್ಟ ಬಳಿಕವೂ ಕೃಷಿ ಮಾಡದಿದ್ದರೆ ಭೂಮಿ ವಶಕ್ಕೆ ಪಡೆಯಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

‘ಕೇದಾರೋತ್ಥಾನ ಟ್ರಸ್ಟ್‌ ರಚನೆ’

ಹಡಿಲು ಭೂಮಿ ಕೃಷಿ ಆಂದೋಲನಕ್ಕಾಗಿ ‘ಕೇದಾರೋತ್ಥಾನ ಟ್ರಸ್ಟ್’ ರಚಿಸಲಾಗಿದ್ದು, ಶಾಸಕ ರಘುಪತಿ ಭಟ್‌ ಪದನಿಮಿತ್ತ ಅಧ್ಯಕ್ಷರು, 54 ಪದನಿಮಿತ್ತ ವಿಶ್ವಸ್ಥರು ಇದ್ದಾರೆ. ಕೃಷಿಗೆ ತಗಲುವ ಖರ್ಚಿಗೆ ದಾನಿಗಳಿಂದ ನೆರವು ಪಡೆಯಲಾಗುವುದು. ಜತೆಗೆ ಕೃಷಿ ಇಲಾಖೆ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ಹಾಗೂ ಸಂಘ ಸಂಸ್ಥೆಗಳು ಸಹಕಾರ ನೀಡಲಿದೆ. 19 ಗ್ರಾಮ ಪಂಚಾಯಿತಿ ಹಾಗೂ 35 ವಾರ್ಡ್‌ಗಳಲ್ಲಿ ಹಡಿಲು ಗದ್ದೆಗಳನ್ನು ಗುರುತಿಸಳಾಗುತ್ತಿದ್ದು, ಆಂದೋಲನಕ್ಕೆ ಶಾಸಕ ರಘುಪತಿ ಭಟ್ ನೇತೃತ್ವ ವಹಿಸಿದ್ದಾರೆ. ವಾರ್ಡ್‌ಗಳಲ್ಲಿ ಹಾಗೂ ಪಂಚಾಯಿತಿಗಳಲ್ಲಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆ ನಡೆಸಲಾಗುತ್ತಿದೆ.

ಈ ಸಂದರ್ಭ ಕೃಷಿ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ ನಾಯ್ಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ಸದಸ್ಯ ಮಂಜುನಾಥ್ ಮಣಿಪಾಲ್, ಮುಖಂಡರಾದ ಅಲ್ವಿನ್ ಡಿಸೋಜ, ನಿವೃತ್ತ ಮುಖ್ಯೋಪಾಧ್ಯಾಯ ಮುರಳಿ ಕಡೆಕಾರ್, ಕೃಷಿ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲ ಎಂಜಿನಿಯರ್ ಶೇಷ ಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT